ಹೊಸದಿಲ್ಲಿ: ತಿಹಾರ್ ಜೈಲಿನಲ್ಲಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಒಂದು ರೀತಿಯಾದಂತಹ ವಿಐಪಿ ಟ್ರೀಟ್ಮೆಂಟ್ ನೀಡಲಾಗುತ್ತಿದೆ.
ಕೇಜ್ರಿವಾಲ್ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ಸೋಮವಾರದಿಂದ ಆರಂಭವಾಗಿದ್ದು, ತಿಹಾರ್ ಜೈಲಿನಲ್ಲಿದ್ದಾರೆ. 14×8 ಅಳತೆಯ ಕೋಣೆಯಲ್ಲಿರುವ ಅವರನ್ನು ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರನ್ನು ಭೇಟಿಯಾಗಬಹುದಾಗಿದೆ.
ಮನೆಯಲ್ಲಿ ತಯಾರಿಸಿದ ಊಟ, ಬಾಟಲಿಗಳಲ್ಲಿ ಕುಡಿಯುವ ನೀರು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವು ಹಠಾತ್ ಕುಸಿದರೆ ಅಂಥ ಸಂದರ್ಭದಲ್ಲಿ ನೀಡಲು ಚಾಕಲೇಟ್ ಗಳನ್ನು ಪೂರೈಸಬಹುದು ಎಂದು ದೆಹಲಿ ನ್ಯಾಯಾಲಯ ಹೇಳಿದೆ.
ಮನೆಯಿಂದ ದಿಂಬುಗಳು, ಗಾದಿ ಮತ್ತು ಬೆಡ್ ಲಿನೆನ್ ಕೊಡಲಾಗಿದೆ. ಅವರು ಮಧುಮೇಹ ರೋಗಿಯಾಗಿರುವುದರಿಂದ ಮತ್ತು ದುರ್ಬಲ ರೋಗನಿರೋಧಕ ಶಕ್ತಿಯನ್ನು ಹೊಂದಿರುವ ಕಾರಣ ಅವರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ವೈದ್ಯಕೀಯ ಉಪಕರಣಗಳನ್ನು ಸಹ ಒದಗಿಸಲಾಗುತ್ತದೆ.
ಕೇಜ್ರಿವಾಲ್ ಅವರು ವಿಶೇಷ ಡಯಟ್ ಹೊಂದಿರುವುದರಿಂದ ಮನೆಯಲ್ಲಿ ಬೇಯಿಸಿದ ಆಹಾರವನ್ನು ಸಹ ನೀಡಲಾಗುತ್ತದೆ. ಸಾಮಾನ್ಯವಾಗಿ, ತಿಹಾರ್ ಜೈಲಿನಲ್ಲಿ ಇರಿಸಲಾಗಿರುವ ಖೈದಿಗಳು ಜೈಲು ನಿಯಮಗಳ ಭಾಗವಾಗಿ ಬೆಳಿಗ್ಗೆ ಮತ್ತು ಸಂಜೆ ಒಂದು ಕಪ್ ಚಹಾದ ಜೊತೆಗೆ ದಿನಕ್ಕೆ ಎರಡು ಬಾರಿ ದಾಲ್, ಸಬ್ಜಿ ಮತ್ತು ಐದು ರೊಟ್ಟಿಗಳು ಅಥವಾ ಅನ್ನವನ್ನು ಪಡೆಯುತ್ತಾರೆ. ಕೇಜ್ರಿವಾಲ್ ಅವರು ಧಾರ್ಮಿಕ ಮಹತ್ವವನ್ನು ಹೊಂದಿರುವ ತಮ್ಮ ಲಾಕೆಟ್ ಧರಿಸುವುದನ್ನು ಮುಂದುವರಿಸಬಹುದಾಗಿದೆ.
ಕೇಜ್ರಿವಾಲ್ ಅವರು ಊಟ ಮತ್ತು ಲಾಕ್-ಅಪ್ನಂತಹ ನಿಗದಿತ ಜೈಲು ಚಟುವಟಿಕೆಗಳನ್ನು ಹೊರತುಪಡಿಸಿ ದೂರದರ್ಶನವನ್ನು ವೀಕ್ಷಿಸಬಹುದು. ಸುದ್ದಿ, ಮನರಂಜನೆ ಮತ್ತು ಕ್ರೀಡೆ ಸೇರಿದಂತೆ 18- 20 ಚಾನಲ್ಗಳನ್ನು ಅನುಮತಿಸಲಾಗಿದೆ.
ಕೇಜ್ರಿವಾಲ್ ದಿನಚರಿ?
ಕೇಜ್ರಿವಾಲ್ ಮತ್ತು ತಿಹಾರ್ ಜೈಲು ಸಂಖ್ಯೆ 2ರಲ್ಲಿರುವ ಇತರ ಕೈದಿಗಳು ತಮ್ಮ ದಿನವನ್ನು 6:30ರ ಸುಮಾರಿಗೆ ಸೂರ್ಯೋದಯದೊಂದಿಗೆ ಪ್ರಾರಂಭಿಸುತ್ತಾರೆ. ಕೈದಿಗಳಿಗೆ ಅವರ ಉಪಹಾರವಾಗಿ ಚಹಾ ಮತ್ತು ಬ್ರೆಡ್ ಸಿಗುತ್ತದೆ. ಬೆಳಗಿನ ಸ್ನಾನದ ನಂತರ ಕೇಜ್ರಿವಾಲ್ ನ್ಯಾಯಾಲಯಕ್ಕೆ ಹೊರಡುತ್ತಾರೆ ಅಥವಾ ಅವರ ಕಾನೂನು ತಂಡದೊಂದಿಗೆ ಮೀಟಿಂಗ್ ನಡೆಸುತ್ತಾರೆ. ಊಟವು 10:30ರಿಂದ 11 ರವರೆಗೆ ಇರುತ್ತದೆ.
ನಂತರ ಮಧ್ಯಾಹ್ನ 3 ಗಂಟೆಯವರೆಗೆ ಕೈದಿಗಳನ್ನು ಅವರ ಸೆಲ್ಗಳಲ್ಲಿ ಲಾಕ್ ಮಾಡಲಾಗುತ್ತದೆ, ನಂತರ ಅವರಿಗೆ ಒಂದು ಕಪ್ ಚಹಾ ಮತ್ತು ಎರಡು ಬಿಸ್ಕತ್ತುಗಳು ಸಿಗುತ್ತವೆ. ಡಿನ್ನರ್ ಸಂಜೆ 5:30 ಕ್ಕೆ. ನಂತರ ರಾತ್ರಿ 7 ಗಂಟೆಗೆ ಕೈದಿಗಳನ್ನು ಕೋಣೆಗಳಿಗೆನೀಡಲಾಗುತ್ತದೆ.
ಅರವಿಂದ್ ಕೇಜ್ರಿವಾಲ್ ತಮಗೆ ಭಗವದ್ಗೀತೆ, ರಾಮಾಯಣದ ಪ್ರತಿ ಮತ್ತು ಪತ್ರಕರ್ತೆ ನೀರಜಾ ಚೌಧರಿ ಬರೆದ “How Prime Ministers Decide” ಎಂಬ ಪುಸ್ತಕವನ್ನು ಒದಗಿಸುವಂತೆ ಜೈಲು ಅಧಿಕಾರಿಗಳನ್ನು ಕೇಳಿದ್ದಾರೆ.