ಮೈಸೂರು: ಜನಸಂಖ್ಯೆಗೆ ಅನುಗುಣವಾಗಿ ಮುಸ್ಲಿಮರ ಮೀಸಲಾತಿ ಹೆಚ್ಚಿಸಬೇಕು. ಅಲ್ಲಿಯವರೆಗೂ ಸಮುದಾಯದ ಹೋರಾಟ ಮುಂದುವರಿಯಲಿದೆ ಎಂದು ಶಾಸಕ ತನ್ವಿ ಸೇರ್ ಹೇಳಿದ್ದಾರೆ.
ಮೈಸೂರು ನಗರದ ಜಗನ್ಮೋಹನ ಅರಮನೆಯಲ್ಲಿ ರಾಜ್ಯ ಸರ್ಕಾರಿ ಮುಸ್ಲಿಂ ನೌಕಕರ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಹಾಗೂ ಕರ್ನಾಟಕ ರಾಜ್ಯೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರ ನ್ಯಾಯ ಮತ್ತು ರಕ್ಷಣೆ ಒದಗಿಸಿಲ್ಲವೆಂದು ಸಮುದಾಯದ ಶೇ. 95ರಷ್ಟು ಮಂದಿ ಒಂದೇ ಪಕ್ಷಕ್ಕೆ ಮತ ಚಲಾಯಿಸಿದ್ದಾರೆ. ಬೇಡಿಕೆಗಳನ್ನು ಈಡೇರಿಸಲು ಆಗುವುದಿಲ್ಲವೆಂದರೆ ಸರ್ಕಾರ ನೇರವಾಗಿ ಹೇಳಲಿ ಎಂದರು.
ಮುಸ್ಲಿಮರಿಗಿದ್ದ ಶೇ 4ರಷ್ಟು 2 ‘ಬಿ’ ಮೀಸಲಾತಿಯನ್ನು ಹಿಂದಿನ ಬಿಜೆಪಿ ಸರ್ಕಾರ ರದ್ದುಪಡಿಸಿತ್ತು. ಆಗ ಸುಪ್ರೀಂ ಕೋರ್ಟ್ ಮುಂದಿನ ಆದೇಶದವರೆಗೂ ಮೀಸಲಾತಿಯಲ್ಲಿ ಯಾವುದೇ ಬದಲಾವಣೆ ಮಾಡದಂತೆ ತೀರ್ಪು ನೀಡಿದೆ ಎಂದರು. ಓದುವ ವಿದ್ಯಾರ್ಥಿಗಳಿಗೆ ಯಾವುದೇ ಸೌಲಭ್ಯ ಕಡಿಮೆಯಾಗಬಾರದು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ 15.9 ಲಕ್ಷ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿತ್ತು.
ಕೇಂದ್ರ ಸರ್ಕಾರ ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿವೇತನದ ತನ್ನ ಪಾಲನ್ನು ನೀಡುತ್ತಿಲ್ಲ. ಗ್ಯಾರಂಟಿ ಯೋಜನೆ ಮಾದರಿಯಲ್ಲೇ ಶಿಕ್ಷಣ, ಉದ್ಯೋಗ ಹಾಗೂ ವಸತಿಗೆ ಆದ್ಯತೆ ನೀಡಬೇಕು ಎಂದು ಅವರು ಮನವಿ ಮಾಡಿಕೊಂಡರು.
ಸರ್ಕಾರದ ಕಾಮಗಾರಿಗಳ ಗುತ್ತಿಗೆಯಲ್ಲಿ ದಲಿತರಿಗೆ ಮೀಸಲಾತಿ ನೀಡಿದಂತೆ, ಅಲ್ಪಸಂಖ್ಯಾತರಿಗೂ ನೀಡಬೇಕು. ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಯೋಜನೆಗಳ ಉದ್ದೇಶದಲ್ಲಿ ಸ್ಪಷ್ಟತೆ ಇಲ್ಲವಾಗಿದೆ. ಭೂಮಿಯೇ ಇಲ್ಲದವರಿಗೆ ‘ಗಂಗಾ ಕಲ್ಯಾಣ’ ಯೋಜನೆಯ ಉಪಯೋಗವಾದರೂ ಏನು? ಮುಸ್ಲಿಮರ ಶೇ . 50ರಷ್ಟು ಜನರು ಗ್ರಾಮೀಣ ಭಾಗದಲ್ಲಿಯೇ ಇದ್ದಾರೆ. ಶೇ. 3ಕ್ಕಿಂತಲೂ ಕಡಿಮೆ ಜನರಿಗೆ ಭೂಮಿ ಇದೆ. ಬದುಕು ಕಟ್ಟಿಕೊಳ್ಳುವುದೇ ಕಷ್ಟವಾಗಿದೆ ಎಂದು ಹೇಳಿದರು.