ಮೃಗಾಲಯಗಳು ಮನರಂಜನೆ ಜೊತೆಗೆ, ಜ್ಞಾನಮಂದಿರವಾಗಬೇಕು- ಸಚಿವ ಈಶ್ವರ್ ಖಂಡ್ರೆ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಬೆಂಗಳೂರು, ಜೂನ್,26,2024 (www.justkannada.in): ರಾಜ್ಯದ ಮೃಗಾಲಯಗಳು ವನ್ಯಜೀವಿಗಳ ಪಾಲನೆಗೆ ಹೆಸರಾಗಿದ್ದು, ಇದು ಜ್ಞಾನಮಂದಿರವೂ ಆಗಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು ಹೊರವಲಯ ಬನ್ನೇರುಘಟ್ಟದ ಜೈವಿಕ ಉದ್ಯಾನದಲ್ಲಿಂದು ದಕ್ಷಿಣ ಭಾರತದ ಮೊದಲ ಹಾಗೂ ದೇಶದ ಅತಿ ದೊಡ್ಡ ಚಿರತೆ ಸಫಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ ಅವರು, ಜೈವಿಕ ಉದ್ಯಾನಕ್ಕೆ ಬರುವ ಜನರು ವನ್ಯ ಜೀವಿಗಳನ್ನು ನೋಡಿ ಸಂತೋಷ ಪಡುತ್ತಾರೆ. ಜೊತೆಗೆ ಅವರಿಗೆ ಇಲ್ಲಿರುವ ಪ್ರತಿಯೊಂದು ಪ್ರಬೇಧದ ವೃಕ್ಷಗಳ ಬಗ್ಗೆ ತಿಳಿಸಿ ಜನರು ಕನಿಷ್ಠ 10 ಪ್ರಬೇಧದ ವೃಕ್ಷ ಗುರುತಿಸುವಂತೆ ಅವರಲ್ಲಿ ಅರಿವು ಮೂಡಿಸಬೇಕು ಎಂದರು.

ಸಂದರ್ಶಕರಿಗೊಂದು ಸಸಿ:

ಮೃಗಾಲಯಕ್ಕೆ ಬರುವ ಪ್ರತಿಯೊಬ್ಬರಿಗೂ ಪ್ರಾಣವಾಯು- ಆಮ್ಲಜನಕ ನೀಡುವ ವೃಕ್ಷಗಳ ಮಹತ್ವದ ಬಗ್ಗೆ ತಿಳಿಸಿ, ಅವರು ಮನೆಗೆ ತೆರಳುವಾಗ ಒಂದು ಸಸಿ ಖರೀದಿಸಿ ತೆಗೆದುಕೊಂಡು ಹೋಗಿ ತಮ್ಮ ಮನೆಯ ಮುಂದೆ ನೆಟ್ಟು, ಪೋಷಿಸುವಂತೆ ಪ್ರೇರೇಪಿಸಬೇಕು. ರೈತರಿಗೆ ರಿಯಾಯಿತಿ ದರದಲ್ಲಿ ಸಸಿಗಳನ್ನು ನೀಡುವ ರೀತಿಯಲ್ಲೇ ಮೃಗಾಲಯಕ್ಕೆ ಬರುವ ಸಂದರ್ಶಕರಿಗೂ ರಿಯಾಯಿತಿ ದರದಲ್ಲಿ ಸಸಿಗಳನ್ನು ಪೂರೈಸಬೇಕು ಎಂದು ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದರು.

ಆನೆ ಮರಿಗೆ ನಾಮಕರಣ:

ಬನ್ನೇರುಘಟ್ಟದಲ್ಲಿರುವ ವೇದಾ ಎಂಬ ಹೆಣ್ಣಾನೆ ಕಳೆದ ಜನವರಿ 26ರ ಗಣರಾಜ್ಯ ದಿನದಂದು ಗಂಡಾನೆ ಮರಿಗೆ ಜನ್ಮ ನೀಡಿದ್ದು, ಭಾರತ ಗಣತಂತ್ರದ ದಿನ ಹುಟ್ಟಿದ ಈ ಆನೆಗೆ ‘ಸ್ವರಾಜ್’ ಎಂದು ನಾಮಕರಣ ಮಾಡಲಾಯಿತು. ಈಶ್ವರ ಖಂಡ್ರೆ ಅವರು ಫಲಕ ಅನಾವರಣ ಮಾಡಿ ಆನೆಗೆ ಸ್ವರಾಜ್ ಎಂದು ಹೆಸರಿಟ್ಟರು.

ಆನೆ ಹಾಲುಣಿಸುವ ಕೇಂದ್ರದ ಉದ್ಘಾಟನೆ:

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ 26 ಆನೆಗಳಿದ್ದು, ಇಲ್ಲಿ ವರ್ಷಕ್ಕೆ 2ರಿಂದ 3 ಮರಿಗಳ ಜನನವಾಗುತ್ತದೆ. ಈ ಆನೆ ಮರಿಗಳಿಗೆ ಹಾಲುಣಿಸುವ ಕೇಂದ್ರವನ್ನೂ ಇಂದು ಉದ್ಘಾಟಿಸಲಾಯಿತು. ಉದ್ಯಾನದಲ್ಲಿ ಜನಿಸುವ ಆನೆಮರಿಗಳ ಪೈಕಿ ಸುಮಾರು 3 ವರ್ಷದ ಮರಿಗಳನ್ನು ಹಾಲುಣಿಸಲು ತಾಯಿಯಿಂದ ಬೇರ್ಪಡಿಸಿ, ಮಾವುತರ ಜೊತೆ ಬಾಂಧವ್ಯ ಬೆಸೆಯಲು 10 ಲಕ್ಷ ರೂ. ವೆಚ್ಚದಲ್ಲಿ ನವೀಕರಿಸಲಾಗಿರುವ ಹಾಲುಣಿಸುವ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತದೆ, ಅಲ್ಲಿ ಮಾವುತರು ಮತ್ತು ಕಾವಾಡಿಗಳು ಆನೆ ಮರಿಗಳಿಗೆ 24 ಗಂಟೆಯೂ ವಿಶೇಷ ಆರೈಕೆ ಮಾಡುತ್ತಾರೆ ಎಂದು ಈಶ್ವರ ಖಂಡ್ರೆ ಹೇಳಿದರು.

ಈ ಕೇಂದ್ರದಲ್ಲಿ ಆನೆ ಮರಿಗಳ ಮುಕ್ತ ಸಂಚಾರಕ್ಕಾಗಿ ಒಂದು ಸಣ್ಣ ಕ್ರಾಲ್ ಮತ್ತು ಮರಿಗಳ ಮೇಲೆ ನಿಗಾ ಇಡಲು ಅಸ್ತಿತ್ವದಲ್ಲಿರುವ ಆನೆ ಕಟ್ಟಡದ ಮೇಲೆ ಕಾವಾಡಿಗಳಿಗೆ ಒಂದು ಕೋಣೆಯನ್ನು ನಿರ್ಮಿಸಲಾಗಿದೆ. ಈ ಕೇಂದ್ರವನ್ನೂ ಇಂದು ಉದ್ಘಾಟಿಸಲಾಗಿದೆ ಎಂದರು.

ಚಿಟ್ಟೆ ಉದ್ಯಾನವನದಲ್ಲಿ ಶಿಶು ಆರೈಕೆ ಕೊಠಡಿ:

ಬನ್ನೇರುಘಟ್ಟ ಉದ್ಯಾನಕ್ಕೆ ಬರುವ ಸಂದರ್ಶಕರ ಪೈಕಿ, ಮಹಿಳೆಯರು, ಹಾಲುಣಿಸುವ ತಾಯಂದಿರೂ ಇರುತ್ತಾರೆ. ಹೀಗಾಗಿ ಶಿಶು ಆರೈಕೆ ಕೋಣೆಯನ್ನು ಸಹ ಇಲ್ಲಿ ನಿರ್ಮಿಸಲಾಗಿದ್ದು, ಪುಟ್ಟ ಶಿಶುಗಳು, ಅಂಬೆಗಾಲಿಡುವ ಕಂದಮ್ಮಗಳು ಮತ್ತು ಚಿಕ್ಕ ಮಕ್ಕಳ ವೈಯಕ್ತಿಕ ಅಗತ್ಯಗಳನ್ನು ಪೂರೈಸಲು ಚಿಟ್ಟೆ ಉದ್ಯಾನದಲ್ಲಿ ಶಿಶು ಆರೈಕೆ ಕೊಠಡಿ ನಿರ್ಮಿಸಲಾಗಿದ್ದು, ಇದನ್ನು ಇಂದು ಉದ್ಘಾಟಿಸಲಾಗಿದೆ. ಮುಂದಿನ ವರ್ಷದ ಡಿಸೆಂಬರ್ ಒಳಗೆ ಇನ್ನೂ ಎರಡು ಶಿಶು ಆರೈಕೆ ಕೊಠಡಿಗಳನ್ನು ಇಲ್ಲಿ ನಿರ್ಮಿಸಲಾಗುವುದು  ಎಂದು ಈಶ್ವರ ಖಂಡ್ರೆ ತಿಳಿಸಿದರು.

ಸ್ಕೈವಾಕ್ ಗೆ ಭೂಮಿಪೂಜೆ

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಸ್ಕೈವಾಕ್ ಮತ್ತು ಐದು ಪ್ರಾಣಿ ಆವರಣಗಳಿಗೆ ಇಂದು ಭೂಮಿ ಪೂಜೆ ನೆರವೇರಿಸಲಾಯಿತು. ಬನ್ನೇರುಘಟ್ಟ ಜೈವಿಕ ಉದ್ಯಾನ 1974 ರಿಂದ ಪ್ರವಾಸಿಗರಿಗೆ ವಿವಿಧ ಸೌಲಭ್ಯ ನೀಡಲಾಗುತ್ತಿದ್ದು, ಇದನ್ನು ಹೆಚ್ಚು ಆಕರ್ಷಣೀಯಗೊಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೃಗಾಲಯದಿಂದ ಚಿಟ್ಟೆ ಉದ್ಯಾನವನಕ್ಕೆ ಸಂಪರ್ಕವನ್ನು ಕಲ್ಪಿಸಲು ಸ್ಕೈ ವಾಕ್ ವಿನ್ಯಾಸಗೊಳಿಸಲಾಗಿದೆ ಈ ಸ್ಕೈವಾಕ್ ನಲ್ಲಿ ನಡಯುವ ಪ್ರವಾಸಿಗರಿಗೆ ಅರಣ್ಯ ದರ್ಶನವೂ ಆಗುತ್ತದೆ. ಹತ್ತಿರದಿಂದ ಪಕ್ಷಿಗಳನ್ನು ನೋಡಲು ಅವಕಾಶವೂ ಆಗುತ್ತದೆ.

ಎಮು ಮತ್ತು ರಿಯಾಗೆ 50 ಲಕ್ಷ ರೂ.ಗಳ ವೆಚ್ಚದಲ್ಲಿ ಹೊಸ ನೈಸರ್ಗಿಕ ಆವರಣ, 1.5 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಹಂಟಿಂಗ್ ಚೀತಾ ಆವರಣ, 1.5 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಹಮದ್ರಿಯಾಸ್ ಮತ್ತು ಆಲಿವ್ ಬಾಬೂನ್ ಆವರಣ ಮತ್ತು 1.5 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಭಾರತೀಯ ಬೂದು ತೋಳ ಆವರಣವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

ಬೃಹತ್ ಚಿರತೆ ಸಫಾರಿಗೆ ಸಚಿವ ಈಶ್ವರ ಖಂಡ್ರೆ ಚಾಲನೆ

ಹುಲಿ ಸಫಾರಿ, ಸಸ್ಯಹಾರಿ ಪ್ರಾಣಿಗಳ ಸಫಾರಿ, ಸಿಂಹ ಸಫಾರಿ, ಕರಡಿ ಸಫಾರಿ ಇರುವ ಬನ್ನೇರುಘಟ್ಟ ಉದ್ಯಾನದಲ್ಲಿ ನೂತನವಾಗಿ ನಿರ್ಮಿಸಿರುವ ಚಿರತೆ ಸಫಾರಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಚಾಲನೆ ನೀಡಿ ಮಾತನಾಡಿದರು.

ಇದು ದಕ್ಷಿಣ ಭಾರತದ ಪ್ರಥಮ ಮತ್ತು ದೇಶದಲ್ಲಿಯೇ ಅತಿ ದೊಡ್ಡ ಚಿರತೆ ಸಫಾರಿ ಆಗಿದೆ. ಪ್ರಸ್ತುತ 8  ಚಿರತೆಗಳನ್ನು ತೆರೆದ ವನ ಪ್ರದೇಶದಲ್ಲಿ ಸಫಾರಿಗೆ ಬಿಡಲಾಗಿದೆ. ಇದು ಈ ಉದ್ಯಾನದ ಮತ್ತೊಂದು ಆಕರ್ಷಣೆಯಾಗಿದ್ದು, ಪ್ರವಾಸಿಗರು ಮತ್ತು ಸಂದರ್ಶಕರನ್ನು ಸೆಳೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಈ ಚಿರತೆ ಸಫಾರಿ ಪ್ರದೇಶವು ನೈಸರ್ಗಿಕ ಬಂಡೆಗಳಿಂದ ಹಾಗೂ ಅರೆ-ಎಲೆ ಉದುರುವ ಕಾಡುಗಳಿಂದ ಕೂಡಿದೆ. ಕೇಂದ್ರ ಮೃಗಾಲಯ ಪ್ರಾಧಿಕಾರದ ಮಾರ್ಗಸೂಚಿಗಳ ಪ್ರಕಾರ, 20 ಹೆಕ್ಟೇರ್ ಪ್ರದೇಶವನ್ನು ಗುರುತಿಸಿ ರೈಲ್ವೆ ಬ್ಯಾರಿಕೇಡ್ ಹಾಕಲಾಗಿದೆ. ಒಟ್ಟು 4.5 ಕೋಟಿ ರೂ. ವೆಚ್ಚದಲ್ಲಿ ಸುರಕ್ಷಿತ ವಿನ್ಯಾಸ ರೂಪಿಸಲಾಗಿದೆ. ಈ ಇಡೀ ಪ್ರದೇಶಕ್ಕೆ 4.5 ಮೀಟರ್ ಎತ್ತರದ ಲಂಬ ಚೈನ್ ಲಿಂಕ್ ಜಾಲರಿ ಅಳವಡಿಸಲಾಗಿದ್ದು, ಎಂಎಸ್ ಶೀಟ್ ಗಳನ್ನು 1.5 ಮೀಟರ್ ಎತ್ತರವಿರುವ 30 ಡಿಗ್ರಿ ಇಳಿಜಾರಿನ ಕೋನದಲ್ಲಿ ಹಾಕುವ ಮೂಲಕ ಚಿರತೆಗಳು ಹೊರಗೆ ಬಾರದಂತೆ ಎಚ್ಚರ ವಹಿಸಲಾಗಿದೆ ಎಂದು ತಿಳಿಸಿದರು.

ಬನ್ನೇರುಘಟ್ಟ ಸುತ್ತ ಮುತ್ತ ಬೆಟ್ಟಗುಡ್ಡಗಳಿದ್ದು, ಇದು ಚಿರತೆಗಳು ವಾಸಿಸಲು ಉತ್ತಮ ತಾಣವಾಗಿದೆ. ಹೀಗಾಗಿಯೇ ಇಲ್ಲಿ ಹೆಚ್ಚಿನ ಸಂಖ್ಯೆ ಚಿರತೆಗಳೂ ಇವೆ. ಈ ಪೈಕಿ ಹೊಲ, ಗದ್ದೆಗಳಲ್ಲಿ ಹೆಣ್ಣು ಚಿರತೆಗಳು ಮರಿ ಹಾಕಿ ಹೋಗುವ ಸಂದರ್ಭದಲ್ಲಿ ಅಂತಹ ಮರಿಗಳನ್ನು ತಂದು ಉದ್ಯಾನದಲ್ಲಿ ಪಾಲನೆ ಮಾಡಲಾಗುತ್ತದೆ. ಪ್ರಸ್ತುತ ಉದ್ಯಾನದಲ್ಲಿ 14 ಚಿರತೆಗಳಿವೆ ಎಂದೂ ಮಾಹಿತಿ ನೀಡಿದರು. ಸ್ವಾಗತ ಕಮಾನನ್ನೂ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಡಾ. ಸುನೀಲ್ ಪನ್ವಾರ್, ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯ ನಿರ್ವಾಹಕ ನಿರ್ದೇಶಕ ಎ.ವಿ. ಸೂರ್ಯಸೇನ್ ಮತ್ತಿತರರು ಉಪಸ್ಥಿತರಿದ್ದರು.

Key words: entertainment, zoos, knowledge, Ishwar Khandre

Font Awesome Icons

Leave a Reply

Your email address will not be published. Required fields are marked *