ಅಡುಗೆ ಮನೆಯ ಘಮ ಹೆಚ್ಚಿಸುವ ಈ ಮೆಂತೆಯು ಹಲವು ರೀತಿಯ ಔಷಧೀಯ ಗುಣಗಳನ್ನು ಹೊಂದಿದೆ. ಮಧುಮೇಹಿಗಳಿಗೆ, ತೂಕ ಇಳಿಸುವವರಿಗೆ ಇದು ನೆಚ್ಚಿನ ಸಂಗಾತಿ. ಇವೆಲ್ಲವುಗಳ ಜೊತೆಗೆ ಕೂದಲಿನ ಆರೈಕೆಯಲ್ಲಿ ಮಹತ್ವದ ಸ್ಥಾನ ಪಡೆದಿದೆ.
ಈ ಬೀಜಗಳು ತಲೆಯ ಚರ್ಮಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸಿ, ಕೂದಲಿನ ಬುಡಕ್ಕೆ ಆಮ್ಲಜನಕದ ಸರಬರಾಜನ್ನು ಅಧಿಕಗೊಳಿಸುತ್ತವೆ. ಇದರಿಂದ ಕೂದಲಿನ ಬೆಳವಣಿಗೆಗೆ ಸಹಾಯವಾಗುತ್ತದೆ. ಮೆಂತೆಯಲ್ಲಿ ನಾರು ಮತ್ತು ಪ್ರೊಟೀನ್ ಅಂಶ ಅಧಿಕವಾಗಿದೆ. ಇವುಗಳಿಂದ ಕೂದಲು ಸದೃಢವಾಗಿ ತುಂಡಾಗುವುದು ನಿಲ್ಲುತ್ತದೆ.
ನೂರು ಗ್ರಾಂ ಮೆಂತೆ ಬೀಜಗಳಲ್ಲಿ ಸುಮಾರು 23 ಗ್ರಾಂ ಪ್ರೊಟೀನ್ ದೊರೆಯುತ್ತದೆ. ಇದಲ್ಲದೆ, ಮೆಂತೆಯಲ್ಲಿರುವ ಲೆಸಿಥಿನ್ ಎಂಬ ಅಂಶವು ಕೂದಲಿನ ಬಲವರ್ಧನೆಗೆ ಸಹಾಯಕ. ಮಾತ್ರವಲ್ಲ, ತಲೆಯ ಚರ್ಮವು ಉತ್ಪಾದಿಸುವ ತೈಲದಂಶವನ್ನು ಕಡಿಮೆ ಮಾಡಿ, ಪಿಎಚ್ ಸರಿದೂಗಿಸಲು ಮಾಡಲು ಇದರಿಂದ ಸಾಧ್ಯ. ಹಾಗಾಗಿ ತಲೆಹೊಟ್ಟನ್ನು ಕೂದಲುದುರುವುದನ್ನು ಕಡಿಮೆ ಮಾಡುತ್ತದೆ, ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತದೆ.
ಹೆಚ್ಚಿನವರು ಬಳಸುವ ವಿಧಾನವೆಂದರೆ ಮೆಂತೆಯ ಪೇಸ್ಟ್ ಕೂದಲಿಗೆ ಹಚ್ಚುವುದು. ರಾತ್ರಿ ಮಲಗುವಾಗ ಎರಡು ದೊಡ್ಡ ಚಮಚ ಮೆಂತೆಯನ್ನು ನೀರಿಗೆ ಹಾಕಿ. ಬೆಳಗಿನವರೆಗೆ ಅದು ಚೆನ್ನಾಗಿ ನೆನೆದು, ಉಬ್ಬಿರುತ್ತದೆ. ಅದನ್ನು ಮೊಸರಿನೊಂದಿಗೆ ರುಬ್ಬಿ ಕೂದಲಿಗ ಬುಡ ಸೇರಿದಂತೆ ಎಲ್ಲೆಡೆ ಲೇಪಿಸಿ. ಅರ್ಧ ತಾಸಿನ ನಂತರ ಉಗುರು ಬಿಸಿಯಾದ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಇದರಿಂದ ಒಳ್ಳೆಯ ಕಂಡೀಶನರ್ ದೊರೆತು, ಹೊಟ್ಟು ತೊಲಗಿ, ಕೂದಲು ನಳನಳಿಸುತ್ತದೆ.
ಅರ್ಧ ಕಪ್ ತೆಂಗಿನ ಎಣ್ಣೆಗೆ 2 ದೊಡ್ಡ ಚಮಚ ಮೆಂತೆಯ ಬೀಜಗಳನ್ನು ಹಾಕಿ, ಕುದಿಸಿ. ಈ ಎಣ್ಣೆ ಆರಿ ತಣ್ಣಗಾದ ಮೇಲೆ ಗಾಜಿನ ಬಾಟಲಿಗೆ ತುಂಬಿಸಿಡಿ. ಈ ಎಣ್ಣೆಯನ್ನು ರಾತ್ರಿ ಮಲಗುವ ಒಂದು ತಾಸಿ ಮೊದಲು ತಲೆಗೆ ಹಾಕಿ ಲಘುವಾಗಿ ಮಸಾಜ್ ಮಾಡಿ. ಬೆಳಗ್ಗೆ ತಲೆಸ್ನಾನ ಮಾಡಿ. ಇದರಿಂದ ಇಡೀ ರಾತ್ರಿ ಈ ಎಣ್ಣೆಯಲ್ಲಿ ನೆನೆದ ತಲೆಯ ಚರ್ಮ ಮತ್ತು ಕೂದಲ ಬುಡಗಳು ಸೊಂಪಾಗಿ ಸತ್ವಗಳನ್ನು ಹೀರಿಕೊಳ್ಳುತ್ತವೆ.
2 ಚಮಚ ಮೆಂತೆಯನ್ನು ದೊಡ್ಡ ಗ್ಲಾಸ್ ನೀರಿಗೆ ಸೇರಿಸಿ ಚೆನ್ನಾಗಿ ಕುದಿಸಿ. ನೀರು ಮುಕ್ಕಾಲು ಗ್ಲಾಸಿನಷ್ಟು ಆಗುವವರೆಗೆ ಕುದಿಸಿ. ಇದು ಬೆಚ್ಚಗಿರುವಾಗಲೇ ತಲೆಯೆಲ್ಲ ನೆನೆಯುವಂತೆ ಹಚ್ಚಿಕೊಳ್ಳಿ. ಅರ್ಧ ತಾಸಿನ ನಂತರ ತಲೆಸ್ನಾನ ಮಾಡಿ. ಇದು ಸಹ ಕೂದಲಿಗೆ ಬೇಕಾದ ಪೋಷಕಾಂಶಗಳನ್ನು ನೀಡಿ, ಹೊಳಪು ಹೆಚ್ಚಿಸುತ್ತದೆ. ಕೂದಲು ಉದುರುವುದನ್ನು ತಡೆ, ಬೆಳವಣಿಗೆಗೆ ನೆರವಾಗುತ್ತದೆ.
2 ಚಮಚ ಮೆಂತೆಯ ಪುಡಿಯನ್ನು ಅಲೊವೇರಾ ಜೆಲ್ ಜೊತೆಗೆ ಮಿಶ್ರ ಮಾಡಿ. ಇದನ್ನು ತಲೆಗೆಲ್ಲ ಲೇಪಿಸಿ. ಅರ್ಧ ತಾಸಿನ ನಂತರ ತಲೆಸ್ನಾನ ಮಾಡಿ. ಇದರಿಂದ ತಲೆಯ ಚರ್ಮದ ನವೆ, ಕಿರಿಕಿರಿಯನ್ನು ಹೋಗಲಾಡಿಸಿ, ಕೂದಲಿಗೆ ಹೊಳಪು ನೀಡಬಹುದು.