ಮೈಸೂರಿನಲ್ಲಿ ಮಾ.6ರಿಂದ ಬಹುರೂಪಿ ನಾಟಕೋತ್ಸವ – News Kannada (ನ್ಯೂಸ್ ಕನ್ನಡ)

ಮೈಸೂರು: ಮೈಸೂರಿನ ರಂಗಾಯಣ ವತಿಯಿಂದ ಮಾ.6 ರಿಂದ 11ರವರೆಗೆ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ನಡೆಯಲಿದೆ.

ಈ ಕುರಿತಂತೆ ನಾಟಕೋತ್ಸವ ಸಂಚಾಲಕ ಪ್ರೊ.ಎಚ್.ಎಸ್.ಉಮೇಶ್ ಮಾಹಿತಿ  ನೀಡಿ  ವಿಶ್ವಗುರು ಬಸವಣ್ಣನವರ ಇವ ನಮ್ಮವ ಇವ ನಮ್ಮವ ಎಂಬ ವಚನದ ಸಾಲಿನ ಆಶಯ ಶೀರ್ಷಿಕೆಯೊಂದಿಗೆ ನಡೆಯುವ ಬಹುರೂಪಿಯಲ್ಲಿ ಈ ಬಾರಿ ಬಹುಭಾಷಾ ನಾಟಕೋತ್ಸವ, ರಾಷ್ಟ್ರೀಯ ವಿಚಾರಸಂಕಿರಣ, ಚಲನಚಿತ್ರೋತ್ಸವ, ಜನಪದ ಸಂಭ್ರಮ, ಪುಸ್ತಕ ಮೇಳ, ಕರಕುಶಲ ಮೇಳ ಮತ್ತು ಪ್ರಾತ್ಯಕ್ಷಿಕೆ, ದೇಸೀ ಆಹಾರ ಮೇಳ, ಚಿತ್ರಕಲಾ ಪ್ರದರ್ಶನ, ಚಾರಿತ್ರಿಕ ದಾಖಲೆಗಳ ಪ್ರದರ್ಶನ, ವಚನಾಂತರAಗ ಆಯೋಜಿಸಲಾಗಿದೆ ಎಂದು ಹೇಳಿದರು.

ಮಾ.5ರ ಸಂಜೆ 5.30ಕ್ಕೆ ಜನಪದ ಸಂಭ್ರಮವನ್ನು ಕಿಂದರಿ ಜೋಗಿ ವೇದಿಕೆಯಲ್ಲಿ ಹಿರಿಯ ಜಾನಪದ ಗಾಯಕ ಡಾ.ಮಳವಳ್ಳಿ ಮಹದೇವಸ್ವಾಮಿ ಉದ್ಘಾಟಿಸುವರು. ಜಾನಪದ ವಿದ್ವಾಂಸೆ ಡಾ.ಜಯಲಕ್ಷ್ಮಿ  ಸೀತಾಪುರೆ ಅತಿಥಿಯಾಗುವರು. ಬಹುರೂಪಿ ಚಲನಚಿತ್ರೋತ್ಸವವನ್ನು ಮಾ.7ರ ಬೆಳಗ್ಗೆ 10.30ಕ್ಕೆ ಶ್ರೀರಂಗದಲ್ಲಿ ವನ್ಯಜೀವಿ ಛಾಯಾಗ್ರಾಹಕ ಡಾ.ಲೋಕೇಶ್ ಮೊಸಳೆ ಉದ್ಘಾಟಿಸುವರು ಎಂದರು.

ಹಾಗೆಯೇ, ಬಹುರೂಪಿ ನಾಟಕೋತ್ಸವವನ್ನು ಮಾ.7ರಂದು ಸಂಜೆ 4.30ಕ್ಕೆ ವನರಂಗದಲ್ಲಿ ಸಾಹಿತಿ ಜಯಂತ್ ಕಾಯ್ಕಿಣಿ ಉದ್ಘಾಟಿಸುವರು. ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಶಿವರಾಜ್ ಎಸ್.ತಂಗಡಗಿ, ಸಂಸದ ಪ್ರತಾಪ್ ಸಿಂಹ, ಶಾಸಕ ಕೆ ಹರೀಶ್ ಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಡಾ. ಅಜಯ್ ನಾಗಭೂಷಣ್, ನಿರ್ದೇಶಕಿ ಡಾ. ಧರಣಿದೇವಿ ಮಾಲಗತ್ತಿ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಭಾಗವಹಿಸುವರು ಎಂದು ಅವರು ತಿಳಿಸಿದರು.

ಇವ ನಮ್ಮವ ಇವ ನಮ್ಮವ ಕುರಿತು ರಾಷ್ಟ್ರೀಯ  ವಿಚಾರ ಸಂಕಿರಣವನ್ನು ಮಾ.9 ಮತ್ತು 10ರಂದು ಆಯೋಜಿಸಿದ್ದು, ಮಾ.9ರ ಬೆಳಗ್ಗೆ 10ಕ್ಕೆ ಬಿ.ವಿ.ಕಾರಂತ ರಂಗಚಾವಡಿಯಲ್ಲಿ ಚಿಂತಕ ಪ್ರೊ.ಎಚ್.ಎಸ್.ಶಿವಪ್ರಕಾಶ್ ಉದ್ಘಾಟಿಸುವರು. ಲೇಖಕ ಪ್ರೊ.ಓ.ಎಲ್.ನಾಗಭೂಷಣಸ್ವಾಮಿ ಅಧ್ಯಕ್ಷತೆ ವಹಿಸುವರು. ವಚನ ಸಾಹಿತ್ಯ ಹಾಗೂ ರಂಗಭೂಮಿ ಕುರಿತು ಎರಡೂ ದಿನಗಳ ಗೋಷ್ಠಿಗಳಲ್ಲಿ ನಾಡಿನ ಹೆಸರಾಂತ ವಿದ್ವಾಂಸರು ತಮ್ಮ ವಿಚಾರ ಮಂಡಿಸಲಿದ್ದಾರೆ. ಮಾ.10ರ ಸಂಜೆ 4ಕ್ಕೆ ಚಿಂತಕ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಸಮಾರೋಪ ನುಡಿಗಳನ್ನಾಡುವರು ಎಂದು ವಿವರಿಸಿದರು.

ಬಹುರೂಪಿ ರಾಷ್ಟ್ರೀಯ  ನಾಟಕೋತ್ಸವದ ಟಿಕೆಟ್ ದರ 100 ರೂ ನಿಗದಿ ಮಾಡಿದ್ದು, ಬುಕ್ ಮೈ ಶೋನಲ್ಲಿ ಆನ್ ಲೈನ್ ಮೂಲಕ ಬುಕ್ ಮಾಡಬಹುದಾಗಿದೆ. ಶೇ.40 ಟಿಕೆಟ್‌ಗಳನ್ನು ಆನ್‌ಲೈನ್, ಶೇ.40 ಟಿಕೆಟ್‌ಗಳನ್ನು ರಂಗಾಯಣ ಆವರಣದಲ್ಲಿ ಆಫ್ ಲೈನ್‌ನಲ್ಲಿ ಮಾರಾಟ ಮಾಡಲಾಗುತ್ತದೆ. ಉಳಿದ ಶೇ.20 ಟಿಕೆಟ್‌ಗಳನ್ನು ನಾಟಕ ಪ್ರದರ್ಶನ ದಿನದಂದು ಮಾರಾಟ ಮಾಡಲಾಗುತ್ತದೆ.

Font Awesome Icons

Leave a Reply

Your email address will not be published. Required fields are marked *