ಮೈಸೂರು: ಅಳಿವಿನಂಚಿನಲ್ಲಿರುವ ಪುನುಗು ಬೆಕ್ಕು ಆಗಾಗ್ಗೆ ಮೈಸೂರು ನಗರ ವ್ಯಾಪ್ತಿಯಲ್ಲಿ ವಾಹನಗಳಿಗೆ ಸಿಕ್ಕಿ ಸಾವನ್ನಪ್ಪುತ್ತಿರುವ ಪ್ರಕರಣಗಳು ಆಗೊಮ್ಮೆ ಈಗೊಮ್ಮೆ ನಡೆಯುತ್ತಲೇ ಇದೆ. ಬೇಸಿಗೆ ಸಮಯವಾದ ಕಾರಣ ನೀರು ಮತ್ತು ಆಹಾರ ಅರಸಿ ಬರುವ ವೇಳೆ ರಸ್ತೆ ದಾಟುವ ಸಂದರ್ಭ ವಾಹನಗಳಿಗೆ ಸಿಲುಕಿ ಸಾವನ್ನಪ್ಪುತ್ತಿವೆ.
ಚಾಮುಂಡಿಬೆಟ್ಟ ವ್ಯಾಪ್ತಿಯ ಅರಣ್ಯ ಮತ್ತು ತಪ್ಪಲು ಪ್ರದೇಶಗಳ ಕುರುಚಲು ಕಾಡುಗಳಲ್ಲಿ ಅಡ್ಡಾಡುವ ಪುನುಗು ಬೆಕ್ಕುಗಳು ಕೆಲವೊಮ್ಮೆ ಜನರ ಕಣ್ಣಿಗೂ ಕಾಣಿಸುವುದಿದೆ. ತಮ್ಮ ಪಾಡಿಗೆ ತಾವು ಎಂಬಂತೆ ಬದುಕುವ ಈ ನಿರುಪದ್ರವಿ ಪ್ರಾಣಿಗಳು ಇತ್ತೀಚೆಗೆ ವಾಹನಕ್ಕೆ ಸಿಕ್ಕಿ ಸಾಯುತ್ತಿರುವುದು ಆತಂಕಕಾರಿಯಾಗಿದೆ.
ಇದೀಗ ಮೈಸೂರು ನಗರದ ಹೊರವಲಯದ ಪೊಲೀಸ್ ಬಡಾವಣೆಯ ಸಮೀಪದ ರಿಂಗ್ ರಸ್ತೆಯಲ್ಲಿ ಸೋಮವಾರ ಪುನುಗುಬೆಕ್ಕಿನ ಕಳೇಬರ ಪತ್ತೆಯಾಗಿದ್ದು, ವಾಹನಕ್ಕೆ ಡಿಕ್ಕಿಯಾಗಿ ಸಾವನ್ನಪ್ಪಿರುವುದು ಗೋಚರಿಸಿದೆ. ವಾಹನಕ್ಕೆ ಅಡ್ಡಬಂದ ಪುನುಗು ಬೆಕ್ಕು ಜೀವ ಚೆಲ್ಲಿದೆ. ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಲೇ ಇರುವುದು ಬೇಸರದ ಸಂಗತಿಯಾಗಿದೆ.
ಈಗ ಬೇಸಿಗೆಯ ದಿನವಾಗಿರುವುದರಿಂದ ಮಧ್ಯಾಹ್ನ ಅಥವಾ ಸಂಜೆ ವೇಳೆಯಲ್ಲಿ ಕಾಡು ಪ್ರಾಣಿಗಳು ನೀರನ್ನು ಅರಸಿಕೊಂಡು ನಾಡಿನತ್ತ ಬರುವುದು ಸಾಮಾನ್ಯವಾಗಿದ್ದು, ಅರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲಿ ತೆರಳುವ ವಾಹನ ಸವಾರರು ಈ ಬಗ್ಗೆ ಎಚ್ಚರ ವಹಿಸಿ ಕಾಡು ಪ್ರಾಣಿಗಳು ವಾಹನಕ್ಕೆ ಸಿಲುಕಿ ಸಾಯುವುದನ್ನು ತಪ್ಪಿಸಬೇಕಾಗಿದೆ.