ಮೈಸೂರು: ಮೈಸೂರು-ಕುಶಾಲನಗರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಯೋಜನೆಗೆ ಬೇಕಾದ ಭೂ ಸ್ವಾದೀನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿರುವುದರಿಂದ ಮುಂಬರುವ ಫೆಬ್ರವರಿ ತಿಂಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದು ಸಂಸದ ಪ್ರತಾಪ್‌ಸಿಂಹ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, 93 ಕಿ.ಮೀ.ಗಳ ಮೈಸೂರು-ಕುಶಾಲನಗರ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ನಾಲ್ಕು ಪ್ಯಾಕೇಜ್‌ಗಳಲ್ಲಿ ನಡೆಯಲಿದೆ. ಪ್ಯಾಕೇಜ್-೫ರಲ್ಲಿ ಬರುವ ಶ್ರೀರಂಗಪಟ್ಟಣದ ಬಿ ಅಗ್ರಹಾರದಿಂದ ಗುಂಗ್ರಾಲ್ ಛತ್ರದವರೆಗಿನ ರಸ್ತೆಗೆ ಸಂಬಂಧಿಸಿದ ಶೇ.98ರಷ್ಟು ಭೂಸ್ವಾದೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಕಿರಿಜಾಜಿ-ರಟ್ನಹಳ್ಳಿವರೆಗಿನ ಪ್ಯಾಕೇಜ್-4ರಲ್ಲಿ ಶೇ.78ರಷ್ಟು, ಪ್ಯಾಕೇಜ್-3ಗೆ ಬರುವ ಹರವೆ ಮಲ್ಲಿರಾಜಪಟ್ಟಣ-ಬೆಳತೂರುವರೆಗೆ ಶೇ.54 ರಷ್ಟು, ಪ್ಯಾಕೇಜ್-2 ವ್ಯಾಪ್ತಿಗೆ ಬರುವ ಬಸವನಹಳ್ಳಿ-ಹೆಮ್ಮಿಗೆ ವರೆಗೆ ಶೇ.87ರಷ್ಟು ಭೂಸ್ವಾದೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಹೀಗಾಗಿ ಫೆಬ್ರವರಿ ಮೊದಲ ವಾರದಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.
ಈ ಚತುಷ್ಪಥಕ್ಕೆ ಅಲ್ಲಲ್ಲಿ ಪ್ರಮುಖವಾದ ಸ್ಥಳಗಳಲ್ಲಿ ಪ್ರವೇಶ ಹಾಗೂ ನಿರ್ಗಮನ ರಸ್ತೆಗಳನ್ನು ಮಾಡಬೇಕಿದೆ. ಸ್ಲಿಪ್ ರೋಡ್‌ಗಳನ್ನು ಮಾಡಲು ಭೂ ಸ್ವಾದೀನ ಮಾಡಿರಲಿಲ್ಲ. ಹಾಗಾಗಿ ಇದೀಗ ಅದಕ್ಕಾಗಿ 84ಹೆಕ್ಟೇರ್ ಜಾಗವನ್ನು ಸ್ವಾಧೀನ ಪಡಿಸಿಕೊಳ್ಳುವ ಕೆಲಸ ನಡೆಯುತ್ತಿದೆ. ನಾನಾ ಇಲಾಖೆಗಳ ಅನುಮತಿ ಸೇರಿದಂತೆ ಎಲ್ಲಾ ರೀತಿಯ ಕೆಲಸ ಪೂರ್ಣಗೊಳಿಸಿ ಈ ತಿಂಗಳೊಳಗೆ ಎನ್‌ಎಚ್‌ಎಐಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭ ಎನ್‌ಎಚ್‌ಎಐನ ಭೂ ಸ್ವಾದೀನ ಅಧಿಕಾರಿ ಶಿವೇಗೌಡ ಹಾಗೂ ಇನ್ನಿತರ ಅಧಿಕಾರಿಗಳು ಇದ್ದರು.