ಮೈಸೂರು: ಮೈಸೂರು ವಿಶ್ವವಿದ್ಯಾಲಯದ 104ನೇ ಘಟಿಕೋತ್ಸವದಲ್ಲಿ ಮಾಜಿ ಸಿಎಂ ಎಸ್.ಎಂ.ಕೃಷ್ಣ, ಸುದರ್ಶನ ನರಸಿಂಹ ಕ್ಷೇತ್ರದ ಪೀಠಾದಿಪತಿ ಪ್ರೊ.ಭಾಷ್ಯಂ ಸ್ವಾಮೀಜಿ, ಬೆಂಗಳೂರಿನ ಗೋಕುಲ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷ ಎಂ.ಆರ್.ಸೀತಾರಾಂ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆಯಲ್ಲದೆ, 32,249 ವಿದ್ಯಾರ್ಥಿಗಳಿಗೆ ವಿವಿಧ ಪದವಿ ಪ್ರದಾನ ಮಾಡಲಾಗುವುದು ಎಂದು ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ತಿಳಿಸಿದ್ದಾರೆ.
ಕ್ರಾರ್ಫರ್ಡ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.3ರಂದು ಬೆಳಗ್ಗೆ 10 ಗಂಟೆಗೆ ಘಟಿಕೋತ್ಸವ ನಡೆಯಲಿದ್ದು, ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸುವರು. ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಘಟಿಕೋತ್ಸವ ಭಾಷಣ ಮಾಡುವರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಉಪಸ್ಥಿತರಿರುವರು ಎಂದು ತಿಳಿಸಿದರು.
ಡಾಕ್ಟರೇಟ್ ನೀಡುತ್ತಿರುವ ಗಣ್ಯರ ಬಗ್ಗೆ ಮಾಹಿತಿ ನೀಡಿದ ಅವರು, ಎಸ್.ಎಂ.ಕೃಷ್ಣ 1999ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ಮಹಾರಾಷ್ಟ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಭಾಷ್ಯಂ ಸ್ವಾಮೀಜಿ ಸರ್ಕಾರಿ ಮಹಾರಾಜ ಸಂಸ್ಕೃತ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದು, ಸುದರ್ಶನ ಕ್ಷೇತ್ರದ ಪೀಠಾಧಿಪತಿಯಾಗಿ ಸುದರ್ಶನ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ.
ಎಂ.ಆರ್.ಸೀತಾರಾಂ ಅವರು, 2012ರಲ್ಲಿ ವಿಧಾನಪರಿಷತ್ ಸದಸ್ಯರಾಗಿ ನಾಮನಿರ್ದೇಶನಗೊಂಡು ಕಾಂಗ್ರೆಸ್ ಸರ್ಕಾರದಲ್ಲಿ ಯೋಜನೆ, ಅಂಕಿಅಂಶ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಜತೆಗೆ ಗೋಕುಲ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷರಾಗಿ, ಎಂಎಸ್ ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಎಂ.ಎಸ್.ರಾಮಯ್ಯ ಪಾಲಿಟೆಕ್ನಿಕ್ ಮತ್ತು ಎಂ.ಎಸ್.ರಾಮಯ್ಯ ಹಾಸ್ಟೆಲ್‌ಗಳ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಘಟಿಕೋತ್ಸವದಲ್ಲಿ 19,992 ಮಹಿಳೆಯರು (ಶೇ.61.99) ಹಾಗೂ 12,257 ಪುರುಷರು (ಶೇ.38) ಸೇರಿದಂತೆ ಒಟ್ಟು 32,249 ವಿದ್ಯಾರ್ಥಿಗಳು ವಿವಿಧ ಪದವಿ ಪಡೆದುಕೊಳ್ಳಲಿದ್ದಾರೆ. 45 ಮಹಿಳೆಯರು, 55 ಪುರುಷರು ಸೇರಿದಂತೆ ಒಟ್ಟು 100 ಮಂದಿಗೆ ವಿವಿಧ ವಿಷಯಗಳಲ್ಲಿ ಪಿಎಚ್‌ಡಿ ಪ್ರದಾನ ಮಾಡಲಾಗುವುದು.
252 ವಿದ್ಯಾರ್ಥಿಗಳು 436 ಪದಕಗಳು, 266 ನಗದು ಬಹುಮಾನ ಪಡೆದುಕೊಂಡಿದ್ದಾರೆ. ಅವರಲ್ಲಿ 174 ಮಹಿಳೆಯರೇ ಆಗಿದ್ದಾರೆ. ಎಲ್ಲ ವಿಭಾಗದಲ್ಲೂ ಮಹಿಳೆಯರೇ ಮೇಲುಗೈ ಸಾಧಿಸಿದ್ದು, 4,039 ಮಹಿಳೆಯರು (ಶೇ65.73) ಸೇರಿದಂತೆ 6,144 ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಗೆ, 15,910 ಮಹಿಳೆಯರು (ಶೇ 61.17) ಸೇರಿದಂತೆ 26,009 ವಿದ್ಯಾರ್ಥಿಗಳು ಸ್ನಾತಕ ಪದವಿಗೆ ಅರ್ಹರಾಗಿದ್ದಾರೆ ಎಂದು ತಿಳಿಸಿದರು.
ಎಂ.ಎಸ್ಸಿ ಕೆಮಿಸ್ಟ್ರಿ ವಿಷಯದಲ್ಲಿ ಮೇಘನಾ.ಎಚ್.ಎಸ್ 15 ಚಿನ್ನದ ಪದಕ ಹಾಗೂ 5 ಬಹುಮಾನಗಳನ್ನು ಪಡೆದಿದ್ದು, ಎಂ.ಎ ಕನ್ನಡ ವಿಷಯದಲ್ಲಿ ವಿ.ತೇಜಸ್ವಿನಿ 10 ಚಿನ್ನದ ಪದಕ ಮತ್ತು 4 ಬಹುಮಾನ ಪಡೆದುಕೊಂಡಿದ್ದಾರೆ. ಎಂ.ಎಸ್ಸಿ ಗಣಿತದಲ್ಲಿ ಡಿ.ದರ್ಶನ್ 5 ಚಿನ್ನದ ಪದಕ, 3 ಬಹುಮಾನ, ಬಿಎ ವಿಭಾಗದಲ್ಲಿ ಎಂ.ಸುಮಾ 5 ಚಿನ್ನದ ಪದಕ, 3 ಬಹುಮಾನ, ಬಿ.ನಂದೀಶ 4 ಚಿನ್ನ ಹಾಗೂ 10 ಬಹುಮಾನ, ಬಿ.ಕಾಂ.ನಲ್ಲಿ ವೈ.ವೈ.ಸಿಂಧು ಒಂದು ಚಿನ್ನದ ಪದಕ ಹಾಗೂ 2 ಬಹುಮಾನ ಪಡೆದಿದ್ದಾರೆ.
ಬಿ.ಇಡಿ.ಯಲ್ಲಿ ಎಂ.ಮಾನಸಾ ಹಾಗೂ ಕೆ.ರಂಜಿತಾ ತಲಾ 2 ಚಿನ್ನದ ಪದಕ, 2 ನಗದು ಬಹುಮಾನ, ಎಂಬಿಎ ಅಗ್ರಿ ಬ್ಯುಸಿನೆಸ್‌ನಲ್ಲಿ ಲಿಖಿತಾ ಎಸ್. 5 ಚಿನ್ನದ ಪದಕ, ಎಂ.ಕಾಂ.ನಲ್ಲಿ ಪಿ.ಬಿ. ಭಾಗ್ಯಶ್ರೀ ಭಟ್ 4 ಚಿನ್ನ, 2 ಬಹುಮಾನ ತಮ್ಮದಾಗಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.