ಮೊದಲು ನಮ್ಮ ರೈತರ ಬೆಳೆಗಳಿಗೆ ನೀರು ಹರಿಸಿ, ಬೆಳೆ ಸಂರಕ್ಷಿಸಿ: ಸಿಎಂ ಸಿದ್ದರಾಮಯ್ಯ – Just Kannada | Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್

ಮೈಸೂರು, ಆಗಸ್ಟ್ 28, 2023(www.justkannada.in): ಕಟ್ಟು ಪದ್ದತಿಯಲ್ಲಿ ನೀರು ಹರಿಸುವುದನ್ನು ಬಿಟ್ಟು, ರೈತರ ಬೆಳೆಗಳಿಗೆ ಅಗತ್ಯವಾದ ನೀರನ್ನು ಹರಿಸಿ, ರೈತರ ಬೆಳೆಗಳನ್ನು ಸಂರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್‌ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರ ಹಿತ ರಕ್ಷಣೆ ಮುಖ್ಯವಾಗಿದ್ದು ನಮ್ಮ ಬೆಳೆಗಳನ್ನು ಉಳಿಸಿಕೊಳ್ಳಬೇಕು. ಕೆಆರ್‌ಎಸ್ ನಲ್ಲಿ 113 ಅಡಿ ಇತ್ತು ಈಗ 102 ಅಡಿ ಇದೆ. ಮೊದಲು ನಮ್ಮ ರೈತರ ಭೂಮಿಗೆ ನೀರು ಹರಿಸಿ, ನಂತರ ಬೇರೆಯವರಿಗೆ ನೀರು ಹರಿಸಲು ಕ್ರಮ ವಹಿಸಿ ಎಂದು ಸೂಚಿಸಿದರು.

ಕಾವೇರಿ ನೀರಾವರಿ ನಿಗಮದ ಮುಖ್ಯ ಅಭಿಯಂತರರಾದ ವೆಂಕಟೇಶ್ ಸಭೆಗೆ ಮಾಹಿತಿ ನೀಡಿ, ಮೈಸೂರು ಜಿಲ್ಲೆಗೆ ಕೆ ಆರ್ ಎಸ್, ಕಬಿನಿ, ಹಾರಂಗಿಯಿಂದ ನೀರನ್ನು ರೈತರಿಗೆ ನೀಡಲಾಗುತ್ತಿದೆ. ನೀರಾವರಿ ಸಲಹಾ ಸಮಿತಿಯಿಂದ ಕೆ ಆರ್ ಎಸ್, ಕಬಿನಿ, ಹಾರಂಗಿಯ ನೀರಿನ ಸಂಗ್ರಹದ ಸಾಮರ್ಥ್ಯದ ಮೇಲೆ ಕಟ್ಟು ಪದ್ದತಿಯಲ್ಲಿ/ಅರೆ ಬೇಸಾಯ ಪದ್ದತಿಯಲ್ಲಿ ನೀರು ಬಿಟ್ಟಿದ್ದೇವೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಆನ್ ಅಂಡ್ ಆಫ್‌ನಲ್ಲಿ ನೀರು ಬಿಡಲು ನೀರಾವರಿ ಸಲಹಾ ಸಮಿತಿ(ಐಸಿಸಿ)ಯಲ್ಲಿ ತಿರ್ಮಾನ ತೆಗೆದುಕೊಳ್ಳಲಾಗಿದೆ. ಇದು ಸರಿಯಾದದ್ದಲ್ಲ. ಸಂಕಷ್ಟ ಸೂತ್ರ ಇದ್ದಾಗ ಮಾತ್ರ ಆನ್ ಅಂಡ್ ಆಫ್‌ನಲ್ಲಿ ನೀರು ಬಿಡಬೇಕು. ಈಗ ಕರ್ನಾಟಕ ಮತ್ತು ತಮಿಳುನಾಡಿನ ಎರಡು ಕಮಿಟಿಯಲ್ಲಿ ಸಂಕಷ್ಟ ಸೂತ್ರದಂತೆ ಎಷ್ಟು ನೀರು ಬಿಡಬೇಕು ಎಂದು ನಿರ್ಧಾರ ಆಗುತ್ತದೆ. ಮೊದಲು ನಮ್ಮ ರೈತರು ಹಾಗೂ ಇಲ್ಲಿನ ಬೆಳೆಗಳ ರಕ್ಷಣೆಯ ಬಗ್ಗೆ ಗಮನಹರಿಸಿ ಎಂದು ಅವರು ಸೂಚಿಸಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚಂದ್ರಶೇಖರ್ ಅವರು ಮಾಹಿತಿ ನೀಡಿ ವಾರ್ಷಿಕ ವಾಡಿಕೆಯಂತೆ ಇಲ್ಲಿಯವರೆಗೆ 495.1 ಮೀ.ಮೀ ಮಳೆ ಆಗಬೇಕಿತ್ತು, ಆದರೆ 405.7 ಮೀ.ಮೀ ಮಳೆ ಆಗಿದೆ. ಶೇ.18 ರಷ್ಟು ಮಳೆ ಕೊರತೆ ಆಗಿದೆ. ಏಪ್ರಿಲ್ ತಿಂಗಳಲ್ಲಿ ಮಳೆ ಕಡಿಮೆಯಾಗಿದ್ದು, ಜಿಲ್ಲೆಯಲ್ಲಿ ಶೇ.58 ರಷ್ಟು ಬಿತ್ತನೆ ಆಗಿದೆ. ಕಳೆದ ವರ್ಷ 72 ರಷ್ಟು ಭಿತ್ತನೆ ಆಗಿತ್ತು. ಮೈಸೂರು ಜಿಲ್ಲೆಯಲ್ಲಿ ಬಿತ್ತನೆ ಪ್ರದೇಶದಲ್ಲಿ 3.98 ಲಕ್ಷ ಬಿತ್ತನೆಯ ಗುರಿ ಇಟ್ಟು ಕೊಳ್ಳಲಾಗಿದ್ದು 2.33 ಲಕ್ಷ ಎಕರೆ ಬಿತ್ತನೆಯಾಗಿದೆ. ಈ ವರ್ಷ ಮಳೆ ಕೊರತೆಯಿಂದ ಇಳುವರಿ ಕಡಿಮೆ ಬರುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದ ಮುಖ್ಯಮಂತ್ರಿಗಳು ರಾಜ್ಯದಲ್ಲಿ ಈ ಬಾರಿ ಮಳೆ ಕೊರತೆಯಾಗಿದ್ದು ಬರಗಾಲ ಎಂದು ಘೋಷಣೆ ಮಾಡಬೇಕಿದೆ. ರೈತರು ತಮ್ಮ ಜಮೀನಿನಲ್ಲಿ ಇರುವ ಬೆಳೆಗಳನ್ನು ಕಾಪಾಡಿಕೊಳ್ಳಲು ಕೃಷಿ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ಮಾಹಿತಿ ನೀಡಬೇಕು. ರೈತರೊಂದಿಗೆ ಅಧಿಕಾರಿಗಳು ನೇರ ಸಂಪರ್ಕ ಇಟ್ಟುಕೊಳ್ಳಬೇಕು ಎಂದು ಸೂಚನೆ ನೀಡಿದರು.

ಕೃಷಿ ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡಿ ರೈತರಿಗೆ ಪರ್ಯಾಯ ಬೆಳೆಗಳನ್ನು ಬೆಳೆಯಲು ಅರಿವು ಮೂಡಿಸಬೇಕು. ಬೆಳೆಗಳಿಗೆ ಯಾವ ಯಾವ ರೋಗಗಳು ಬಂದಿದೆ ಎಂಬುದನ್ನು ಕೃಷಿ ಅಧಿಕಾರಿಗಳು ಪರಿಶೀಲನೆ ನಡೆಸಿ, ರೋಗ ಹೋಗಲಾಡಿಸಲು ಯಾವ ಔಷಧಿ ಸಿಂಪಡಿಸಬೇಕು ಎಂಬ ಮಾಹಿತಿಯನ್ನು ಕಾಲ ಕಾಲಕ್ಕೆ ನೀಡಬೇಕು ಎಂದರು.
ಬಿತ್ತನೆ ಬೀಜ ವಿತರಣೆಯಲ್ಲಿ ಯಾವುದೇ ಕೊರತೆ ಆಗಬಾರದು. ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಬೆಳೆಗಳನ್ನು ಬೆಳೆಯಲು ರೈತರಿಗೆ ಮಾಹಿತಿ ನೀಡಿ ಉತ್ತೇಜನ ನೀಡಬೇಕು. ಬೆಳೆ ವಿಮೆ ಮಾಡಿಸಲು ರೈತರಿಗೆ ಮಾಹಿತಿ ನೀಡಿ. ರೈತರ ಜೊತೆ ಗೌರವಯುತವಾಗಿ ಅಧಿಕಾರಿಗಳು ನಡೆದುಕೊಳ್ಳಬೇಕು. ರೈತ ಸಂಪರ್ಕ ಕೇಂದ್ರಗಳು ರೈತರಿಗೆ ಅಗತ್ಯ ಮಾಹಿತಿಗಳನ್ನು ನೀಡಬೇಕು. ಅಧಿಕಾರಿಗಳು ಡೈರಿ ಬರೆಯುವ ಅಭ್ಯಾಸ ಇಟ್ಟುಕೊಳ್ಳಬೇಕು ಎಂದು ಸೂಚಿಸಿದರು.
ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ಅಧಿಕಾರಿಗಳು ರೈತರಿಗೆ ಅಗತ್ಯ ಮಾಹಿತಿ ನೀಡಿ ಅವರಿಗೆ ಸಿಗಬಹುದಾದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಬೇಕು. ಜಿಲ್ಲೆಯಲ್ಲಿ ಈ ವರ್ಷ 14 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬAಧ 6 ಜನರಿಗೆ ಪರಿಹಾರ ವಿತರಣೆ ಬಾಕಿ ಇದೆ.. ಆತ್ಮ ಹತ್ಯೆ ಮಾಡಿಕೊಂಡಿರುವ ಎಲ್ಲಾ ರೈತರಿಗೆ ಕೂಡಲೇ ಪರಿಹಾರ ವಿತರಣೆ ಮಾಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಪಶುಸಂಗೋಪನೆ ಇಲಾಖೆಯ ಉಪನಿರ್ದೇಶಕರು ಸಭೆಗೆ ಮಾಹಿತಿ ನೀಡಿ, ಚರ್ಮ ಗಂಟು ರೋಗಕ್ಕೆ ಈಗಾಗಲೇ ಎರಡು ಡೋಸ್ ಲಸಿಕೆ ಈಗ ನೀಡಲಾಗಿದೆ. ವಿವಿಧ ಕಾರಣಗಳಿಂದ 329 ಜಾನುವಾರುಗಳು ಸಾವಾಗಿದ್ದು, 205 ಪ್ರಕರಣಗಳಿಗೆ ಪರಿಹಾರ ನೀಡಲಾಗಿದೆ. ಇನ್ನುಳಿದ ಪ್ರಕರಣಗಳಿಗೆ ಅನುದಾನ ಈಗ ಬಂದಿದ್ದು, ಪರಿಹಾರ ನೀಡಲು ಕ್ರಮವಹಿಸಲಾಗಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಜಿಲ್ಲೆಯಲ್ಲಿ ಸಾವನ್ನಪ್ಪಿರುವ ಜಾನುವಾರುಗಳ ಪರಿಹಾರ ವಿತರಣೆ ಸಂಪೂರ್ಣವಾಗಿ ವಿತರಣೆ ಆಗಬೇಕು. ಕುರಿ, ಮೇಕೆ, ಹಸುಗಳ ಸಾವಿಗೆ ಪರಿಹಾರ ತಕ್ಷಣ ನೀಡಬೇಕು. ಬರ ಇರುವುದರಿಂದ ಮೇವಿನ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಮೇವಿನ ಬಿತ್ತನೆ ಬೀಜಗಳ ವಿತರಣೆ ಮಾಡಬೇಕು ಎಂದ ಅವರು 400 ಪಶು ವೈದ್ಯರು ಹಾಗೂ 250 ಸಹಾಯಕರನ್ನು ನೇಮಕಾತಿ ಮಾಡಲಾಗುತ್ತಿದೆ. ಇದರಿಂದ ಪಶು ಸಂಗೋಪನಾ ಇಲಾಖೆಯಲ್ಲಿ ವೈದ್ಯರ ಹಾಗೂ ಸಿಬ್ಬಂದಿ ಕೊರತೆ ತುಂಬಲಿದೆ ಎಂದು ಅವರು ತಿಳಿಸಿದರು.

ಕೆ.ಎಂ.ಎಫ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಅವರು ಹಾಲಿನ ದರ 3 ರೂ ಹೆಚ್ಚಿಸಿದ್ದು ಇದನ್ನು ಸಂಪೂರ್ಣ ರೈತರಿಗೆ ನೀಡಲಾಗುತ್ತಿದೆ. ಇದರಿಂದ ಹಾಲಿನ ಉತ್ಪಾದನೆಯೂ ಹೆಚ್ಚಳ ಆಗಿದೆ. ಹಾಲು ಒಕ್ಕೂಟಗಳು ಅನಗತ್ಯವಾಗಿ ಹೆಚ್ಚಿನ ಹುದ್ದೆಗಳನ್ನು ನೇಮಕಾತಿ ಮಾಡಿಕೊಂಡಿದ್ದು, ಇದರಿಂದ ನಷ್ಟ ಉಂಟಾಗುತ್ತಿದೆ ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಸಭೆಗೆ ಮಾಹಿತಿ ನೀಡಿ, ಮೈಸೂರು ಜಿಲ್ಲೆಯಲ್ಲಿ 88 ಸಾವಿರ ಹೆಕ್ಟರ್ ತೋಟಗಾರಿಕೆ ಪ್ರದೇಶವಿದೆ. ಪ್ರತಿ ವರ್ಷ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಬಂದ ನಂತರ 3 ಸಾವಿರ ಎಕರೆ ಪ್ರದೇಶ ಹೆಚ್ಚಾಗುತ್ತಿದೆ. ತೋಟಗಾರಿಕೆ ಬೆಳೆಗಳಿಗೆ ರೋಗ ತಡೆಗಟ್ಟುವ ಸಂಬಂಧ ಅರಿವು ಮೂಡಿಸುವ ಕಾರ್ಯಕ್ರಮ ಮಾಡಬೇಕು. ಹುಳಗಳ ಉಪಟಳ ಕಡಿಮೆ ಮಾಡಲು ಪರೋಪಜೀವಿ ಬಿಡಲಾಗುತ್ತಿದೆ. ಔಷಧಿಗಳನ್ನು ಬೇರುಗಳ ಮೂಲಕ ಉಪಚರಿಸಲಾಗುತ್ತಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.
ಈ ಸಂಬಂಧ ಮುಖ್ಯಮಂತ್ರಿಗಳು ಮಾತನಾಡಿ, ರೈತರಿಗೆ ಅನುಕೂಲವಾಗುವಂತೆ ಕೆಲಸ ಮಾಡಿ. ತಕ್ಷಣವೇ ವಿಜ್ಞಾನಿಗಳ ಜೊತೆ ಚರ್ಚಿಸಿ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸಿ. ರಾಜ್ಯದ ತೋಟಗಾರಿಕೆ ಬೆಳೆಗಳಲ್ಲಿ ಶೇ.25 ರಷ್ಟು ತೆಂಗು ಬೆಳೆ ಇದೆ. ರಾಮನಗರ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ತೆಂಗುಗಳಿಗೆ ಕೀಟಬಾಧೆ ಜಾಸ್ತಿಯಾಗುತ್ತಿದೆ. ತೆಂಗಿಗೆ ಯಾವುದೇ ತೊಂದರೆಯಾಗದAತೆ ಇಲಾಖೆಯವರು ಕ್ರಮವಹಿಸಬೇಕು. ಜೊತೆಗೆ ಮೀನು ಮರಿಗಳ ಸಾಕಾಣಿಕೆಗೆ ಹೆಚ್ಚಿನ ಉತ್ತೇಜನ ನೀಡಬೇಕು. ರೈತರು ಆರ್ಥಿಕವಾಗಿ ಸಬಲರಾಗಲು ಕೃಷಿ ಜೊತೆಗೆ ಉಪ ಕಸುಬುಗಳನ್ನು ಕೈಗೊಳ್ಳಲು ಪ್ರೋತಾಹಿಸಿ ಎಂದು ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆ ಸಚಿವರು ಹಾಗೂ ಮೈಸೂರು ಉಸ್ತುವಾರಿ ಸಚಿವರಾದ ಡಾ ಹೆಚ್.ಸಿ ಮಹದೇವಪ್ಪನವರು ಮಾತನಾಡಿ, ಕೃಷಿ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಒಟ್ಟುಗೂಡಿ ಕಡಿಮೆ ನೀರನ್ನು ಆಶ್ರಯಿಸುವ ಬೆಳೆಗಳನ್ನು ಬೆಳೆಯುವಂತೆ ರೈತರಿಗೆ ಮಾಹಿತಿ ನೀಡಿ ಪ್ರೇರೇಪಿಸಬೇಕು. ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸಬೇಕು ಎಂದು ತಿಳಿಸಿದರು.
ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರಾದ ಕೆ. ವೆಂಕಟೇಶ್ ಮಾತನಾಡಿ, ಪಿರಿಯಾಪಟ್ಟಣ ತಾಲ್ಲೂಕಿನ ಕೆರೆಗಳಲ್ಲಿ ಹೂಳು ತುಂಬಿಕೊಂಡಿದ್ದು ಮೊದಲು ಕೆರೆಗಳ ಹೂಳು ಎತ್ತಿ ನಂತರ ನೀರು ತುಂಬಿಸುವ ಕೆಲಸ ಆಗಬೇಕು ಎಂದರು.

ಮೈಸೂರು ಮತ್ತು ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಮಾತನಾಡಿ, ನರೇಗಾ ಯೋಜನೆಯಡಿ ಜಿಲ್ಲೆಯ ಕೆರೆಗಳ ಹೂಳೆತಿ,್ತ ಕೆರೆ ಏರಿ ಬಂಡು ಕಟ್ಟುವ ಕೆಲಸವನ್ನು ಸತತವಾಗಿ 3 ವರ್ಷಗಳಿಂದ ಮಾಡಲಾಗುತ್ತಿದೆ. ಮೈಸೂರು ಜಿಲ್ಲೆಯಲ್ಲಿ ಸುಮಾರು 2500 ಕೆರೆಗಳು ಇವೆ. ಈ ಕೆರೆಗಳಿಗೆ ಮೀನು ಮರಿಗಳನ್ನು ಬಿಟ್ಟು ಮೀನು ಉತ್ಪಾದನೆ ಮಾಡಬೇಕು ಎಂದರು.

ತೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ನಾಮ ನಿರ್ದೇಶಿತ ಸದಸ್ಯರಾದ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಜಿಲ್ಲೆಯ ಕೆರೆಗಳನ್ನು ಪೂರ್ಣ ಪ್ರಮಾಣದಲ್ಲಿ ತುಂಬಿಸಿಲ್ಲ. ಮೊದಲು ಕೆರೆಗಳಿಗೆ ನೀರನ್ನು ತುಂಬಿಸಿ, ಇದರಿಂದ ಅಂತರ್ಜಲ ಹೆಚ್ಚಾಗುತ್ತದೆ. ಜನ ಜಾನುವಾರುಗಳಿಗೆ ಹಾಗೂ ಕುಡಿಯುವ ನೀರಿನ ಪೂರೈಕೆಗೆ ಅನುಕೂಲವಾಗುತ್ತದೆ. ಜಿಲ್ಲೆಯಲ್ಲಿ ಪಶು ವೈದ್ಯರ ಕೊರತೆಯಿದ್ದು, ಒಂದು ವರ್ಷದಿಂದ ವರುಣಾ ಪಶು ಆಸ್ಪತ್ರೆಯಲ್ಲಿ ಪಶು ವೈದ್ಯರ ಕೊರತೆ ಇದೆ ಎಂದು ತಿಳಿಸಿದರು.

ಸಭೆಯಲ್ಲಿ ವಿಧಾನಸಭಾ ಸದಸ್ಯರಾದ ತನ್ವೀರ್ ಸೇಠ್, ಅನಿಲ್ ಕುಮಾರ್.ಸಿ, ಡಿ.ರವಿಶಂಕರ್, ಜಿ.ಡಿ ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ್, ಕೆ.ಹರೀಶ್ ಗೌಡ, ವಿಧಾನ ಪರಿಷತ್ತಿನ ಸದಸ್ಯರಾದ ಮರಿತಿಬ್ಬೆ ಗೌಡ, ಹೆಚ್.ವಿಶ್ವನಾಥ್, ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಜಿಲ್ಲಾಧಿಕಾರಿಗಳಾದ ಡಾ.ಕೆ.ವಿ.ರಾಜೇಂದ್ರ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಮ್.ಗಾಯತ್ರಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Font Awesome Icons

Leave a Reply

Your email address will not be published. Required fields are marked *