ನವದೆಹಲಿ: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ನಿರ್ಮಾಣಗೊಂಡಿರುವ ದೇಶದ ಮೊದಲ ಹಿಂದೂ ದೇಗುಲವನ್ನು ಪ್ರಧಾನಿ ನರೇಂದ್ರ ಮೋದಿ ಫೆ.14ರಂದು ಉದ್ಘಾಟಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಫೆ.13-14ರಂದು ಯುಎಇಗೆ ಭೇಟಿ ನೀಡಲಿದ್ದಾರೆ.
ಯುಎಇನ ಬಿಎಪಿಎಸ್ ಸ್ವಾಮಿ ನಾರಾಯಣ ಸಂಸ್ಥೆಯು ಅಬುಧಾಬಿಯಲ್ಲಿ ಬೃಹತ್ ಹಿಂದೂ ದೇವಸ್ಥಾನ ನಿರ್ಮಿಸಿದೆ. ದೇಗುಲ 27 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿದ್ದು, 108 ಅಡಿ ಎತ್ತರ, 262 ಅಡಿ ಉದ್ದ ಮತ್ತು 180 ಅಡಿ ಅಗಲವಿದೆ.
ಸ್ವಾಮಿನಾರಾಯಣ , ಅಕ್ಷರ- ಪುರುಷೋತ್ತಮ, ರಾಧಾ – ಕೃಷ್ಣ, ರಾಮ ಸೀತೆ, ಲಕ್ಷ್ಮಣ, ಹನುಮಂತ, ಶಿವ – ಪಾರ್ವತಿ, ಗಣೇಶ, ಕಾರ್ತಿಕೇಯ, ಪದ್ಮಾವತಿ – ವೆಂಕಟೇಶ್ವರ, ಜಗನ್ನಾಥ ಮತ್ತು ಅಯ್ಯಪ್ಪನ ಮೂರ್ತಿಗಳನ್ನು ಈ ದೇವಸ್ಥಾನದಲ್ಲಿ ಪೂಜಿಸಲಾಗುತ್ತದೆ.
ಈ ಭೇಟಿ ವೇಳೆ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಮೋದಿ ಮಾತುಕತೆ ನಡೆಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪ್ರಕಟಿಸಿದೆ.