ಬೆಂಗಳೂರು: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ‘ಯುವನಿಧಿ’ ಯೋಜನೆಗೆ ಶಿವಮೊಗ್ಗದಲ್ಲಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಇಂದಿನಿಂದಲೇ ಅರ್ಹ ಅಭ್ಯರ್ಥಿಗಳ ಖಾತೆಗೆ ಯುವನಿಧಿ ಯೋಜನೆಯ ಹಣ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ.
ಕಳೆದ ಡಿಸೆಂಬರ್ 26ರಂದು ಸಿಎಂ ‘ಯುವನಿಧಿ’ ಯೋಜನೆಯ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಿದ್ದರು. ಪದವಿ, ಡಿಪ್ಲೊಮಾ ಶಿಕ್ಷಣ ಪಡೆದು 6 ತಿಂಗಳಿನಿಂದ ಉದ್ಯೋಗ ದೊರೆಯದಿದ್ದರೆ, ಗರಿಷ್ಠ 2 ವರ್ಷದವರೆಗೆ ಪದವೀಧರರಿಗೆ 3 ಸಾವಿರ ರೂಪಾಯಿ ಹಾಗೂ ಡಿಪ್ಲೊಮಾ ಪಡೆದವರಿಗೆ 1,500 ರೂಪಾಯಿ ನಿರುದ್ಯೋಗ ಭತ್ಯೆ ಸಿಗಲಿದೆ.
ಯುವಜನತೆಯ ಉಜ್ವಲ ಭವಿಷ್ಯಕ್ಕಾಗಿ ರಾಜ್ಯ ಸರ್ಕಾರದ 5 ನೇ ಗ್ಯಾರಂಟಿ ಯೋಜನೆಯಾದ ‘ಯುವನಿಧಿ’ ಯೋಜನೆಗೆ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು 2022-23 ರಲ್ಲಿ ಪದವಿ, ಡಿಪ್ಲೊಮಾ ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು https://sevasindhugs.karnataka.gov.in ಗೆ ಭೇಟಿ ನೀಡಿ ಅಥವಾ ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರಗಳಲ್ಲಿ ಯೋಜನೆಗೆ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು.