ಯೋಗ ಜೀವನದ ಅವಿಭಾಜ್ಯ ಅಂಗವಾಗಬೇಕು : ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ಪುಷ್ಪ

ಮೈಸೂರು.ಜೂನ್ 15,2024 (www.justkannada.in):  ಯೋಗವನ್ನು ಕೇವಲ ಒಂದು ದಿನ ಮಾತ್ರ ಮಾಡಿದರೆ ಸಾಲದು ಇದೊಂದು ಜೀವನದ ಅವಿಭಾಜ್ಯ ಅಂಗವಾಗಬೇಕು ಎಂಬುದು ಆಯುಷ್ಯ ಇಲಾಖೆಯ ಮೂಲ ಉದ್ದೇಶ ಎಂದು ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ಪುಷ್ಪ ಅವರು ತಿಳಿಸಿದರು.

ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ , ಶ್ರೀ ಪತಂಜಲಿ ಯೋಗ ಶಿಕ್ಷಣ ಸಂಸ್ಥೆ, ಎಸ್ಪಿವೈಎಸ್ಎಸ್ ಮೈಸೂರು ಇವರ ಸಹಯೋಗದಲ್ಲಿ ನಡೆದ  ಯೋಗೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಡಾ.ಪುಷ್ಪ  ಅವರು ಮಾತನಾಡಿದರು.

ಹತ್ತನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾವಿಯಾಗಿ  ಜೂನ್ 20 ರವರೆಗೆ ಯೋಗೋತ್ಸವ ಕಾರ್ಯಕ್ರಮವನ್ನು ಆಯುಷ್ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದೆ. ಯೋಗದ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು ಎಂಬ  ಉದ್ದೇಶದಿಂದ ವಿವಿಧ ವಿದ್ಯಾರ್ಥಿ ನಿಲಯಗಳಲ್ಲಿ ಹಾಗೂ ಎಲ್ಲಾ ತಾಲೂಕುಗಳಲ್ಲಿ ಯೋಗ ತರಬೇತಿಯನ್ನು ನೀಡಲಾಗುತ್ತಿದೆ ಎಂದರು.

2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಇಂದು ಎಸ್ಪಿವೈಎಸ್ಎಸ್ ವತಿಯಿಂದ ಯೋಗ ತರಬೇತಿಯನ್ನು ಪಡೆದು ಜೂನ್ 21ರಂದು ನಡೆಯುವ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪಾಲ್ಗೊಂಡು ಯೋಗ ಮಾಡಲಿದ್ದಾರೆ. ಯೋಗದ ಅರಿವನ್ನು ಮೂಡಿಸುವ ಹಿನ್ನೆಲೆಯಲ್ಲಿ ಇಂದು ಯೋಗೋತ್ಸವ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದ್ದೇವೆ ಎಂದು ಹೇಳಿದರು.

ಭಾರತ್ ಸ್ಕೌಟ್ ಮತ್ತು ಗೈಡ್ಸ್ ನ ಜಿಲ್ಲಾ ಮುಖ್ಯ ಆಯುಕ್ತ ವಿಶ್ವನಾಥ್ ಅವರು ಮಾತನಾಡಿ, ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಇಂದು ಪೂರ್ವಭಾವಿ ಯೋಗಭ್ಯಾಸವು ಬಹಳ ಯಶಸ್ವಿಯಾಗಿ ನಡೆದಿದೆ. ಜೂನ್ 21 ಮಹತ್ವ ದಿನ. ಭಾರತದಿಂದ ಆರಂಭವಾದ ಯೋಗವನ್ನು ಇಂದು ಪ್ರಪಂಚಾದ್ಯಂತ ಯೋಗ ದಿನವನ್ನು ಆಚರಣೆ ಮಾಡುತ್ತಿದ್ದಾರೆ. ಯೋಗದಿಂದ ಬಹಳ ಉಪಯೋಗವಿದೆ ಹಾಗಾಗಿ ಎಲ್ಲರೂ ಪ್ರತಿನಿತ್ಯ ಯೋಗಾಭ್ಯಾಸ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಜಂಟಿ ಕಾರ್ಯದರ್ಶಿ ಬಿ.ಕೆ ಬಸವರಾಜು, ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಜಮೀಲ್, ನಿವೃತ್ತ ಕೆಎಎಸ್ ಅಧಿಕಾರಿ ರವಿಕುಮಾರ್, ಡಾ.ಯತೀಶ್ ಸತ್ಯನಾರಾಯಣ್ ಸೇರಿದಂತೆ ಆಯುಷ್ ಇಲಾಖೆಯ ಅಧಿಕಾರಿಗಳು ಹಾಗೂ ಯೋಗ ತರಬೇತಿದಾರರು ಉಪಸ್ಥಿತರಿದ್ದರು.

Key words: Yoga, integral part, life, Dr. Pushpa, mysore

The post ಯೋಗ ಜೀವನದ ಅವಿಭಾಜ್ಯ ಅಂಗವಾಗಬೇಕು : ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ಪುಷ್ಪ appeared first on Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

Font Awesome Icons

Leave a Reply

Your email address will not be published. Required fields are marked *