ಕೆ.ಆರ್.ಪೇಟೆ: ತಾಲೂಕಿನ ಐಚನಹಳ್ಳಿ ಬಳಿಯಿರುವ ಫೇವರಿಚ್ ಮೇಗಾ ಫುಡ್ ಪ್ಯಾಕ್ಟರಿ ಬಳಿಯ ನಾಲ್ಕು ಕೋಟಿ ರೂ ಅಂದಾಜು ವೆಚ್ಚದ ನಾಲ್ಕು ಪಥದ ರಸ್ತೆ ನಿರ್ಮಾಣ ಕಾಮಗಾರಿಗೆ ಪೂರ್ಣ ಪ್ರಮಾಣದ ಬಿಲ್ ಪಾವತಿಯಾಗಿದ್ದರೂ ರಸ್ತೆ ನಿಮಾಣ ಕಾರ್ಯ ಅರ್ಧದಲ್ಲಿಯೇ ನಿಂತಿದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಅಪೂರ್ಣ ರಸ್ತೆಯನ್ನು ಪೂರ್ಣಗೊಳಿಸುವಂತೆ ತಾಲೂಕು ಬಿಜೆಪಿ ಮುಖಂಡರಾದ ಭಾರತೀಪುರ ಪುಟ್ಟಣ್ಣ ಹಾಗೂ ಬೂಕನಕೆರೆ ಮಧುಸೂಧನ್ ಒತ್ತಾಯಿಸಿದ್ದಾರೆ.
ತಾಲ್ಲೂಕಿನ ಬೂಕನಕೆರೆ ಹೋಬಳಿಯ ಐಚನಹಳ್ಳಿ ಬಳಿ ಇರುವ ಫೇವರಿಚ್ ಮೆಗಾ ಫುಡ್ ಪಾರ್ಕ್ ಬಳಿ ಮೈಸೂರು ಮುಖ್ಯ ರಸ್ತೆಯಿಂದ ಬಣ್ಣೇನಹಳ್ಳಿಗೆ ಹೋಗುವ ರಸ್ತೆಯಲ್ಲಿ 4ಪಥದ ಚತುಷ್ಪಥ ರಸ್ತೆ ನಿರ್ಮಾಣ ಮಾಡಲು ಕಳೆದ ಎರಡು ವರ್ಷಗಳ ಹಿಂದೆ ಒಂದೇ ರಸ್ತೆಗೆ ಒಮ್ಮೆ 2 ಕೋಟಿ ಹಾಗೂ ಮತ್ತೊಮ್ಮೆ 2 ಕೋಟಿಯಂತೆ ಒಟ್ಟು ನಾಲ್ಕು ಕೋಟಿ ಹಣ ಬಳಕೆ ಮಾಡಲಾಗಿದೆ.
ನಿರ್ಮಾಣ ಕಾಮಗಾರಿ ಗುತ್ತಿಗೆಯನ್ನು ಭೂ ಸೇನೆ ಪಡೆದಿದೆ. ಸುಮಾರು 1.10 ಕಿ.ಮೀ ಉದ್ದದ ಚತುಷ್ಪಥ ರಸ್ತೆಗೆ ಯೋಜನಾ ರೂಪುರೇಷೆಯ ಪ್ರಕಾರ ರಸ್ತೆಯ ಎರಡೂ ಬದಿಯಲ್ಲಿಯೂ ಸೇವಾ ರಸ್ತೆ ಹಾಗೂ ಕಾಂಕ್ರೀಟ್ ಚರಂಡಿಯನ್ನು ನಿರ್ಮಿಸಬೇಕು. ಆದರೆ ರಸ್ತೆ ನಿರ್ಮಾಣ ಮಾತ್ರ ಆಗಿಲ್ಲ. ಕಳೆದ ಒಂದು ವರ್ಷದ ಹಿಂದೆ ರಸ್ತೆ ನಿರ್ಮಾಣದ ಹೆಸರಿನಲ್ಲಿ ಸುರಿದ ದಪ್ಪ ದಪ್ಪ ಜಲ್ಲಿಗಳು ಹಾಗೆ ಇದ್ದು ಜಲ್ಲಿಗಳ ನಡುವೆ ಗಿಡಗಳು ಬೆಳೆಯುತ್ತಿವೆ.
ರಸ್ತೆಯ ಬದಿಯಲ್ಲಿ ಸೇವಾ ರಸ್ತೆಯ ಹೆಸರಿನಲ್ಲಿ ಮಣ್ಣಿನ ರಸ್ತೆ ತೋರಿಸಿದ್ದರೂ ರಸ್ತೆಗೆ ಆಗಮನದ ಭಾಗದಿಂದಾಗಲೀ ಅಥವಾ ನಿರ್ಗಮನ ಭಾಗದಿಂದಾಗಲೀ ವಾಹನಗಳು ಬಂದು ಸೇರಲು ಸಂಪರ್ಕ ರಸ್ತೆಯೇ ಇರುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಆಗಮನ ಮತ್ತು ನಿರ್ಗಮನ ಸಂಪರ್ಕವಿಲ್ಲದೇ ನಾಲ್ಕು ಪಥದ ರಸ್ತೆ ಮತ್ತು ಇದಕ್ಕೆ ಲಗತ್ತಾಗಿ ಸೇವಾ ರಸ್ತೆ ನಿರ್ಮಿಸಿರುವುದಾಗಿ ಈಗಾಗಲೇ ಸಂಪೂರ್ಣ 4 ಕೋಟಿ ಮೊತ್ತದ ಬಿಲ್ ಅನ್ನು ಇಲಾಖಾ ವತಿಯಿಂದ ಕೈಗೊಂಡು ಕ್ಲೈಮ್ ಮಾಡಿದ್ದು ರಸ್ತೆ ಕಾಮಗಾರಿ ಪೂರ್ಣಗೊಳಿಸದೆ ಸರ್ಕಾರಿ ಹಣವನ್ನು ಲೂಟಿ ಮಾಡಲಾಗಿದೆ.
ನಿರ್ಮಾಣ ಮಾಡಿರುವ ರಸ್ತೆಯ ಸ್ಥಳ ಪರಿವೀಕ್ಷಣೆ ಮಾಡಲಾಗಿ ಎರಡೂ ಬದಿಯಲ್ಲಿ ಸೇವಾ ರಸ್ತೆಯೇ ಇಲ್ಲ, ಕನಿ? ಪಕ್ಷ ರೈತರ ಎತ್ತಿನ ಗಾಡಿಗಳು ಓಡಾಡಲೂ ಸಹ ರಸ್ತೆ ಯೋಗ್ಯವಾಗಿಲ್ಲ, ಈ ರಸ್ತೆಯಲ್ಲಿ ನಿತ್ಯ ಕನಿಷ್ಟ 20-30 ದ್ವಿಚಕ್ರ ವಾಹನಗಳೂ ಸಹ ಸಂಚರಿಸುವುದಿಲ್ಲ. ಸಾರ್ವಜನಿಕ ಸಾರಿಗೆ ಅಂತೂ ಇಲ್ಲವೇ ಇಲ್ಲ, ಇನ್ನು ರಸ್ತೆಯ ಗುಣಮಟ್ಟವನ್ನು ನೋಡುವುದಾದಲ್ಲಿ ಒಂದು ಭಾಗದಲ್ಲಿ ರಸ್ತೆಯ ಮೇಲೆ ಒಂದು ಪದರ ದಪ್ಪ ಜಲ್ಲಿಯನ್ನು ಹರಡಿ ಹಾಗೇ ಕೈಬಿಡಲಾಗಿದ್ದು, ದನಕರುಗಳು ಓಡಾಡಿದರೂ ಸಹ ದನಕರುಗಳ ಕಾಲಿಗೆ ಕಲ್ಲು ಚುಚ್ಚಿ ಗಾಯಗೊಳ್ಳುವ ಸ್ಥಿತಿಯಲ್ಲಿದೆ, ಕಿಂಚಿತ್ತೂ ಸಾರ್ವಜನಿಕ ಸಂಚಾರಕ್ಕೆ ಯೋಗ್ಯವಿಲ್ಲದ, ಅನಾವಶ್ಯಕವಾದ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಕೈಗೊಂಡಿರುವ ಕಾಮಗಾರಿಯಲ್ಲಿ ಅಂದಾಜುಪಟ್ಟಿಯಲ್ಲಿ ಅಳವಡಿಸಿಕೊಂಡಿರುವ ಯಾವೊಂದು ಐಟಂಗಳನ್ನೂ ಸಹ ಪರಿಪೂರ್ಣವಾಗಿ ನಿರ್ವಹಿಸದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಈ ಸಂಬಂಧವಾಗಿ ತಾವು ಈಗಾಗಲೇ ಲೋಕಾಯುಕ್ತರಲ್ಲಿ ದೂರನ್ನು ದಾಖಲಿಸಿದ್ದು ಸದರಿ ಕಾಮಗಾರಿಯಲ್ಲಿ ಭಾರಿ ಪ್ರಮಾಣದ ಅಕ್ರಮ ಎಸಗಲಾಗಿದೆ. 4 ಕೋಟಿ ಮೊತ್ತದ ಕಾಮಗಾರಿಯಲ್ಲಿ ಕೇವಲ ಶೇಕಡ 10 ರಿಂದ 15ರಷ್ಟು ಮಾತ್ರ ಹಣ ಖರ್ಚಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಉಳಿದಂತೆ ಶೇಕಡ 85ರಷ್ಟು ಹಣವನ್ನು ಲಪಟಾಯಿಸಲಾಗಿದ್ದು, ಅಕ್ರಮದ ಬಗ್ಗೆ ಸೂಕ್ತ ತನಿಖೆ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.