ರಾಜ್ಯದಲ್ಲಿ ಅಪಾರ ಮಳೆಹಾನಿ: ಕೂಡಲೇ 5,000 ಕೋಟಿ ರೂ. ಬಿಡುಗಡೆಗೆ ಆರ್.ಅಶೋಕ್ ಆಗ್ರಹ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಬೆಂಗಳೂರು, ಅಕ್ಟೋಬರ್‌, 21, 2024 (www.justkannada.in): ರಾಜ್ಯದಲ್ಲಿ ಪ್ರವಾಹದಿಂದ ಅಪಾರ ಹಾನಿ ಉಂಟಾಗಿದ್ದು, ರಾಜ್ಯ ಸರ್ಕಾರ ಕೂಡಲೇ ಸಭೆ ಕರೆದು 5,000 ಕೋಟಿ ರೂ. ಬಿಡುಗಡೆ ಮಾಡಲಿ. ಜೊತೆಗೆ ಬೆಂಗಳೂರಿನಲ್ಲಿ ಪರಿಹಾರ ಕಾರ್ಯಾಚರಣೆಗೆ 1,000 ಕೋಟಿ ರೂ. ಬಿಡುಗಡೆ ಮಾಡಲಿ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹಿಸಿದರು.

ಸಿಲ್ಕ್‌ ಬೋರ್ಡ್‌ ವೃತ್ತದ ಬಳಿ ಮಳೆ ಹಾನಿ ಪರಿಶೀಲನೆ ನಡೆಸಿದ ಅವರು, ನಂತರ ಮಾಧ್ಯಮಗಳ ಜೊತೆ ಮಾತನಾಡಿದರು.

ರಾಜ್ಯ ಸರ್ಕಾರದಲ್ಲಿ ಹಣದ ಕೊರತೆ ಇದೆ. ಮಲೆನಾಡಿನಲ್ಲಿ ಕಾಫಿ ಉದುರುತ್ತಿದೆ, ಭತ್ತದ ಬೆಳೆ ನೀರಿನಲ್ಲಿ ಮುಳುಗಿದೆ, ಈರುಳ್ಳಿ ಕೊಳೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕುಂಭಕರ್ಣನಂತೆ ನಿದ್ದೆ ಮಾಡುವುದನ್ನು ಬಿಟ್ಟು ಎಲ್ಲ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಯಾವ ರೀತಿ ಅನಾಹುತವಾಗಿದೆ ಎಂದು ಪರಿಶೀಲಿಸಬೇಕು. ಕಳೆದೊಂದು ತಿಂಗಳಿಂದ ಪ್ರವಾಹ ಸಂಬಂಧದ ಸಭೆಯೇ ನಡೆದಿಲ್ಲ. ಸರ್ಕಾರ ಕೂಡಲೇ ಸಭೆ ಕರೆದು ಕನಿಷ್ಠ 5,000 ಕೋಟಿ ರೂ. ಬಿಡುಗಡೆ ಮಾಡಬೇಕು. ಬೆಂಗಳೂರಿಗೆ ವಿಶೇಷವಾಗಿ 1,000 ಕೋಟಿ ರೂ. ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.

16 ತಿಂಗಳ ಕಾಂಗ್ರೆಸ್‌ ಸರ್ಕಾರದ ಪಾಪದ ಫಲವನ್ನು ಬೆಂಗಳೂರಿನ ಜನರು ಅನುಭವಿಸಬೇಕಾಗಿದೆ. ರಾಜಕಾಲುವೆಯ ಹೂಳು ತೆಗೆದು ಸ್ವಚ್ಛ ಮಾಡುವ ಕೆಲಸವನ್ನು ಸರ್ಕಾರ ಮಾಡಿಲ್ಲ. ಇದರಿಂದಾಗಿ ತೇಲುತ್ತಿರುವ ಬೆಂಗಳೂರು ಎಂಬ ಅಪಖ್ಯಾತಿ ನಗರಕ್ಕೆ ಬಂದಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರು ಒಂದೂವರೆ ವರ್ಷದಲ್ಲಿ ಎಷ್ಟು ಒತ್ತುವರಿ ತೆರವು ಮಾಡಿದ್ದಾರೆ, ಎಷ್ಟು ಹೂಳು ತೆಗೆಸಿದ್ದಾರೆ ಎಂದು ತಿಳಿಸಲಿ. ಬಿಜೆಪಿ ಸರ್ಕಾರವಿದ್ದಾಗ ಮಳೆಗಾಲಕ್ಕೆ ಮುನ್ನ ಎಲ್ಲ ಸಿದ್ಧತೆ ಮಾಡಲಾಗುತ್ತಿತ್ತು ಎಂದರು.

ಬೆಂಗಳೂರಿನಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿದೆ. ಖಜಾನೆ ಖಾಲಿಯಾಗಿದೆ ಎಂದು ನಮಗೂ ಗೊತ್ತಿದೆ. ಆದ್ದರಿಂದ ಕನಿಷ್ಠ 500 ಕೋಟಿ ರೂ. ಹಣವಾದರೂ ಬಿಡುಗಡೆ ಮಾಡಲಿ. ಇಲ್ಲವೆಂದರೆ ಗುತ್ತಿಗೆದಾರರು ಮುಂದೆ ಬರುವುದಿಲ್ಲ. ಇದರ ಜೊತೆಗೆ ಕಸದ ಸಮಸ್ಯೆಯೂ ಸೃಷ್ಟಿಯಾಗಿದೆ. ಮಾನ್ಯತಾ ಟೆಕ್‌ ಪಾರ್ಕ್‌ ಈಗ ಮುಳುಗಡೆ ಪಾರ್ಕ್‌ ಆಗಿಬಿಟ್ಟಿದೆ. ಸಿಲ್ಕ್‌ ಬೋರ್ಡ್‌ನಲ್ಲಿ ಪ್ರತಿ ದಿನವೂ ಪ್ರವಾಹ ಉಂಟಾಗುತ್ತಿದೆ. ಪ್ರತಿ 15 ದಿನಕ್ಕೊಮ್ಮೆ ಪರಿಶೀಲನೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದ್ದರು. ಆದರೆ 6 ತಿಂಗಳಾದರೂ ಏನೂ ಮಾಡಿಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ರಾತ್ರಿ ಪರಿಶೀಲನೆ ಮಾಡಿದ್ದು, ಅವರಿಗೆ ಯಾವುದೇ ಸಮಸ್ಯೆ ಕಂಡಿಲ್ಲ ಎಂದು ದೂರಿದರು.

ಚನ್ನಪಟ್ಟಣ ಉಪಚುನಾವಣೆಗೆ ಅಭ್ಯರ್ಥಿಯನ್ನು ಎನ್‌ ಡಿಎ ಆಯ್ಕೆ ಮಾಡಲಿದೆ. ಈ ಬಗ್ಗೆ ಚರ್ಚೆ ನಡೆದು ಶೀಘ್ರ ಅಂತಿಮ ತೀರ್ಮಾನವಾಗಲಿದೆ ಎಂದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಕುರಿತು ಸಚಿವ ಭೈರತಿ ಸುರೇಶ್‌ ಕೀಳಾಗಿ ಮಾತಾಡಿರುವುದು ಸರಿಯಲ್ಲ. ಈ ಮೂಲಕ ಅವರು ಕೆಟ್ಟ ರಾಜಕಾರಣಕ್ಕೆ ನಾಂದಿ ಹಾಡಿದ್ದಾರೆ. ಅವರು ಸಚಿವ ಸ್ಥಾನಕ್ಕೆ ಅಗೌರವ ತಂದಿದ್ದು, ಎಚ್ಚರಿಕೆಯಿಂದ ಮಾತಾಡಬೇಕು ಎಂದರು.

Key words:  rain, damage, Rs 5,000 crore, immediately, R. Ashok

Font Awesome Icons

Leave a Reply

Your email address will not be published. Required fields are marked *