ರಾಜ್ಯಮಟ್ಟದ ಬೋರ್ಡ್ ಪರೀಕ್ಷೆ ರದ್ದು: ಹೈಕೋರ್ಟ್ ತೀರ್ಪಿನ ವಿರುದ್ಧ ಅಪೀಲು ಸಲ್ಲಿಸದಂತೆ ಕೆಪಿಸಿಸಿ ವಕ್ತಾರ  ರಮೇಶ್ ಬಾಬು ಪತ್ರ. – Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್

kannada t-shirts

ಬೆಂಗಳೂರು,ಮಾರ್ಚ್,7,2024(www.justkannada.in): ಸ್ಟೇಟ್‌ ಸಿಲಬಸ್‌ ( ರಾಜ್ಯ  ಪಠ್ಯಕ್ರಮ) ಅನುಸರಿಸುವ ಶಾಲೆಗಳ 5, 8, 9 ಹಾಗೂ 11ನೇ ತರಗತಿಗೆ ರಾಜ್ಯಮಟ್ಟದ ಬೋರ್ಡ್ ಪರೀಕ್ಷೆ ನಡೆಸುವಂತೆ  ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ರದ್ದುಪಡಿಸಿ  ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ದ ಅಪೀಲು ಸಲ್ಲಿಸದಂತೆ ಸಿಎಂ ಸಿದ್ದರಾಮಯ್ಯ  ಮತ್ತು  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಕೆಪಿಸಿಸಿ ವಕ್ತಾರ  ರಮೇಶ್ ಬಾಬು ಮನವಿ ಮಾಡಿದ್ದಾರೆ.

ಈ ಕುರಿತು ಪತ್ರ ಬರೆದಿರುವ ರಮೇಶ್ ಬಾಬು, ರಾಜ್ಯ ಹೈಕೋರ್ಟ್  ಕರ್ನಾಟಕ ಶಿಕ್ಷಣ ಕಾಯಿದೆಗೆ ಅನುಗುಣವಾಗಿ 5, 8, 9 ಮತ್ತು 11 ನೇ ತರಗತಿಗೆ ಹಿಂದಿನ ರಾಜ್ಯ ಸರ್ಕಾರದ ಸಂಕಲನಾತ್ಮಕ ಮೌಲ್ಯ ಮಾಪನದ ಅಧಿಸೂಚನೆಯನ್ನು ರದ್ದುಪಡಿಸಿ ಆದೇಶ ಮಾಡಿರುವುದು ಸರಿಯಿದೆ. ಹಿಂದಿನ ಬಿಜೆಪಿ ಸರ್ಕಾರವು ಅನೇಕ ಪ್ರಗತಿಪರ ಶಿಕ್ಷಣ ಚಿಂತಕರ ಅಭಿಪ್ರಾಯಗಳನ್ನು ಬದಿಗೊತ್ತಿ ಶಾಲಾ ಮಕ್ಕಳ ಹಿತಾಸಕ್ತಿಗೆ ವಿರುದ್ಧವಾಗಿ ವಾರ್ಷಿಕ ಪರೀಕ್ಷೆ ನಡೆಸಲು ತೀರ್ಮಾನವನ್ನು ತೆಗೆದುಕೊಂಡಿತ್ತು. ಕೆಲವು ಅಧಿಕಾರಿಗಳು ಇದಕ್ಕೆ ಪೂರಕವಾಗಿ ಈಗಿನ ಸರ್ಕಾರಕ್ಕೆ ತಪ್ಪು ಮಾಹಿತಿಯನ್ನು ನೀಡಿ ರಾಜ್ಯ ಸರ್ಕಾರವು ಅಧಿಸೂಚನೆಗಳನ್ನು ಹೊರಡಿಸಲು ಅನುವು ಮಾಡಿಕೊಟ್ಟರು. ಈ ಅಧಿಸೂಚನೆಗಳು ಶಿಕ್ಷಣ ಕಾಯಿದೆಯ ನಿಯಮಾವಳಿಗಳಿಗೆ ಪೂರಕವಾಗಿರುವುದಿಲ್ಲ ಮತ್ತು ಯಾವುದೇ ತಿದ್ದುಪಡಿ ಶಾಸನದ ಮೂಲಕ ಇಂತಹ ಕ್ರಮಕ್ಕೆ ಅವಕಾಶ ನೀಡಿರುವುದಿಲ್ಲ ಎನ್ನುವ ಕಾರಣಕ್ಕೆ ಹೈಕೋರ್ಟ್ ಶಿಕ್ಷಣ ಇಲಾಖಾ ಆದೇಶವನ್ನು ರದ್ದುಗೊಳಿಸಿದೆ.

ಹಿಂದಿನ ಬಿಜೆಪಿ ಸರ್ಕಾರವು ತನ್ನ ಹಿಡನ್ ಅಜೇಂಡಾಗೆ ಅನುಗುಣವಾಗಿ ವಾರ್ಷಿಕ ಪರೀಕ್ಷೆಯ ನಿರ್ಧಾರವನ್ನು ತೆಗೆದುಕೊಂಡಿತ್ತು. ಶಿಕ್ಷಣ ಇಲಾಖೆಯ ಕೆಲವು ಅಧಿಕಾರಿಗಳು ತಮ್ಮ ವೈಯಕ್ತಿಕ ಹಿತಾಸಕ್ತಿಯ ಕಾರಣಕ್ಕಾಗಿ ಇಂತಹ ನಿರ್ಧಾರವು  ಸರಿ ಎಂದು ಬಿಂಬಿಸಲು ಪ್ರಯತ್ನಿಸಿದ್ದರು. ಆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ರಾಜ್ಯದ ಅನೇಕ ಶಿಕ್ಷಣ ತಜ್ಞರು ಈ ಶಾಲೆಗಳಿಗೆ ಸಂಕಲನಾತ್ಮಕ ಮೌಲ್ಯಮಾಪನದ ಹೆಸರಿನಲ್ಲಿ ವಾರ್ಷಿಕ ಪರೀಕ್ಷೆ ಅಥವಾ ಪಬ್ಲಿಕ್ ಪರೀಕ್ಷೆ ನಡೆಸುವುದು ಸಮಂಜಸ ಅಲ್ಲವೆಂದು ಪ್ರತಿಪಾದಿಸಿದ್ದರು.

ಈ ಕ್ರಮದಿಂದ ಮಕ್ಕಳ ಮನಸ್ಸುಗಳ ಮೇಲೆ  ಒತ್ತಡವನ್ನು ಹೇರುವುದರ ಜೊತೆಗೆ ಕಲಿಕಾ ಕ್ರಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಪದೇ ಪದೇ ಶಾಲಾ ಮಕ್ಕಳ ಕಲಿಕಾ ಕ್ರಮವನ್ನು ಬದಲಾಯಿಸುವುದು, ಶೈಕ್ಷಣಿಕ ವರ್ಷದ ಕೊನೆಯ ಭಾಗದಲ್ಲಿ ಮಕ್ಕಳ ಮೇಲೆ  ಅಥವಾ ಶಿಕ್ಷಣದ ಕ್ರಮದ  ಮೇಲೆ ಪ್ರಯೋಗಗಳನ್ನು ಮಾಡುವುದು ಸಮಂಜಸ ನಿರ್ಧಾರ ಆಗಿರುವುದಿಲ್ಲ. ಇದನ್ನು ಹಿಂದಿನ ಬಿಜೆಪಿ ಸರ್ಕಾರಕ್ಕೆ ಮನವರಿಕೆ ಮಾಡುವ ಪ್ರಯತ್ನ ಮಾಡಿದರೂ, ಅವರ  ಹಿಡನ್ ಅಜೆಂಡಾ ಕಾರಣಕ್ಕಾಗಿ ಅನೇಕ ಅವೈಜ್ಞಾನಿಕ  ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ರಾಜ್ಯ ಹೈಕೋರ್ಟ್ ಈ ಎಲ್ಲಾ ಅಂಶಗಳನ್ನು ಪರಿಗಣಿಸಿ  ಕರ್ನಾಟಕ ಶಿಕ್ಷಣ ಕಾಯಿದೆಗೆ  ಪೂರಕವಾಗಿ ತನ್ನ ತೀರ್ಪನ್ನು ನೀಡಿದ್ದು, ರಾಜ್ಯ ಸರ್ಕಾರವು ಇದಕ್ಕೆ ಅನುಗುಣವಾಗಿ ಉದ್ದೇಶಿತ ವಾರ್ಷಿಕ ಪರೀಕ್ಷೆಯನ್ನು 5, 8, 9 ಮತ್ತು 11 ನೇ ತರಗತಿಗೆ ಕೈಬಿಡಬೇಕಾಗಿ ಕೋರುತ್ತೇನೆ.  ಹೈಕೋರ್ಟ್ ತೀರ್ಪಿನ ವಿರುದ್ಧ ಯಾವುದೇ ಅಪೀಲು ಸಲ್ಲಿಸದೆ, ಶೈಕ್ಷಣಿಕ ವರ್ಷದ ಕೊನೆಯ ಭಾಗದಲ್ಲಿ ಮಕ್ಕಳನ್ನು ಮಾನಸಿಕ ಒತ್ತಡಕ್ಕೆ ಒಳಪಡಿಸದೆ ನ್ಯಾಯಾಲಯದ ತೀರ್ಪಿಗೆ ಅನುಗುಣವಾಗಿ ಪರೀಕ್ಷೆಗಳನ್ನು ನಡೆಸಬೇಕು ಎಂದು ಸರ್ಕಾರಕ್ಕೆ ರಮೇಶ್ ಬಾಬು ಮನವಿ ಮಾಡಿದ್ದಾರೆ.

Key words: Cancellation -state level-board –exam- Ramesh Babu- letter – CM – Education Minister

website developers in mysore

Font Awesome Icons

Leave a Reply

Your email address will not be published. Required fields are marked *