ಬೆಂಗಳೂರು: ರಾಮರಾಜ್ಯದ ಪರಿಕಲ್ಪನೆಯು ಸಮಾನತೆ ಮತ್ತು ಸಮಾನ ಅವಕಾಶಗಳನ್ನು ಅರ್ಥೈಸುತ್ತದೆ. ಇದು ನಮ್ಮ ಸಂವಿಧಾನದ ಆಧಾರವೂ ಆಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಭಗವಾನ್ ರಾಮನ ಆಡಳಿತ ಕೇವಲ ಬಿಜೆಪಿ ನಾಯಕರಿಗೆ ಸಂಬಂಧಿಸಿದ್ದಲ್ಲ. ಅದು ವಿಶ್ವಕ್ಕೇ ಮಾದರಿ ಎಂದರು.
ದೇಶದಲ್ಲಿ ಸಂವಿಧಾನವನ್ನು ರೂಪಿಸಲು ಬಯಸಿದಾಗ, ಅದಕ್ಕೆ ರಾಮರಾಜ್ಯ ಮಾದರಿಯ ಸಾರವನ್ನು ತೆಗೆದುಕೊಂಡಿದ್ದರು. ಹಾಗಾಗಿ, ರಾಮರಾಜ್ಯ ಮಾದರಿಯು ಬಿಜೆಪಿ ಅಥವಾ ಸ್ಥಳೀಯ ಮಟ್ಟಕ್ಕೆ ಮಾತ್ರ ಸೀಮಿತವಾಗಿಲ್ಲ. ಅದು ಜಾಗತಿಕ ಮಾದರಿಯಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.
ಆದರೆ, ರಾಮ ಮಂದಿರ ವಿಚಾರದಲ್ಲಿ ಪಕ್ಷದ ನಿಲುವು ಏನು ಎಂಬುದು ನನಗೆ ತಿಳಿದಿಲ್ಲ ಎಂದು ಪರಮೇಶ್ವರ ಹೇಳಿದ್ದಾರೆ. ನಾನು ಪಕ್ಷದ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ. ಪಕ್ಷವು ಭಾಗವಹಿಸಲು ನಿರ್ಧರಿಸಿದರೆ ನಾವು ಖಂಡಿತವಾಗಿಯೂ ಹೋಗುತ್ತೇವೆ. ನಾವೇಕೆ ಹೋಗಬಾರದು, ಶ್ರೀರಾಮ ಕೇವಲ ಬಿಜೆಪಿಯ ದೇವರಲ್ಲ, ಎಲ್ಲರಿಗೂ ಪೂಜ್ಯ ಎಂದರು.