ಬೆಂಗಳೂರು: ಚಿತ್ರದುರ್ಗದಲ್ಲಿ ನಡೆದ ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರು, ತಮ್ಮ ಭಾಷಣದ ವೇಳೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆ ಏಕವಚನ ಪದ ಪ್ರಯೋಗಿಸಿದ್ದರು. ಈ ಕುರಿತ ವೀಡಿಯೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಅವರು ಸಿಎಂ ವಿರುದ್ಧ ಕಿಡಿ ಕಾರಿದ್ದಾರೆ.
ಅಹಿಂದ, ನಾರಿ ಶಕ್ತಿ ಎನ್ನುತ್ತ ಅಧಿಕಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯನವರೇ ಬುಡಕಟ್ಟು ಸಮುದಾಯದಿಂದ ಬಂದಂತಹ ಮಹಿಳಾ ರಾಷ್ಟ್ರಪತಿಗಳಿಗೆ ಕೊಡುವ ಗೌರವ ಇದೇನಾ? ಎಂದು ಜೋಶಿ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯನವರೇ ನಿಮಗೂ ನಿಮ್ಮ ಪಕ್ಷಕ್ಕೂ ಅದೇನು ಮಂಕು ಬಡಿದಿದೆ, ಸಂವಿಧಾನದ ಪರಮೋಚ್ಛ ಸ್ಥಾನದಲ್ಲಿರುವ, ಅದರಲ್ಲೂ ದೇಶದ ಓರ್ವ ಮಹಿಳಾ ಪ್ರಥಮ ಪ್ರಜೆ ಬಗ್ಗೆ ಏಕವಚನದಲ್ಲಿ ಮಾತನಾಡುವುದೇ ನಿಮ್ಮ ಸಂಸ್ಕೃತಿ ಆಗಿದೆಯೇ? ದೇಶದ ಪ್ರಧಾನಿಯನ್ನು, ರಾಷ್ಟ್ರಪತಿಯನ್ನು ಏಕವಚನದಲ್ಲಿ ಕರೆಯೋ ಶೋಕಿ ಮಾಡುತ್ತೀರಿ. ಮಹಿಳಾ ರಾಷ್ಟ್ರಪತಿ ಬಗ್ಗೆ ಬಹಿರಂಗ ಸಭೆಯಲ್ಲೇ ಏಕವಚನದಲ್ಲೇ ಮಾತನಾಡುವ ನಿಮ್ಮ ಸಂಸ್ಕೃತಿ- ಸಭ್ಯತೆ ಇದೇನಾ? ಇದು, ರಾಷ್ಟ್ರಪತಿಗೆ ಅದರಲ್ಲೂ ಓರ್ವ ಮಹಿಳಾ ರಾಷ್ಟ್ರಪತಿಗೆ ನೀವು ಅಗೌರವ ತೋರಿದಂತೆ. ಎಂದು ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಬರೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಅವರೇ, ನಿಮ್ಮ ಎಲುಬಿಲ್ಲದ ನಾಲಿಗೆಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿ. ಈ ದುರಹಂಕಾರ ನಿಮ್ಮ ಹಾಗೂ ನಿಮ್ಮ ಪಕ್ಷದ ಅವನತಿಗೆ ಬುನಾದಿಯಾಗಲಿದೆ. ಸಂವಿಧಾನದ ಪರಮೋಚ್ಚ ಸ್ಥಾನದಲ್ಲಿರುವವರ ಬಗ್ಗೆ ಕಾಂಗ್ರೆಸ್ಗೆ ಗೌರವವಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ದೇಶದ ಪ್ರಥಮ ಪ್ರಜೆ ಬಗ್ಗೆ ಅಪಮಾನಕಾರಿ ಮಾತುಗಳನ್ನಾಡುವುದಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಸ್ಪರ್ಧೆಯೇ ಇದ್ದಂತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
.@siddaramaiah ನವರೇ, ನಿಮಗೂ ನಿಮ್ಮ ಪಕ್ಷಕ್ಕೂ ಯಾವ ಮಂಕು ಬಡಿದಿದೆಯೋ ತಿಳಿಯುತ್ತಿಲ್ಲ. ಸಂವಿಧಾನದ ಪರಮೋಚ್ಚ ಸ್ಥಾನದಲ್ಲಿರುವವರ ಬಗ್ಗೆ ಕಾಂಗ್ರೆಸ್ ಗೆ ಗೌರವವಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ.
ದೇಶದ ಪ್ರಥಮ ಪ್ರಜೆ ಬಗ್ಗೆ ಅಪಮಾನಕಾರಿ ಮಾತುಗಳನ್ನಾಡುವುದಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಸ್ಪರ್ಧೆ ಇದ್ದಂತಿದೆ. ಅಧೀರ ರಂಜನ್ ಚೌಧರಿ… pic.twitter.com/mInJUPbSHt
— Pralhad Joshi (@JoshiPralhad) January 29, 2024