ತೆಲಂಗಾಣ: ಮುಸ್ಲಿಂ ವ್ಯಕ್ತಿಯೊಬ್ಬ ರೀಲ್ನಲ್ಲಿ ಕೇಸರಿ ಧ್ವಜವನ್ನು ಅವಮಾನಿಸಿದ್ದಾನೆಂದು ಆರೋಪಿಸಿ ಆತನಿಗೆ ಥಳಿಸಿ, ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣದ ಸಂಗಾರೆಡ್ಡಿಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಕೇಸರಿ ಧ್ವಜವನ್ನು ಅವಮಾನಿಸುವ ರೀಲ್ ಅನ್ನು ಅಪ್ಲೋಡ್ ಮಾಡಿದ ನಂತರ ಗುಂಪೊಂದು ಆತನನ್ನು ಥಳಿಸಿ ಬೆತ್ತಲೆಯಾಗಿ ಮೆರವಣಿಗೆ ಮಾಡಿದೆ.
ರೀಲ್ನಲ್ಲಿ ಮುಸ್ಲಿಂ ಯುವಕ ಕೇಸರಿ ಧ್ವಜವನ್ನು ಹಿಡಿದಿದ್ದು ಅದರ ಮೇಲೆ ಹಿಂದೂ ಧಾರ್ಮಿಕ ಚಿಹ್ನೆ ‘ಓಂ’ ಎಂದು ಬರೆಯಲಾಗಿದೆ. ಅವನ ಪ್ಯಾಂಟ್ನೊಳಗೆ ಅವಮಾನಕರ ರೀತಿಯಲ್ಲಿ ಅದನ್ನು ಇಟ್ಟುಕೊಳ್ಳುತ್ತಾನೆ. ರೀಲ್ನಿಂದ ಕೋಪಗೊಂಡ ಜನರು ಮೇದಕ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಅವರನ್ನು ಕಂಡು ಥಳಿಸಿದ್ದಾರೆ. ಇದನ್ನು ವಿಡಿಯೋ ಕೂಡ ಮಾಡಲಾಗಿದೆ.
ವೀಡಿಯೋದಲ್ಲಿ ಗುಂಪು ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗುತ್ತಾ ಮುಸ್ಲಿಂ ಯುವಕನನ್ನು ಥಳಿಸಿ, ಆತನನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ ಮತ್ತು ಅವನ ಖಾಸಗಿ ಅಂಗಗಳಿಗೆ ಬೆಂಕಿ ಹಚ್ಚಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಯ ವಿರುದ್ಧ ಗ್ರಾಮಸ್ಥರು ದೂರು ದಾಖಲಿಸಿದ್ದರು.
ಆತನ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 153(ಎ), 295-ಎ, 505(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.