ಬೆಂಗಳೂರು: ಲಂಚ ಪಡೆಯುವ ವೇಳೆ ಬಿಬಿಎಂಪಿ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.
ಬಿಬಿಎಂಪಿ ಯಶವಂತಪುರ ಕಚೇರಿ ಎಆರ್ಒ ರಾಜೇಂದ್ರಪ್ರಸಾದ್ ಹಾಗೂ ತೆರಿಗೆ ಮೌಲ್ಯಮಾಪಕ ಪ್ರಕಾಶ್ ಎಂಬುವವರು ವಾಣಿಜ್ಯ ಕಟ್ಟಡದ ತೆರಿಗೆ ಮೊತ್ತ ಕಡಿಮೆ ಮಾಡಲು ಬರೋಬ್ಬರಿ 4.50 ಲಕ್ಷ ರೂ. ಲಂಚ ಸ್ವೀಕರಿಸುವಾಗ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಇದೀಗ ಇಬ್ಬರು ಅಧಿಕಾರಿಗಳು ಬಂಧಿಸಿ, ಲಂಚದ ಹಣವನ್ನು ಜಪ್ತಿ ಮಾಡಿದ್ದಾರೆ. ಈ ಕುರಿತು ಬೆಂಗಳೂರು ಲೋಕಾಯುಕ್ತ ಠಾಣೆಯಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಮೊನ್ನೆಯಷ್ಟೇ (ಸೆ.24) ಯಶವಂತಪುರ ಮತ್ತು ಬ್ಯಾಟರಾಯನಪುರ ಅಬಕಾರಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ಮಾಡಿದ್ದು, ಈ ವೇಳೆ ಸರ್ಕಾರಿ ಕಚೇರಿಗಳಲ್ಲೇ ಗಾಂಜಾ ಮತ್ತು ಮದ್ಯದ ಬಾಟಲಿಗಳು ಪತ್ತೆಯಾಗಿದ್ದವು.
ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್, ‘ 61 ಅಬಕಾರಿ ಅಧಿಕಾರಿಗಳ ಮೇಲೆ ಸರ್ಚ್ ಮಾಡಲಾಗಿದೆ. ಲೊಕಾಯುಕ್ತ ಕಚೇರಿಗೆ ಸುಮಾರು 132 ದೂರುಗಳು ಬಂದಿವೆ. ಅದೆಲ್ಲವನ್ನೂ ವಿಚಾರ ಮಾಡಲಾಗಿ ಜೊತೆಗೆ ಅಬಕಾರಿ ಕಚೇರಿಯ ವ್ಯವಹಾರಗಳ ಬಗ್ಗೆ ಪರಿಶೀಲನೆ ನಡೆಸಲು ಸರ್ಚಿಂಗ್ ಮಾಡಲಾಗುತ್ತಿದೆ ಎಂದಿದ್ದರು. ಇದೀಗ ಇಬ್ಬರು ಅಧಿಕಾರಿಗಳು ಲೋಕಾ ಬಲೆಗೆ ಬಿದ್ದಿದ್ದಾರೆ.