ಲೋಕಸಭಾಚುನಾವಣೆ ಮುನ್ನವೇ ಐಎನ್ ಡಿಐಎನಲ್ಲಿ ಗೋಜಲು, ಗೊಂದಲ

ಬೆಂಗಳೂರು: ಲೋಕಸಭಾ ಚುನಾವಣೆಗೆ ಒಂದೆರಡು ತಿಂಗಳಷ್ಟೇ ಬಾಕಿಯಿದ್ದು, ನರೇಂದ್ರಮೋದಿ ನೇತೃತ್ವದ ಎನ್ ಡಿಎ ಸರ್ಕಾರವನ್ನು ಕೆಡವಿ ಐಎನ್ ಡಿಐಎ ಒಕ್ಕೂಟದ ಸರ್ಕಾರವನ್ನು ಅಧಿಕಾರಕ್ಕೆ ತರುವ ಕನಸು ಹೊತ್ತಿದ್ದ ಪ್ರತಿಪಕ್ಷಗಳ ಒಗ್ಗಟ್ಟು ಚುನಾವಣೆಗೆ ಮುನ್ನವೇ ಮುರಿದು ಹೋಗಿದೆ. ಹೀಗಾಗಿ ಯುದ್ಧಕ್ಕೆ ಮುನ್ನವೇ ಶಸ್ತ್ರ ತ್ಯಾಗ ಮಾಡಿದಂತೆ ಕಾಣಿಸುತ್ತಿದೆ.

ಐಎನ್ ಡಿಐಎ ಒಕ್ಕೂಟ ರಚನೆಯಾಗಿ ಆರೇಳು ತಿಂಗಳಲ್ಲಿಯೇ ನಾಯಕರು ನಾನೊಂದು ತೀರ ನೀನೊಂದು ತೀರ ಎಂಬಂತೆ ಪ್ರತ್ಯೇಕ ಹೇಳಿಕೆಗಳನ್ನು ನೀಡುತ್ತಾ ಒಕ್ಕೂಟದಿಂದ ದೂರ ಸರಿಯುತ್ತಿದ್ದಾರೆ. ಬಹುಶಃ ಇದೆಕ್ಕೆಲ್ಲ ಕಾರಣವಾಗಿದ್ದು ಒಕ್ಕೂಟದಲ್ಲಿನ ನಾಯಕರ ನಡುವಿನ ಸಾಮರಸ್ಯದ ಕೊರತೆ ಎಂದರೆ ತಪ್ಪಾಗಲಾರದು.

ಬಿಹಾರದಲ್ಲಿ ಬಿಜೆಪಿಯೊಂದಿಗಿನ ಸಂಬಂಧವನ್ನು ಕಳೆದು ಕೊಂಡು ಆರ್ ಜೆಡಿ ಜತೆ ಸರ್ಕಾರ ರಚಿಸಿ ಅದಾದ ನಂತರ ಪ್ರಧಾನಿ ನರೇಂದ್ರ ಮೋದಿಗೆ ಟಾಂಗ್ ನೀಡುವ ಸಲುವಾಗಿ ಕಾಂಗ್ರೆಸ್ ನಾಯಕರು ಹಾಗೂ ಇತರೆ ಪ್ರತಿಪಕ್ಷಗಳ ಪ್ರಭಾವಿ ನಾಯಕರಾದ ಅರವಿಂದ್ ಕೇಜ್ರಿವಾಲ್ ಮತ್ತು ಮಮತಾ ಬ್ಯಾನರ್ಜಿ ಅವರ ಜತೆ ಸೇರಿ ಐಎನ್ ಡಿಐಎ ಒಕ್ಕೂಟ ರಚಿಸಲು ಸಹಕಾರ ನೀಡಿದ್ದ ಜೆಡಿಯುನ ನಿತೀಶ್ ಕುಮಾರ್ ಕೊನೆಗಳಿಗೆಯಲ್ಲಿ ಐಎನ್ ಡಿಐಎಗೆ ಶಾಕ್ ನೀಡಿದ್ದಾರೆ.

ಈ ಹಿಂದೆ 2022ರಲ್ಲಿ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ಮಾಡುವ ವೇಳೆ ಐಎನ್ ಡಿಐಎ ಒಕ್ಕೂಟ ರಚನೆಯಾಗಿರಲಿಲ್ಲ. ದಕ್ಷಿಣದ ರಾಜ್ಯಗಳಲ್ಲಿ ಅದರಲ್ಲೂ ಕರ್ನಾಟಕ ಮತ್ತು ತೆಲಂಗಾಣದಲ್ಲಿ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರಿಂದ ಅದನ್ನು ಭಾರತ್ ಜೋಡೋ ಯಾತ್ರೆ ಯಶಸ್ಸು ಎಂದೇ ಹೇಳುತ್ತಾ ಬರಲಾಗುತ್ತಿದೆ.

ಕರ್ನಾಟಕದ ಚುನಾವಣೆಯ ಗೆಲುವಿನ ನಂತರ ಕಾಂಗ್ರೆಸ್ ನಾಯಕರಿಗೆ ಆತ್ಮವಿಶ್ವಾಸ ಹೆಚ್ಚಾಗಿತ್ತು. ಅದಾದ ನಂತರ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಹಿಡಿತ ಸಾಧಿಸಿದ್ದರೆ, ರಾಜಸ್ತಾನ್ ನಲ್ಲಿ ಅಧಿಕಾರ ಕಳೆದುಕೊಳ್ಳಬೇಕಾದ ಸ್ಥಿತಿ ಕಾಂಗ್ರೆಸ್ ಗೆ ಒದಗಿ ಬಂದಿತ್ತು. ಆದರೆ ತೆಲಂಗಾಣದಲ್ಲಿ ಅಧಿಕಾರ ಹಿಡಿದಿದ್ದರಿಂದ ತುಸು ನೆಮ್ಮದಿಯಾಗಿತ್ತು.

ಪಂಚರಾಜ್ಯ ಚುನಾವಣೆ ತನಕ ಆಕ್ಟೀವ್ ಆಗಿದ್ದ ಐಎನ್ ಡಿಐಎ ಒಕ್ಕೂಟಕ್ಕೆ ಚುನಾವಣೆ ಸೋಲು ಆತ್ಮವಿಶ್ವಾಸವನ್ನು ಕುಗ್ಗಿಸಿತು ಎಂದರೆ ತಪ್ಪಾಗಲಾರದು. ಹೀಗಾಗಿಯೇ ಕಾಂಗ್ರೆಸ್ ವಲಯದಲ್ಲಿ ಯಾವುದು ಅಸಾಧ್ಯವೋ ಅದನ್ನೇ ಮಾಡುವಂತೆ ಅಂದರೆ ಪ್ರಧಾನಿ ಅಭ್ಯರ್ಥಿಯನ್ನಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಘೋಷಣೆ ಮಾಡಿ ಎಂಬ ದಾಳವನ್ನು ಒಕ್ಕೂಟದ ಸದಸ್ಯ ಪಕ್ಷದ ಅರವಿಂದ್ ಕೇಜ್ರಿವಾಲ್ ಮತ್ತು ಮಮತಾ ಬ್ಯಾನರ್ಜಿ ಉರುಳಿಸಿದ್ದರು. ಇದಾದ ನಂತರ ಅವರು ಒಕ್ಕೂಟದಿಂದ ಅಂತರ ಕಾಪಾಡಿಕೊಳ್ಳಲಾಂಭಿಸಿದರು. ಈ ನಡುವೆ ರಾಹಲ್ ಗಾಂಧಿ ಅವರು ನ್ಯಾಯಯಾತ್ರೆ ಆರಂಭಿಸಿದ ಬಳಿಕವಂತು ದೂರವೇ ಸರಿದು ಬಿಟ್ಟರು.

ಇನ್ನು ಐಎನ್ ಡಿಐಎ ಒಕ್ಕೂಟದಲ್ಲಿ ಪ್ರಾದೇಶಿಕ ಪಕ್ಷಗಳ ಜತೆಗಿನ ಮೈತ್ರಿ ಕೇವಲ ಲೋಕಸಭೆಗೆ ಮಾತ್ರ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಹೇಳಿದ್ದಾರೆ. ಮೇಲ್ನೋಟಕ್ಕೆ ಐಎನ್ ಡಿಐಎ ಒಕ್ಕೂಟದಲ್ಲಿ ಒಗ್ಗಟ್ಟು ಅಂತು ಕಾಣಿಸುತ್ತಿಲ್ಲ. ಇದುವರೆಗೆ ಮೂರೋ ನಾಲ್ಕೋ ಸಭೆ ನಡೆಸಿದ್ದರೂ ಯಾವ ಸಭೆಯಲ್ಲಿ ಒಮ್ಮತ ಕಾಣಿಸಿಲ್ಲ. ಮುಂದೆ ಚುನಾವಣೆ ಬರುತ್ತಾ ಇರುವುದರಿಂದ ಇಷ್ಟರಲ್ಲಿಯೇ ಸಭೆ ಕರೆದು ತೀರ್ಮಾನಗಳನ್ನು ಕೈಗೊಳ್ಳಬೇಕಿತ್ತು. ಆದರೆ ಅದ್ಯಾವುದೂ ಕಾಣಿಸುತ್ತಿಲ್ಲ. ಲೋಕಸಭಾ ಚುನಾವಣೆ ಹೊತ್ತಿಗೆ ಇಂಡಿಯಾ ಒಕ್ಕೂಟದಲ್ಲಿ ಉಳಿಯುವ ಪಕ್ಷಗಳೆಷ್ಟು ಎಂಬುದೇ ಸದ್ಯದ ಕುತೂಹಲವಾಗಿದೆ.

Font Awesome Icons

Leave a Reply

Your email address will not be published. Required fields are marked *