ವಕ್ಫ್‌ ಮಂಡಳಿಯಿಂದ ಭೂ ಕಬಳಿಕೆ:  ಕಾನೂನು ಸುವ್ಯವಸ್ಥೆ ಹಾಳಾದ್ರೆ ಸರ್ಕಾರವೇ ನೇರ ಹೊಣೆ- ಆರ್.ಅಶೋಕ್ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


 

ಮೈಸೂರು,ಡಿಸೆಂಬರ್,2,2024 (www.justkannada.in): ವಕ್ಫ್‌ ಮಂಡಳಿಯು ಬಡ ಜನರ ಭೂಮಿ ಕಬಳಿಸುತ್ತಿರುವುದರಿಂದ ಕಾನೂನು ಸುವ್ಯವಸ್ಥೆ ಹಾಳಾಗುತ್ತಿದೆ. ಇದಕ್ಕೆ ಸರ್ಕಾರವೇ ನೇರ ಕಾರಣ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.

ವಕ್ಫ್‌ ಮಂಡಳಿಯಿಂದ ನೋಟಿಸ್‌ ನೀಡಲಾದ ಸ್ಥಳಗಳಿಗೆ ಭೇಟಿ ನೀಡಿದ ಆರ್‌.ಅಶೋಕ್ ಅವರು, ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದರು.

ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ಅಶೋಕ್, ವಕ್ಫ್‌ ಮಂಡಳಿ ಮೈಸೂರಿನಲ್ಲಿ ಅನೇಕರಿಗೆ ನೋಟಿಸ್‌ ನೀಡಿದೆ. ಭೂಮಿಯನ್ನು ಕಬಳಿಸುವುದರ ಜೊತೆಗೆ, ಈ ಜಾಗವನ್ನು ಲೀಸ್‌ಗೆ ಪಡೆಯಿರಿ ಎಂದು ವಕ್ಫ್‌ ಮಂಡಳಿಯ ಅಧಿಕಾರಿಗಳು ಹೇಳುತ್ತಿದ್ದಾರೆ. ಕೆಲವು ಕಡೆ ಬಡಜನರ ಭೂಮಿಗೆ ಬೇಲಿ ಹಾಕಿಕೊಂಡಿದ್ದಾರೆ. ಮುಸಲ್ಮಾನರೇ ಇಲ್ಲದ ಜಾಗದಲ್ಲಿ ಮಸೀದಿ ನಿರ್ಮಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರಿನ ಮುನೇಶ್ವರ ನಗರವನ್ನು ಸಂಪೂರ್ಣ ವಕ್ಫ್‌ಗೆ ನೀಡಲು ಸಿದ್ಧತೆ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ರೀತಿ ಮಾಡುತ್ತಿರುವುದರಿಂದ ಕಾನೂನು ಸುವ್ಯವಸ್ಥೆ ಹಾಳಾಗಲಿದೆ. ಇದಕ್ಕೆ ಸರ್ಕಾರವೇ ನೇರ ಕಾರಣವಾಗಲಿದೆ. ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರವಿದ್ದಾಗ ಹಿಂದೂಗಳಿಗೆ ಒಂದೇ ಮದುವೆಯಾಗುವಂತೆ ಕಾನೂನು ತರಲಾಯಿತು. ಆದರೆ ಮುಸ್ಲಿಮರಿಗೆ ಈ ಕಾನೂನು ಅನ್ವಯವಾಗಲಿಲ್ಲ. ಅಲ್ಲಿಂದಲೇ ಕಾಂಗ್ರೆಸ್‌ ಸರ್ಕಾರ ಮುಸ್ಲಿಮರ ಪರವಾಗಿ ಕಾನೂನುಗಳನ್ನು ಜಾರಿ ಮಾಡಿತು. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ವಕ್ಫ್‌ ಮಂಡಳಿಗೆ ಸಂಪೂರ್ಣ ಅಧಿಕಾರ ನೀಡುವಂತೆ ಕಾನೂನು ತಿದ್ದುಪಡಿ ತಂದರು. ಅದಾದ ನಂತರ 1 ಲಕ್ಷ ಕೋಟಿ ರೂ.ಗೂ ಅಧಿಕ ಬೆಲೆಬಾಳುವ ಭೂಮಿ ಒಂದೇ ಬಾರಿಗೆ ವಕ್ಫ್‌ ಮಂಡಳಿಗೆ ಸೇರಿಬಿಟ್ಟಿತು. ಇವೆಲ್ಲವನ್ನೂ ವ್ಯವಸ್ಥಿತವಾಗಿದೆ ಮಾಡಲಾಗಿದೆ ಎಂದು ದೂರಿದರು.

ವಕ್ಫ್‌ ಮಂಡಳಿಯದ್ದು ಸಮಸ್ಯೆಯೇ ಅಲ್ಲವೆಂದರೆ, ರೈತರು ಹಾಗೂ ಮಠಗಳ ಸ್ವಾಮೀಜಿಗಳು ಪ್ರತಿಭಟನೆ ಏಕೆ ಮಾಡುತ್ತಿದ್ದಾರೆ? ಬಿಜೆಪಿ ಸಚಿವರು ಎಂದಿಗೂ ಪ್ರತಿ ಜಿಲ್ಲೆಗೆ ಹೋಗಿ ನೋಟಿಸ್‌ ಕೊಡಲು ಸೂಚನೆ ನೀಡಿರಲಿಲ್ಲ. ಆದರೆ ಈಗಿನ ಸಚಿವ ಜಮೀರ್‌ ಅಹ್ಮದ್‌ ಪ್ರತಿ ಜಿಲ್ಲೆಗೆ ಹೋಗಿ ಅಧಿಕಾರಿಗಳನ್ನು ಬೆದರಿಸಿ ನೋಟಿಸ್‌ ಕೊಡಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಕಾನೂನಿನಲ್ಲಿ ತಿದ್ದುಪಡಿ ತಂದು ಈ ತಪ್ಪು ಕೆಲಸವನ್ನು ಸರಿ ಪಡಿಸಲಿದ್ದಾರೆ ಎಂದರು.

ಪ್ರಧಾನಿ ನೆಹರು ಕಾಲದಲ್ಲೇ ಧರ್ಮಾಧಾರಿತವಾಗಿ ದೇಶವನ್ನು ವಿಭಜಿಸಲಾಯಿತು. ಅದೇ ಮಾದರಿಯಲ್ಲಿ ತುಷ್ಟೀಕರಣವನ್ನು ಮಾಡಿ ವಕ್ಫ್‌ ಮಂಡಳಿಗೆ ಪರಮಾಧಿಕಾರ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಸಚಿವ ಜಮೀರ್‌ ಅಹ್ಮದ್‌ ಭೂಮಿ ಕಬಳಿಕೆಗೆ ಆದೇಶ ನೀಡಿದ್ದಾರೆ. ಇದರಿಂದಾಗಿ ರೈತರು ಆತಂಕಕ್ಕೀಡಾಗಿದ್ದಾರೆ ಎಂದರು.

Key words: Land, Waqf Board, mysore, R. Ashok

Font Awesome Icons

Leave a Reply

Your email address will not be published. Required fields are marked *