ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣದಲ್ಲಿ ಎಸ್ಐಟಿ ಚಾರ್ಜ್ಶೀಟ್ ಸಲ್ಲಿಸಿದ್ದು ಈ ಬೆನ್ನಲ್ಲೇ ಇ.ಡಿ. ಕೂಡ ಚಾರ್ಜ್ಶೀಟ್ ಸಲ್ಲಿಕೆ ಮಾಡಿದೆ. ಮಾಜಿ ಸಚಿವ ಬಿ.ನಾಗೇಂದ್ರರೇ ಹಗರಣದ ಕಿಂಗ್ಪಿನ್ ಅಂತ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ವಾಲ್ಮೀಕಿ ನಿಗಮ ಹಗರಣದ ತನಿಖೆ ನಡೆಸುತ್ತಿರುವ ಇ.ಡಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ. ಬರೋಬ್ಬರಿ 4,970 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ್ದು ಅಕ್ರಮದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರರೇ ಕಿಂಗ್ಪಿನ್ ಅಂತ ಉಲ್ಲೇಖಿಸಿದೆ. ನಾಗೇಂದ್ರ ನಿರ್ದೇಶನದಂತೆಯೇ ಅಷ್ಟೂ ಹಣದ ಅವ್ಯವಹಾರ ನಡೆದಿದೆ ಅಂತ ತಿಳಿಸಿದೆ. ಒಟ್ಟು 25 ಆರೋಪಿಗಳ ವಿರುದ್ಧ ಆರೋಪ ಹೊರೆಸಿದೆ.
ನಕಲಿ ಖಾತೆ ತೆರೆದು ಹಣ ಡೆಪಾಸಿಟ್ ಮಾಡಲು ಸ್ವತಃ ನಾಗೇಂದ್ರ ಸೂಚನೆ ನೀಡಿದ್ದರು. ನಾಗೇಂದ್ರ ಸೂಚನೆಯಂತೆ ಎಂಡಿ ಜೆ.ಜಿ.ಪದ್ಮನಾಭ ಅಕ್ರಮ ಎಸಗಿದ್ದರು ಅನ್ನೋದು ಬಯಲಾಗಿದೆ. ನಿಗಮದ 20.19 ಕೋಟಿ ಹಣವನ್ನ ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಕೆಯಾಗಿತ್ತು ಎಂಬ ವಿಚಾರ ತನಿಖೆಯಲ್ಲಿ ಪತ್ತೆಯಾಗಿದೆ. ಬಳ್ಳಾರಿಯ ಪ್ರತಿ ಬೂತ್ಗೂ ಹಣ ಹಂಚಿಕೆ ಮಾಡಿರೋದು ಬಯಲಾಗಿದೆ. ಇದ್ರಲ್ಲಿ ಸ್ವತಃ ನಾಗೇಂದ್ರ 5.26 ಕೋಟಿ ಹಣ ಬಳಕೆ ಮಾಡಿರೋದು ಗೊತ್ತಾಗಿದೆ.
ಎಸ್ಐಟಿ ಚಾರ್ಜ್ಶೀಟ್ನಂತೆ ಇಡಿ ಚಾರ್ಜ್ಶೀಟ್ನಲ್ಲಿ ಸಾಕಷ್ಟು ಭಿನ್ನವಾಗಿದೆ. ಎಸ್ಐಟಿ ಚಾರ್ಜ್ಶೀಟ್ನಲ್ಲಿ ನಾಗೇಂದ್ರಗೆ ಕ್ಲೀನ್ಚಿಟ್ ನೀಡಿದೆ. ದದ್ದಲ್ ಪಾತ್ರವೂ ಉಲ್ಲೇಖವಾಗಿಲ್ಲ. ಆದ್ರೆ, ಇಡಿ ಚಾರ್ಜ್ಶೀಟ್ನಲ್ಲಿ ನಾಗೇಂದ್ರ ಕಿಂಗ್ಪಿನ್ ಅಂತ ಆರೋಪಿಸಿದೆ.