ಬಂಟ್ವಾಳ : ವಿಶೇಷ ಚೇತನರನ್ನು ಮುಖ್ಯವಾಹಿನಿಗೆ ತರಲು ಸಂಘಟನೆಗಳ ಸಹಕಾರ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ವಿಕಾಸಂ, ರೋಟರಿ ಟೌನ್, ಲಯನ್ಸ್ ನಂಥ ಸಂಸ್ಥೆಗಳು ಕಾರ್ಯಪ್ರವೃತ್ತವಾಗಿರುವುದು ಅಭಿನಂದನೀಯ. ವಿಶೇಷಚೇತನ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಲು ಇದು ಸಹಕಾರಿಯಾಗುತ್ತದೆ ಎಂದು ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಹಾಗೂ ನ್ಯಾಯವಾದಿ ಅರುಣ್ ರೋಷನ್ ಡಿಸೋಜ ಹೇಳಿದ್ದಾರೆ.
ಬಿ.ಸಿ.ರೋಡಿನ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ವಿಶ್ವ ಅಂಗವಿಕಲ ದಿನಾಚರಣೆಯ ಹಿನ್ನೆಲೆಯಲ್ಲಿ ವಿಕಾಸಂ ಸೇವಾ ಫೌಂಡೇಶನ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಸಂಪನ್ಮೂಲ ಕೇಂದ್ರ ವತಿಯಿಂದ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ಕಿಶೋರ್ ಕುಮಾರ್ ಮಾತನಾಡಿ, ವಿಶೇಷಚೇತನ ಮಕ್ಕಳು ಸಮಾಜದಲ್ಲಿ ಉತ್ತಮ ಸ್ಥಾನದೊಂದಿಗೆ ಗುರುತಿಸಲು ರೋಟರಿ ಟೌನ್ ಸಹಕಾರ ನೀಡುತ್ತದೆ ಎಂದರು.
ಲಯನ್ಸ್ ಸೇವಾ ಟ್ರಸ್ಟ್ ಖಜಾಂಚಿ ಸುನೀಲ್ ಬಿ. ಮಾತನಾಡಿ ಲಯನ್ಸ್ ಕ್ಲಬ್ ಹಲವು ವರ್ಷಗಳಿಂದ ಉಚಿತವಾಗಿ ವಿಶೇಷ ಚೇತನ ಮಕ್ಕಳ ಪಾಲನಾ ಕೇಂದ್ರವನ್ನು ನಡೆಸುತ್ತಿದ್ದು, ಸದಾ ಅವರ ಅಭ್ಯುದಯಕ್ಕೆ ನೆರವಾಗುತ್ತಿದೆ ಎಂದರು. ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕಾಧ್ಯಕ್ಷ ರಾಜಶೇಖರ ಭಟ್ ಕಾಕುಂಜೆ ಮಾತನಾಡಿ ಮಕ್ಕಳ ಪೋಷಣೆಯಲ್ಲಿ ಪೋಷಕರ ಪಾತ್ರ ಹಾಗೂ ಸಮಾಜದ ಕೊಡುಗೆ ಮಹತ್ವದ್ದು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಶಿಕ್ಷಣ ಸಂಯೋಜಕಿ ಪ್ರತಿಮಾ ವೈ.ವಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಪ್ರಭಾರ ಸಮನ್ವಯಾಧಿಕಾರಿ ವಿದ್ಯಾಕುಮಾರಿ, ಸಂಪನ್ಮೂಲ ವ್ಯಕ್ತಿ ನಾಗರತ್ನ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮುಮ್ತಾಝ್, ವಿಕಾಸಂ ಸಂಸ್ಥೆಯ ಹಿತೈಷಿ ರಜನಿ ಜಿ.ಶೆಟ್ಟಿ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ವಹಿಸಿದ್ದ ವಿಕಾಸಂ ಸೇವಾ ಫೌಂಡೇಶನ್ ಸಂಸ್ಥಾಪಕ ನಿರ್ದೇಶಕರಾದ ಗೋಪಾಲ್ ಗೋವಿಂತೋಟ ಮಾತನಾಡಿ, ವಿಕಾಸಂ ಸಂಸ್ಥೆ ವಿಶೇಷಚೇತನ ಮಕ್ಕಳಾದ ಆಟಿಸಂ ಸಹಿತ ಮಾನಸಿಕವಾಗಿ ಸಮಸ್ಯೆಯುಳ್ಳ ಮಕ್ಕಳನ್ನು ಗುರುತಿಸಿ ಅವರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಳ್ಳಲು ಕೆಲಸ ಮಾಡುತ್ತಿದೆ ಎಂದರು.
ವಿಕಾಸಂ ಸೇವಾ ಫೌಂಡೇಶನ್ ಸಂಸ್ಥಾಪಕ ನಿರ್ದೇಶಕರಾದ ಗಣೇಶ್ ಭಟ್ ವಾರಣಾಸಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಕಾಸಂ ಸೇವಾ ಫೌಂಡೇಶನ್ ಸಂಸ್ಥಾಪಕ ನಿರ್ದೇಶಕರಾದ ಧರ್ಮಪ್ರಸಾದ್ ರೈ ವಂದಿಸಿದರು. ಕ್ಷೇತ್ರ ಸಂಪನ್ಮೂಲ ಕೇಂದ್ರ ವಿಶೇಷ ಸಂಪನ್ಮೂಲ ಅಧಿಕಾರಿ ಸುರೇಖಾ ಯಳವರ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭ ವಿಶೇಷಚೇತನ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು.