ನವದೆಹಲಿ: ಜಾಗತಿಕ ಹಣಕಾಸು ಸಲಹಾ ಸಂಸ್ಥೆಯಾದ ಆರ್ಟನ್ ಕ್ಯಾಪಿಟಲ್’ನ 2024 ಪಾಸ್ಪೋರ್ಟ್ ಸೂಚ್ಯಂಕದ ಪ್ರಕಾರ, ಯುಎಇ ಪಾಸ್ಪೋರ್ಟ್ ಜಾಗತಿಕವಾಗಿ ಅತ್ಯಂತ ಶಕ್ತಿಶಾಲಿ ಪಾಸ್ಪೋರ್ಟ್ ಎಂಬ ಸ್ಥಾನಮಾನವನ್ನ ಉಳಿಸಿಕೊಂಡಿದೆ.
ಯುಎಇ ಪಾಸ್ಪೋರ್ಟ್ ಹೊಂದಿರುವವರು ವಿಶ್ವದಾದ್ಯಂತ 180 ದೇಶಗಳಿಗೆ ಪ್ರವೇಶವನ್ನ ಪಡೆಯುತ್ತಾರೆ, 120 ದೇಶಗಳಿಗೆ ವೀಸಾ ಮುಕ್ತ ಪ್ರವೇಶ ಮತ್ತು ಆನ್ಲೈನ್ನಲ್ಲಿ ಅಥವಾ ಆಗಮಿಸಿದ ನಂತರ 50 ದೇಶಗಳಿಗೆ ವೀಸಾ ಪಡೆಯುವ ಆಯ್ಕೆಯಿದೆ.
2ನೇ ಸ್ಥಾನದಲ್ಲಿ ಜರ್ಮನಿ, ಸ್ಪೇನ್, ಫ್ರಾನ್ಸ್, ಇಟಲಿ ಮತ್ತು ನೆದರ್ಲ್ಯಾಂಡ್ಸ್ನ ಪಾಸ್ಪೋರ್ಟ್ಗಳಿದ್ದು, 178 ದೇಶಗಳಿಗೆ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಸ್ವೀಡನ್, ಫಿನ್ಲ್ಯಾಂಡ್, ಲಕ್ಸೆಂಬರ್ಗ್, ಆಸ್ಟ್ರಿಯಾ ಮತ್ತು ಸ್ವಿಟ್ಜರ್ಲೆಂಡ್ನ ಪಾಸ್ಪೋರ್ಟ್ಗಳು 177 ದೇಶಗಳಿಗೆ ಪ್ರವೇಶವನ್ನ ನೀಡುತ್ತವೆ. ಹೀಗಾಗಿ ಮೂರನೇ ಸ್ಥಾನವನ್ನ ಪಡೆದಿವೆ.
ಡೆನ್ಮಾರ್ಕ್, ಬೆಲ್ಜಿಯಂ, ಪೋರ್ಚುಗಲ್, ಪೋಲೆಂಡ್, ಐರ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದ ಪಾಸ್ಪೋರ್ಟ್ಗಳು ನಾಲ್ಕನೇ ಸ್ಥಾನದಲ್ಲಿದ್ದು, ಜಾಗತಿಕವಾಗಿ 176 ದೇಶಗಳಿಗೆ ಪ್ರವೇಶವನ್ನ ನೀಡುತ್ತವೆ. ಐದನೇ ಸ್ಥಾನವನ್ನ ಸಿಂಗಾಪುರ, ಗ್ರೀಸ್, ನಾರ್ವೆ, ಜೆಕ್ ಗಣರಾಜ್ಯ, ಯುನೈಟೆಡ್ ಕಿಂಗ್ಡಮ್, ಹಂಗೇರಿ, ಜಪಾನ್ ಮತ್ತು ನ್ಯೂಜಿಲೆಂಡ್ನ ಪಾಸ್ಪೋರ್ಟ್ಗಳು ಹಂಚಿಕೊಂಡಿವೆ.
ಇನ್ನು ಭಾರತೀಯ ಪಾಸ್ಪೋರ್ಟ್ ಜಾಂಬಿಯಾ ಜೊತೆಗೆ 66ನೇ ಸ್ಥಾನದಲ್ಲಿದೆ. ಭಾರತೀಯ ಪಾಸ್ಪೋರ್ಟ್ 198 ದೇಶಗಳಿಗೆ ಪ್ರವೇಶವನ್ನ ನೀಡುತ್ತದೆ, ಅವುಗಳಲ್ಲಿ 121 ದೇಶಗಳಿಗೆ ವೀಸಾ ಅಗತ್ಯವಿದೆ. ಭಾರತೀಯ ಪಾಸ್ಪೋರ್ಟ್ ಹೊಂದಿರುವವರು 26 ದೇಶಗಳಲ್ಲಿ ವೀಸಾ ಮುಕ್ತ ಪ್ರಯಾಣವನ್ನ ಆನಂದಿಸುತ್ತಿದ್ದರೆ, 51 ದೇಶಗಳಿಗೆ ವೀಸಾ ಆನ್ ಅರೈವಲ್ ಅವಶ್ಯಕತೆ ಇದೆ.