ಉಡುಪಿ: ತಮ್ಮದೇ ಪಕ್ಷದ ಆಡಳಿತವಿರುವ ಉಡುಪಿ ನಗರಸಭೆಗೆ ಮುತ್ತಿಗೆ ಹಾಕಿರುವ ನಗರ ಬಿಜೆಪಿ ಹಾಗೂ ಶಾಸಕ ಯಶಪಾಲ್ ಸುವರ್ಣ ವರ್ತನೆ ನಿಜಕ್ಕೂ ಹಾಸ್ಯಾಸ್ಪದವಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ಉಡುಪಿ ನಗರಸಭೆ ವಿಪಕ್ಷ ನಾಯಕ ರಮೇಶ್ ಕಾಂಚನ್ ವ್ಯಂಗ್ಯವಾಡಿದ್ದಾರೆ.
35 ನಗರಸಭಾ ವಾರ್ಡ್ಗಳಿರುವ ಉಡುಪಿ ನಗರಸಭೆಯಲ್ಲಿ 32 ಮಂದಿ ಬಿಜೆಪಿ ಸದಸ್ಯರನ್ನು ಹೊಂದಿದೆ. ಪ್ರತಿ ತಿಂಗಳಿಗೊಮ್ಮೆ ಆಡಳಿತ ಪಕ್ಷದ ಸದಸ್ಯರನ್ನು ಸೇರಿಸಿ ಅಧಿಕಾರಿಗಳೊಂದಿಗೆ ಶಾಸಕರು ಸಭೆ ನಡೆಸುತ್ತಿದ್ದರೂ ಕೂಡ, ಅದೇ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಹೇಳಿಕೊಂಡು ಪ್ರತಿಭಟಿಸಲು ಹೊರಟಿರುವುದು ನಿಜಕ್ಕೂ ಹಾಸ್ಯಾಸ್ಪದ.
ಉಡುಪಿ ನಗರಕ್ಕೆ ಉತ್ತಮ ಆಡಳಿತ ಕೊಡುವುದಾಗಿ ಹೇಳಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿ ಪಕ್ಷ ತನ್ನ ಅವಧಿಯಲ್ಲೇ ವ್ಯಾಪಕ ಭ್ರಷ್ಠಾಚಾರ ನಡೆಸಿದೆ. ಅದನ್ನು ಈಗಿನ ಕಾಂಗ್ರೆಸ್ ಸರ್ಕಾರದ ತಲೆಗೆ ಕಟ್ಟುವ ಕೆಲಸ ನಡೆಸುತ್ತಿದೆ. ಕುಡಿಯುವ ನೀರಿನ ವಿಪರೀತ ಬೆಲೆ ಏರಿಕೆ, ಕಳಪೆ ಕಾಮಗಾರಿ ಹಾಗೂ ಭ್ರಷ್ಟಾಚಾರ ಇವರ ಆಡಳಿತದಲ್ಲಿ ನಡೆದಿದೆ ಎಂಬುದು ಉಡುಪಿಯ ನಾಗರಿಕರಿಗೆ ಸ್ಪಷ್ಟವಾಗಿ ತಿಳಿದಿದೆ ಎಂದು ಹೇಳಿದ್ದಾರೆ.