ಬೀದರ್: ಆಧುನಿಕ ಸಮಾಜಕ್ಕೆ ಅಂಟಿಕೊಂಡ ಮನುಷ್ಯ ತನ್ನ ಬದುಕಿಗೆ ಬೇಕಾದ ಎಲ್ಲ ರೀತಿಯ ಅನುಕೂಲತೆ ಮಾಡಿಕೊಂಡಿದ್ದಾನೆ. ಆದರೆ, ಕೆಲಸದ ಒತ್ತಡ, ಅನಾವಶ್ಯಕ ಚಿಂತೆಗಳಿಂದ ಮಾನಸಿಕ ಒತ್ತಡದಿಂದ ಬದುಕಿನ ಸೌಂದರ್ಯವನ್ನೇ ಕಳೆದುಕೊಳ್ಳುತ್ತಿದ್ದಾನೆ. ಆದರೆ, ಅಜ್ಜಿಯೊಬ್ಬರು ನೂರರ ವಯಸ್ಸನ್ನು ದಾಟಿದ್ದು, ಆರೋಗ್ಯದಿಂದ ಜೀವನ ದೂಡುತ್ತಿದ್ದಾರೆ. ಆದರೆ, ಆಕೆಯ ವೃದ್ಧಾಪ್ಯ ವೇತನವನ್ನು ನಿಲ್ಲಿಸಿರುವ ಅಧಿಕಾರಿಗಳು, ‘ನಿಮಗೆ 100 ವರ್ಷ ದಾಟಿದೆ. ವೃದ್ಧಾಪ್ಯ ವೇತನ ಕೊಡಲ್ಲ’ ಎನ್ನುತ್ತಿದ್ದಾರೆ. ಆಕೆಗೆ ಆಕೆಯ ವಯಸ್ಸೇ ಭಾರವೆಂಬಂತೆ ಬಿಂಬಿಸಿದ್ದಾರೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕಪಲಾಪುರ ಗ್ರಾಮದ ಲಕ್ಷ್ಮೀಬಾಯಿ ನಾಗಪ್ಪ ಮಹಾಪೂರೆ ಅವರಿಗೆ ಬರೋಬ್ಬರಿ 110 ವರ್ಷ ವಯಸ್ಸು. ಈಗಲೂ ಕಣ್ಣಿಗೆ ಕನ್ನಡಕ ಇಲ್ಲ. ಅಚ್ಚರಿಯೆಂಬಂತೆ ಮತ್ತೆ ಚೂಪಾದ ಹಲ್ಲುಗಳು ಬಂದಿವೆ. ವರ್ಷಕೊಮ್ಮೆಯೂ ದವಾಖಾನೆ ಮೆಟ್ಟಿಲು ಹತ್ತುವುದಿಲ್ಲ ಎಂಬುದು ಗಮನಾರ್ಹ ಸಂಗತಿ.
ಆಕೆಯ ಹತ್ತಿರ ಹೋದರೆ ತಕ್ಷಣ ಯಾರೆಂದು ಗುರುತಿಸಿ ನೋಡುತ್ತಾರೆ. ಜೋರು ಧ್ವನಿಯಿಂದ ಮಾತಾಡುವ ಅಜ್ಜಿಗೆ ಯಾವುದೇ ಕಾಯಿಲೆಗಳಿಲ್ಲ. ಕೈಯಲ್ಲಿ ಕೋಲು ಹಿಡಿದು ಊರೆಲ್ಲ ಸುತ್ತಾಡಿ ಬರುತ್ತಾರೆ ಎಂದು ಆಕೆಯ ಮೊಮ್ಮಗ ಅಂಬಾದಾಸ ಖುಷಿಯಿಂದ ಹೇಳುತ್ತಾರೆ.
ಲಕ್ಷ್ಮೀಬಾಯಿ ಅಜ್ಜಿಗೆ ನಾಲ್ಕು ಜನ ಗಂಡು ಮಕ್ಕಳು, ಒಬ್ಬಳು ಮಗಳಿದ್ದಾಳೆ. 25 ಮೊಮ್ಮಕ್ಕಳು, ಸೇರಿದಂತೆ ಮರಿಮಕ್ಕಳು, ಗಿರಿಮೊಮ್ಮಕ್ಕಳಿದ್ದಾರೆ. ಅಜ್ಜಿಗೆ ಮೊದಲಿನಿಂದಲೂ ಕಿರಿಯ ಮಗ ದಶರಥ ಅವರೇ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ.
ನೂರನೇ ವರ್ಷಕ್ಕೆ ʼಅಜ್ಜಿಯ ತೊಟ್ಟಿಲುʼ ಕಾರ್ಯಕ್ರಮ
ಬಡತನದಲ್ಲಿ ಹುಟ್ಟಿ ಬೆಳೆದ ಅಜ್ಜಿ ಕೂಲಿ ನಾಲಿ ಮಾಡಿ ಬದುಕು ಸವೆಸಿದ್ದಾರೆ. ಕುಟುಂಬದ ನಿರ್ವಹಣೆ ಜತೆಗೆ ಸುತ್ತಲಿನ ಗ್ರಾಮಗಳ ಅದೆಷ್ಟೋ ಮಹಿಳೆಯರಿಗೆ ಹೆರಿಗೆ ಮಾಡಿಸಿಕೊಂಡಿದ್ದಾರೆ. ಗರ್ಭಿಣಿಯರಿಗೆ, ಇತರೆ ಕಾಯಿಲೆಗಳಿಗೆ ಗಿಡಮೂಲಿಕೆ ಔಷಧ ಮಾಡುವುದನ್ನು ತಿಳಿದುಕೊಂಡಿದ್ದಾರೆ. ಹೆರಿಗೆಯಷ್ಟೇ ಅಲ್ಲ, ಕಣ್ಣಿಗೆ ಬಿದ್ದ ಕಸ ತೆಗೆಯುವುದು, ಗಂಟಲಿನ ಶೀತದ ಗಟ್ಟೆ ಹೋಗಲು, ಕಿರುನಾಲಿಗೆ ಬೆಳೆದರೆ, ಕೈಕಾಲು ಮುರಿದರೆ.. ಎಲ್ಲಕ್ಕೂ ಔಷಧ ಮಾಡುತ್ತಿದ್ದರು. ಇದರಿಂದ ಅಜ್ಜಿ ಸುತ್ತಲಿನ ಹತ್ತಾರು ಹಳ್ಳಿಗರಿಗೆ ಚಿರಪರಿಚಿತ.
ಅಜ್ಜಿಗೆ ನೂರು ವರ್ಷ ತುಂಬಿದ ಸಂದರ್ಭದಲ್ಲಿ ಮಕ್ಕಳು, ಮೊಮ್ಮಕ್ಕಳು ಹಾಗೂ ಸಂಬಂಧಿಕರು ಸೇರಿ ತೊಟ್ಟಿಲು ಕಾರ್ಯಕ್ರಮ ಆಯೋಜಿಸಿ ಸಂತಸ ಪಟ್ಟಿದ್ದರು. ಇದೀಗ ಅಜ್ಜಿಗೆ ಹೆಚ್ಚುಕಮ್ಮಿ ನೂರ ಹತ್ತರ ಗಡಿದಾಟಿದ ವಯಸ್ಸು, ಆದರೂ ಇನ್ನೂ ಓಡಾಡಿಕೊಂಡಿದ್ದಾಳೆ. ಹಾಡು ಹೇಳುತ್ತಾಳೆ, ಅಜ್ಜಿಯ ಈ ಲವಲವಿಕೆ ಕಂಡು ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರು ಹೆಮ್ಮೆ ಪಡುತ್ತಾರೆ.
ಬದುಕಿರುವಾಗಲೇ ಮತದಾರರ ಪಟ್ಟಿಯಿಂದ ಹೆಸರು ನಾಪತ್ತೆ:
“2016ನೇ ಸಾಲಿನ ಮತದಾರರ ಪಟ್ಟಿಯಲ್ಲಿ ಅಜ್ಜಿಯ ಹೆಸರಿದೆ, ತದನಂತರ ಮತದಾರರ ಪಟ್ಟಿಯಲ್ಲಿ ಹೆಸರೇ ಇಲ್ಲ. ಅಜ್ಜಿಗೆ ನೂರು ವಯಸ್ಸಾದ ನಂತರ ನಡೆದ ಚುನಾವಣೆಯಗಳಲ್ಲಿ ಮತದಾನಕ್ಕೆ ಹೋಗಲೇ ಇಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿ ಅಜ್ಜಿಯ ಹೆಸರಿರಬಹುದು ಎಂದು ನೋಡಿದರೆ ಹೆಸರೇ ಮಾಯವಾಗಿದೆ. ಯಾವ ಕಾರಣಕ್ಕೆ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿದ್ದಾರೆ ಎಂಬುದು ಅಧಿಕಾರಿಗಳಿಗೆ ಕೇಳಿದರೆ ಸರಿಯಾದ ಮಾಹಿತಿ ಕೊಡುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಪರಿಶೀಲನೆ ನಡೆಸದೇ ಅಜ್ಜಿಯ ಹೆಸರು ಕೈಬಿಟ್ಟಿದ್ದಾರೆ. ಕೂಡಲೇ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಬೇಕು” ಎಂದು ಮೊಮ್ಮಗ ಅಂಬಾದಾಸ ದೂರಿದ್ದಾರೆ.
ಅಜ್ಜಿ ಸತ್ತಿದಾಳೆಂದು ʼವೃದ್ದಾಪ್ಯ ವೇತನʼಕ್ಕೆ ಕತ್ತರಿ:
ಲಕ್ಷ್ಮೀಬಾಯಿ ಅಜ್ಜಿಗೆ ಸುಮಾರು 10 ವರ್ಷಗಳಿಂದ ವೃದ್ದಾಪ್ಯ ವೇತನ ಸ್ಥಗಿತವಾಗಿದೆ. ಆಧಾರ ಬರುವ ಮುಂಚೆಯಿಂದ ವೃದ್ದಾಪ್ಯ ವೇತನ ಪಡೆಯುತ್ತಿದ್ದ ಅಜ್ಜಿಗೆ ನೂರು ವರ್ಷ ಪೂರೈಸಿದ ನಂತರ ಅಧಿಕಾರಿಗಳು ವೇತನ ನೀಡುವುದೇ ಬಂದ್ ಮಾಡಿದ್ದಾರೆ.
ಈ ಬಗ್ಗೆ ನ್ಯೂಸ್ ಕನ್ನಡ ಜೊತೆಗೆ ಮಾತನಾಡಿದ ಲಕ್ಷ್ಮೀಬಾಯಿ, “ಸುಮಾರು ವರ್ಷಗಳಿಂದ ನನಗೆ ವೃದ್ದಾಪ್ಯ ವೇತನ ಬರಲ್ಲ. ಒಮ್ಮೆ ಭಾಲ್ಕಿ ಹೋಗಿ ಅಧಿಕಾರಿಗಳಿಗೆ ಕೇಳಿದರೆ ʼನಿನಗೆ ನೂರು ವಯಸ್ಸಾಗಿದೆ ಇನ್ಮುಂದೆ ವೃದ್ದಾಪ್ಯ ವೇತನ ಬರಲ್ಲʼ ಎಂದು ಹೇಳಿದ್ದಾರೆ. ಬಹುಶಃ ನಾನು ಸತ್ತಿದ್ದೇನೆ ಎಂದು ವೃದ್ದಾಪ್ಯ ವೇತನ ಬಂದ್ ಮಾಡಿದ್ದಾರೆ ಅನ್ಸುತ್ತೆ ಎಂದು ಅಧಿಕಾರಿಗಳ ವಿರುದ್ದ ಅಜ್ಜಿ ಬೇಸರ ವ್ಯಕ್ತಪಡಿಸಿದ್ದಾರೆ.
ಸುಮಾರು ವರ್ಷಗಳಿಂದ ತಾಯಿಗೆ ರೇಷನ್ ಕಾರ್ಡ್ ಇಲ್ಲ, ಅವಳ ಹೆಸರಿನ ಕಾರ್ಡ್ ನನ್ನದಾಗಿದೆ, ಅದರಲ್ಲೂ ತಾಯಿಯ ಹೆಸರಿಲ್ಲ. ಆಧಾರ ನೋಂದಣಿ ವೇಳೆ ಮಾಡಿಸೋಣ ಎಂದರೆ ಬೇಡ ಅಂದಿದ್ದಾಳೆ. ಹೀಗಾಗಿ ಆಧಾರ, ರೇಷನ್ ಕೂಡ ಇಲ್ಲ. ಇನ್ನೂ 15-20 ವರ್ಷಗಳಿಂದ ಮತದಾನ ಸಹ ಮಾಡುತ್ತಿಲ್ಲ ಎಂದು ಕಿರಿಯ ಸುಪುತ್ರ ದಶರಥ ನ್ಯೂಸ್ ಕನ್ನಡ ಜೊತೆಗೆ ಮಾತನಾಡಿ ಹೇಳಿದರು.
ಜೀವಂತವಿದ್ದರೂ ಬದುಕಿಗೆ ಯಾವುದೇ ದಾಖಲೆಯಿಲ್ಲದೆ ಸರ್ಕಾರದ ಸೌಲಭ್ಯದಿಂದ ವಂಚಿತಳಾಗಿ ಬದುಕಿನ ಅಂತಿಮ ದಿನಗಳು ದೂಡುತ್ತಿರುವ ಜಿಲ್ಲೆಯ ಇಳಿವಯಸ್ಸಿನ ಜೀವ ಎಂದರೆ ಬಹುಶಃ ಲಕ್ಷ್ಮೀಬಾಯಿ ಮಹಾಪುರೆ ಒಬ್ಬರೇ ಎಂದರೂ ತಪ್ಪಾಗಲಾರದು.