ಬೆಂಗಳೂರು: ಮಂಗಳೂರು ನಗರ ಉತ್ತರ ಕ್ಷೇತ್ರದ ಮಾಜಿ ಶಾಸಕರಾದ ಮೋಹಿಯುದ್ದೀನ್ ಬಾವ ಅವರ ಮನವಿಗೆ ಸ್ಪಂದಿಸಿದ ವಿಧಾನಪರಿಷತ್ ಸದಸ್ಯ ಬಿಎಂ ಫಾರೂಕ್ ಅವರು, ತುಳು ಭಾಷೆಯನ್ನು ಕರ್ನಾಟಕ ರಾಜ್ಯದ 2 ನೇ ಅಧೀಕೃತ ಭಾಷೆಯನ್ನಾಗಿ ಘೋಷಣೆ ಮಾಡಬೇಕೆಂದು ವಿಧಾನಪರಿಷತ್ ಸದಸ್ಯರಾದ ಬಿಎಂ ಫಾರೂಕ್ ಅವರು ಇಂದು (ಫೆ.28) ರಂದು ವಿಧಾನಪರಿಷತ್ ನಲ್ಲಿ ಸರ್ಕಾರದ ಗಮನ ಸೆಳೆಯುವ ಪ್ರಶ್ನೋತ್ತರ ಕಲಾಪದಲ್ಲಿ ಪ್ರಸ್ತಾಪಿಸಿದ್ದಾರೆ.
ಈ ಕುರಿತಂತೆ ಕರ್ನಾಟಕ ಸರ್ಕಾರದ ಪರವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ ಅವರಿಗೆ ಪ್ರಶ್ನೆ ಮಾಡಿದರು. ಈ ಕುರಿತಂತೆ ಇಂದು ಸದನದಲ್ಲಿ ವಿಸ್ತೃತವಾಗಿ ಚರ್ಚೆಯಾಗಿ ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಈಗಾಗಲೇ ಒಂದಕ್ಕಿಂತ ಹೆಚ್ಚು ಅಧೀಕೃತ ಭಾಷೆಗಳಿರುವ ರಾಜ್ಯಗಳಿಗೆ ವರದಿ ನೀಡುವಂತೆ ಪತ್ರ ಬರೆದು ಈವರೆಗೂ ವರದಿ ಬರದ ಕಾರಣ ಕೂಡಲೇ ಕರ್ನಾಟಕ ಸರ್ಕಾರದ ಪರವಾಗಿ ಅಧಿಕಾರಿಗಳ ತಂಡವನ್ನು ಸದರಿ ರಾಜ್ಯಗಳಿಗೆ ಕಳುಹಿಸಿ ಕೂಡಲೇ ಮಾಹಿತಿ ಕರ್ನಾಟಕ ಸರ್ಕಾರಕ್ಕೆ ತರಿಸಿಕೊಂಡು ಕೆಲವೇ ದಿನಗಳಲ್ಲಿ ತುಳು ಭಾಷೆಯನ್ನು ಕರ್ನಾಟಕದ 2 ನೇ ಅಧೀಕೃತ ಭಾಷೆಯನ್ನಾಗಿ ಘೋಷಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ತುಳು ಭಾಷೆಯನ್ನು ಸಂವಿಧಾನದ 8 ನೇ ಪರಿಚ್ಚೇದಕ್ಕೆ ಸೇರಿಸುವ ನಿಟ್ಟಿನಲ್ಲಿ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಈ ಕುರಿತಂತೆ ಸಹ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಲಾಗುವುದು ಎಂದು ಸದನದಲ್ಲಿ ತಿಳಿಸಿದ್ದಾರೆ.