ಕೊಲ್ಕತ್ತಾ: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಅವರ ಭೂಮಿಯನ್ನು ಕಬಳಿಸಿದ ಸಂದೇಶ್ಖಾಲಿ ಪ್ರಕರಣದ ಪ್ರಮುಖ ಆರೋಪಿ ಶೇಖ್ ಷಹಜಹಾನ್ ಅವರನ್ನು ತೃಣಮೂಲ ಕಾಂಗ್ರೆಸ್ ಇಂದು(ಫೆ.29) ಅಮಾನತುಗೊಳಿಸಿದೆ.
ಪಶ್ಚಿಮ ಬಂಗಾಳ ಪೊಲೀಸರು ಆತನನ್ನು ಬಂಧಿಸಿದ ಕೆಲವೇ ಗಂಟೆಗಳ ನಂತರ, ಪಕ್ಷವು ಷಹಜಹಾನ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಅಮಾನತುಗೊಳಿಸುವ ನಿರ್ಧಾರವನ್ನು ಪ್ರಕಟಿಸಿತು. ಶೇಖ್ ಷಹಜಹಾನ್ ಟಿಎಂಸಿಯಲ್ಲಿ ಹೊಂದಿದ್ದ ಎಲ್ಲಾ ಹುದ್ದೆಗಳನ್ನು ಕಳೆದುಕೊಳ್ಳುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರು ಪಶ್ಚಿಮ ಬಂಗಾಳಕ್ಕೆ ಭೇಟಿಗೆ ಮುನ್ನ ಈ ನಿರ್ಧಾರ ಕೈಗೊಳ್ಳಲಾಗಿದೆ.
ತೃಣಮೂಲ ನಾಯಕರಾದ ಡೆರೆಕ್ ಒಬ್ರೇನ್, ಪಶ್ಚಿಮ ಬಂಗಾಳದ ಸಚಿವ ಬ್ರತ್ಯಾ ಬಸು ಪತ್ರಿಕಾಗೋಷ್ಠಿಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಬಿಜೆಪಿಯು ಸಂದೇಶಖಾಲಿ ವಿಷಯದ ಬಗ್ಗೆ ಅಡ್ಡಿಪಡಿಸಲು ಪ್ರಯತ್ನಿಸುತ್ತಿರುವಾಗ ಪಶ್ಚಿಮ ಬಂಗಾಳ ಸರ್ಕಾರವು ಕಾನೂನಿನ ನಿಯಮವನ್ನು ಎತ್ತಿಹಿಡಿಯಲು ಬದ್ಧವಾಗಿದೆ ಎಂದು ಟಿಎಂಸಿ ನಾಯಕರು ಹೇಳಿದ್ದಾರೆ.