ಶ್ರೀನಿವಾಸ್ ಕಾಲೇಜಿನಲ್ಲಿ 69 ನೆಯ ಕರ್ನಾಟಕ ರಾಜ್ಯೋತ್ಸವ ಸಂಭ್ರಮಾಚರಣೆ

ಮಂಗಳೂರು: ಮುಕ್ಕದಲ್ಲಿರುವ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಬಹಳ ಅದ್ದೂರಿಯಿಂದ ಆಚರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ. ಪಿ. ಶ್ರೀನಾಥ್ ರವರು ಮತ್ತು ಅಗರಿ ಎಂಟರ್ಪ್ರೈಸಸ್ ಸಂಸ್ಥೆಯ ಮಾಲೀಕರಾದ ಶ್ರೀ ಅಗರಿ ರಾಘವೇಂದ್ರ ರಾವ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಶ್ರೀನಿವಾಸ ವಿಶ್ವವಿದ್ಯಾಲಯದ ಗೌರವಾನ್ವಿತ ಸಹಕುಲಾಧಿಪತಿಗಳಾದ ಡಾ. ಎ. ಶ್ರೀನಿವಾಸ್ ರಾವ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಅನಿಲ್ ಕುಮಾರ್, ವಿಶ್ವವಿದ್ಯಾಲಯದ ಅಭಿವೃದ್ಧಿ ಕುಲಸಚಿವರಾದ ಡಾ. ಅಜಯ್ ಕುಮಾರ್, ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಎನ್ ಹೆಗಡೆ, ಕಾರ್ಯಕ್ರಮದ ಸಂಚಾಲಕರಾದ ಪ್ರೊ. ಕೆ. ಶ್ರೀನಾಥ್ ರಾವ್, ವಿದ್ಯಾರ್ಥಿ ಸಂಯೋಜಕರಾದ ಶ್ರೀ ಪ್ರವೀಣ್ ಕೆ ಜೆ, ಶ್ರೀ ವಿಶ್ವನಾಥ್, ಶ್ರೀ ಪುನೀತ್, ಶ್ರೀ ಭರತ್ ಮತ್ತು ಕುಮಾರಿ ಸುನೈನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಾರಂಭವನ್ನು “ಕರ್ನಾಟಕದ ಸ್ವಾಭಿಮಾನದ ನಡೆ”ಯ ಮೂಲಕ ಪ್ರಾರಂಭಿಸಲಾಯಿತು. ರಾಷ್ಟೀಯ ಹೆದ್ದಾರಿಯಿಂದ ಸಭಾ ವೇದಿಕೆಯ ವರೆಗೆ ಆಯೋಜಿಸಿದ್ದ ಕರ್ನಾಟಕದ ಸ್ವಾಭಿಮಾನದ ನಡೆಯಲ್ಲಿ ಬೈಕುಗಳು, ಕಾರುಗಳು, ನೂರಾರು ವಿದ್ಯಾರ್ಥಿಗಳು, ಉಪನ್ಯಾಸಕರು, ಕಾಲೇಜಿನ ಸಿಬ್ಬಂದಿಗಳು ಹಾಗೂ ಮುಖ್ಯ ಅತಿಥಿಗಳು ಭಾಗವಹಿಸಿ, ಕನ್ನಡ ಭಾಷಾಭಿಮಾನದ ಘೋಷಣೆಯನ್ನು ಮುಗಿಲೆತ್ತರಕ್ಕೆ ಮೊಳಗಿಸಿದರು.

ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಹೆಗಡೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಇಂದಿನ ಯುವಜನತೆ ಕನ್ನಡವನ್ನು ಉಳಿಸಿ ಬೆಳೆಸುವ ಪಣ ತೊಡಬೇಕು. ಇಲ್ಲವಾದಲ್ಲಿ ನಮ್ಮ ಭಾಷೆಯಲ್ಲಿ ತಿರುಳು ಇಲ್ಲದಂತಾಗುತ್ತದೆ. ಭಾಷೆ ಇಲ್ಲದ ಜ್ಞಾನ, ಜ್ಞಾನ ಇಲ್ಲದ ಭಾಷೆ, ಎರಡೂ ವ್ಯರ್ಥ. ಮಾತೃ ಭಾಷೆಯ ಶಿಕ್ಷಣದ ಕೊರತೆಯಿಂದಾಗಿ ಅನೇಕ ರಂಗಗಳಲ್ಲಿ ಹಿನ್ನಡೆ ಕಾಣುತ್ತಿದ್ದೇವೆ. ಇದಕ್ಕೆ ಪರಿಹಾರ ಸಿಗುವುದು ಮಾತೃ ಭಾಷೆಯ ಸಮೃದ್ಧ ಬಳಕೆಯ ಮೂಲಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸ

ಉದ್ಘಾಟನಾ ಭಾಷಣವನ್ನು ಮಾಡಿದ ಮುಖ್ಯ ಅತಿಥಿ ಡಾ. ಎಂ ಪಿ ಶ್ರೀನಾಥ್ ರವರು ಮಾತನಾಡಿ, ಇಂದು ಜಗತ್ತಿನಾದ್ಯಂತ ಕನ್ನಡಿಗರು ನಾನಾ ರೂಪಗಳಲ್ಲಿ ಕನ್ನಡದ ಕಂಪನ್ನು ಪಸರಿಸಿದ್ದು, ಇಂದಿನ ಯುವಜನತೆ ಮುಂದಿನ ದಿನಗಳಲ್ಲಿ ಕನ್ನಡದ ತೇರನ್ನು ಎಳೆಯಬೇಕಿದೆ ಎಂದು ಹೇಳಿದರು. ಕನ್ನಡದ ಮೇಲಿನ ಭಾಷಾಭಿಮಾನದ ಬಗ್ಗೆ ಮಾತನಾಡಿದ ಅವರು ಜಿ ಪಿ ರಾಜರತ್ನಮ್, ತಮ್ಮನ್ನು ನರಕಕ್ಕೆ ಹಾಕಿ ನಾಲಿಗೆ ಸೀಳಿದರೂ ಮೂಗಿನಲ್ಲೇ ಕನ್ನಡ ನುಡಿಯುತ್ತೇನೆ ಎಂದ ಘಟನೆ, ಕವಿ ಪಂಜೆ ಮಂಜೇಶ್ವರ ರೈ ಅವರಿಗೆ 22 ಭಾಷೆ ಗೊತ್ತಿದ್ದರೂ ಕನ್ನಡದ ಅಗಾಧ ಸೇವೆ ನಡೆಸಿದ್ದು ಮುಂತಾದವನ್ನು ಉಲ್ಲೇಖಿಸಿದರು. ಇವರನ್ನೇ ಪ್ರೇರಣೆಯಾಗಿ ಇಟ್ಟುಕೊಂಡು ಕೆಲಸ ಮಾಡಬೇಕು. ಕೆಲಸ ಮಾಡಿದರೆ ಪ್ರತಿಫಲ ಸಿಗುತ್ತದೆ. ಕನ್ನಡದ ಕೆಲಸ ಮಾಡಿದರೆ ಖಂಡಿತವಾಗಿ ಅನುಭವದ ಜೊತೆಗೆ ಪ್ರತಿಫಲ ಸಿಗುತ್ತದೆ ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು, ಹಾಗೂ ವಿದ್ಯಾರ್ಥಿಗಳು ಆಯೋಜಿಸಿದ್ದ ಮೆರವಣಿಗೆಯನ್ನು ಅವರು ಮುಕ್ತ ಕಂಠದಿಂದ ಶ್ಲಾಘಿಸಿದರು.

ಮತ್ತೋರ್ವ ಮುಖ್ಯ ಅತಿಥಿ ಶ್ರೀ ಅಗರಿ ರಾಘವೇಂದ್ರ ರಾವ್ ರವರು ಮಾತನಾಡಿ, ದೀಪಾವಳಿಯೊಂದಿಗೆ ಈ ಬಾರಿ ಕನ್ನಡ ರಾಜ್ಯೋತ್ಸವ ಬಂದದ್ದರಿಂದ ಸಂತೋಷ ಈ ಬಾರಿ ಇಮ್ಮಡಿಯಾಗಿದೆ. ಪರ ಊರಿಗೆ ಅಥವಾ ವಿದೇಶಕ್ಕೆ ಹೋದಾಗಲೇ ಕನ್ನಡದ ಮಹತ್ವ ತಿಳಿಯುತ್ತದೆ. ಮಾತೃ ಭಾಷೆ ಜೀವನದ ಮೇಲೆ ಬೀರುವ ಪರಿಣಾಮ ಅನುಭವಕ್ಕೆ ಬರುವುದು ಪರ ಊರಿಗೆ ಹೋದಾಗ. ಮಾತೃ ಭಾಷೆಯಲ್ಲಿ ಜೀವನ ಮೌಲ್ಯಗಳ ಪಾಠ ಸಿಕ್ಕಿದರಷ್ಟೇ ವ್ಯಕ್ತಿತ್ವ ವಿಕಸನ ಸುಲಭ ಸಾಧ್ಯ ಆಗುತ್ತದೆ, ಭವ್ಯವಾದ ಶ್ರೀನಿವಾಸ ವಿಶ್ವವಿದ್ಯಾಲಯವನ್ನು ಕಟ್ಟಿ ಬೆಳೆಸಿದ ಸನ್ಮಾನ್ಯ ಡಾ. ಸಿಎ ರಾಘವೇಂದ್ರ ರಾಯರು ಮಾಡಿರುವುದು ಸಾಹಿತ್ಯ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ಬಲುದೊಡ್ಡ ಕೊಡುಗೆ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು,

ಕಳೆದ ಹಲವಾರು ವರ್ಷಗಳಿಂದ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ ಅದ್ದೂರಿಯಾಗಿ ಆಚರಿಸುತ್ತಿರುವ ಕರ್ನಾಟಕ ರಾಜ್ಯೋತ್ಸವದ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಕನ್ನಡ ಭಾಷೆಯನ್ನು ಕಟ್ಟಿ, ಬೆಳೆಸಿದ ಸಾಧಕರನ್ನು ನಾವು ಸದಾ ಸ್ಮರಿಸಬೇಕು. ಆಂಗ್ಲ ಭಾಷಾ ಮಾಧ್ಯಮದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಇಷ್ಟು ಅದ್ದೂರಿಯಾಗಿ ಆಯೋಜಿಸಿದ್ದು ನಿಜಕ್ಕೂ ಶ್ಲಾಘನೀಯ, ಇಂದು ಮುಕ್ಕದಲ್ಲಿ, ಶ್ರೀನಿವಾಸ ವಿಶ್ವವಿದ್ಯಾಲಯವು ಕನ್ನಡ ಕ್ರಾಂತಿಯನ್ನೇ ಮಾಡಿದೆ. ಕನ್ನಡ ಭಾಷೆಯನ್ನು ಮತ್ತಷ್ಟು ಸಧೃಡಗೊಳಿಸುವ ಕೆಲಸವನ್ನು ಇಂದಿನ ಯುವಪೀಳಿಗೆಯು ಮಾಡಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀನಿವಾಸ್ ವಿಶ್ವವಿದ್ಯಾಲಯದ ಸಹಕುಲಾಧಿಪತಿಗಳಾದ ಡಾ. ಎ. ಶ್ರೀನಿವಾಸ್ ರಾವ್ ರವರು ಮಾತನಾಡಿ, ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವು ಕೇವಲ ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತವಾಗಬಾರದು, ವರ್ಷದ ಎಲ್ಲಾ ದಿನಗಳನ್ನು ಕರ್ನಾಟಕ ರಾಜ್ಯೋತ್ಸವವಾಗಿ ಆಚರಿಸುವ ಮನೋಭಾವವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಸಂಸ್ಕೃತದ ಅಮೃತವನ್ನು ಕೂಡಿಸಿಕೊಂಡು ಬೆಳೆದ ಭಾಷೆ ಕನ್ನಡ. ಈ ಕನ್ನಡ ಭಾಷೆಗೆ ಬಳ್ಳಾರಿ, ಕುಂದಾಪುರ, ಹುಬ್ಬಳ್ಳಿ, ಬೆಂಗಳೂರು ಮುಂತಾದ ಭಾಗಗಳಲ್ಲಿ ವಿಭಿನ್ನ ರೂಪಗಳಿದ್ದರೂ ಪ್ರತಿಯೊಂದಕ್ಕೂ ತನ್ನದೇ ಆದ ಸೊಗಡು ಇರುತ್ತದೆ. ಇದೇ ಕನ್ನಡದ ಶಕ್ತಿ. ಕನ್ನಡವನ್ನು ತಾಂತ್ರಿಕ, ವೈಜ್ಞಾನಿಕ ಶಿಕ್ಷಣದ ಭಾಗವಾಗಿ ಸೇರಿಸಿದಾಗ ವಿದ್ಯಾರ್ಥಿಗಳಿಗೆ ಮಾತೃ ಭಾಷೆಯಲ್ಲಿ ಶಿಕ್ಷಣದ ಲಾಭದ ಜೊತೆಗೆ ವ್ಯಕ್ತಿತ್ವವೂ ಬೆಳೆಯುತ್ತದೆ. ಕನ್ನಡ ಮಾತನಾಡಿದರೆ ಅವಮಾನ ಎನ್ನುವ ಸ್ಥಿತಿ ಹೋಗಿದೆ, ಪ್ರಸ್ತುತ ಕನ್ನಡ ಭಾಷೆಗೆ ವಿಶಿಷ್ಟ ಸ್ಥಾನಮಾನ ಜನರ ಮನಸ್ಸಿನಲ್ಲಿ ಪಡೆಯುತ್ತಿದೆ ಎಂದು ನುಡಿದರು.

ಕಾರ್ಯಕ್ರಮದ ಸಂಚಾಲಕರಾದ ಪ್ರೊ. ಕೆ. ಶ್ರೀನಾಥ್ ರಾವ್ ರವರು ಸ್ವಾಗತ ಭಾಷಣವನ್ನು ಮಾಡಿದರು ಮತ್ತು ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ಮುಖ್ಯ ಅತಿಥಿಗಳು ಪ್ರದಾನ ಮಾಡಿದರು. ವಿದ್ಯಾರ್ಥಿ ಶ್ರೀ ಪ್ರವೀಣ್ ಕೆ. ಜೆ. ಯವರು ವಿಜೇತರ ಮಾಹಿತಿಯನ್ನು ಸಭೆಗೆ ನೀಡಿದರು. ಕುಮಾರಿ ವಿನಯಾ ಭಟ್ ಮತ್ತು ಕುಮಾರಿ ಚೈತ್ರಾ ಸಿ. ಬಿ. ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ವೃಷಭೇಂದ್ರ ಸ್ವಾಮಿ ಐ. ಎಂ. ರವರು ವಂದನಾರ್ಪಣೆ ಸಲ್ಲಿಸಿದರು. ಕುಮಾರಿ ಸ್ವಾತಿ ಕೆ., ವೇದಾವತಿ, ಶ್ರೇಯ ಎಸ್. ಎಂ., ಅಪೇಕ್ಷ ದೇಚಮ್ಮ ವಿ. ಎಲ್. ರವರು ನಾಡಗೀತೆಯನ್ನು ಹಾಡಿದರು.

ಶ್ರೀನಿವಾಸ ವಿಶ್ವವಿದ್ಯಾಲಯದ ಸಹಕುಲಸಚಿವರಾದ ಡಾ. ಜಯಶ್ರೀ ಬೋಳಾರ್, ಸಂಶೋಧನಾ ವಿಭಾಗದ ನಿರ್ದೇಶಕರಾದ ಡಾ. ಪ್ರವೀಣ್ ಬಿ. ಎಂ., ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಪ್ರಾಂಶುಪಾಲರಾದ ಡಾ. ಜೂಬಿ ಮೇರಿ ಚಾಕೋ, ಶ್ರೀನಿವಾಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಉದಯಕುಮಾರ್ ರಾವ್, ಇಂಜಿನಿಯರಿಂಗ್ ಕಾಲೇಜಿನ ಮ್ಯಾನೇಜರ್ ಶ್ರೀ ಮಿಲನ್ ಕಾರಂತ್, ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ, ಸುಮಾರು ಮೂರು ಗಂಟೆಗಳ ಕಾಲ ಕನ್ನಡ ಭಾಷೆ ಮತ್ತು ಗೀತೆಗಳನ್ನು ಆಧರಿಸಿದ ಮನೋರಂಜನಾ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.

Font Awesome Icons

Leave a Reply

Your email address will not be published. Required fields are marked *