ಶ್ರೀನಿವಾಸ್ ಯೂನಿವರ್ಸಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಟಲ್ ಎಫ್.ಡಿ.ಪಿ. ಕಾರ್ಯಾಗಾರ

ಮಂಗಳೂರು: ಮುಕ್ಕದಲ್ಲಿರುವ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ “ಮುಂದಿನ ಪೀಳಿಗೆಯ ಶಕ್ತಿ ಸಂಗ್ರಹ: ಸುಧಾರಿತ ಎಲೆಕ್ಟ್ರಾನಿಕ್ಸ್ ಮತ್ತು ಸಂವೇದಕ ತಂತ್ರಜ್ಞಾನಗಳ ಸಂಯೋಜನೆ” ವಿಷಯದ ಕುರಿತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಪ್ರಾಯೋಜಿತ ಆರು ದಿನಗಳ ಅಟಲ್ ಎಫ್.ಡಿ.ಪಿ. ಕಾರ್ಯಾಗಾರ ಮತ್ತು ತರಬೇತಿ ಶಿಬಿರ ಕಾರ್ಯಕ್ರಮದ ಉದ್ಘಾಟನೆಯನ್ನು ಆಯೋಜಿಸಲಾಯಿತು.

ದೇಶದ ಪ್ರತಿಷ್ಠಿತ ವಿಜ್ಞಾನಿ, ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ಮತ್ತು ರಾಷ್ಟೀಯ ತಂತ್ರಜ್ಞಾನ ಪ್ರಶಸ್ತಿ ವಿಜೇತರು ಹಾಗೂ ಭಾರತ ಸರಕಾರದ ಸ್ವಾಯತ್ತ ಸಂಸ್ಥೆಯಾದ ಜವಾಹರಲಾಲ್ ನೆಹರೂ ಸುಧಾರಿತ ವೈಜ್ಞಾನಿಕ ಸಂಶೋಧನೆ ಕೇಂದ್ರದ ಜೈವಿಕ ರಸಾಯನಶಾಸ್ತ್ರ ಪ್ರಯೋಗಾಲಯ, ಹೊಸ ರಸಾಯನಶಾಸ್ತ್ರ ಘಟಕ ಮತ್ತು ಸುಧಾರಿತ ವಸ್ತುಗಳ ವಿಭಾಗದ ಮುಖ್ಯಸ್ಥರಾದ ಡಾ. ಪ್ರೊ. ತಿಮ್ಮಯ್ಯ ಗೋವಿಂದರಾಜು ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಶ್ರೀನಿವಾಸ ವಿಶ್ವವಿದ್ಯಾಲಯದ ಉಪಕುಲಾಧಿಪತಿಗಳಾದ ಪ್ರೊ. ಕೆ. ಸತ್ಯನಾರಾಯಣ ರೆಡ್ಡಿ ಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಾಗಾರದ ಮುಖ್ಯ ಸಂಚಾಲಕರಾದ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಎನ್. ಹೆಗಡೆ, ಕಾರ್ಯಾಗಾರದ ಸಮನ್ವಯಕಾರರು ಹಾಗೂ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ನವೀನ್ ಕುಮಾರ್ ಜೆ. ಆರ್., ಮತ್ತು ಕಾರ್ಯಾಗಾರದ ಸಹಸಮನ್ವಯಕಾರರು ಹಾಗೂ ಶ್ರೀನಿವಾಸ್ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ನಿರ್ದೇಶಕರಾದ ಡಾ. ಪ್ರವೀಣ್ ಬಿ. ಎಂ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಎನ್. ಹೆಗಡೆ ಯವರು ಮಾತನಾಡಿ, ಭಾರತವು ಬೌದ್ಧಿಕ ಆಸ್ತಿ ಹಕ್ಕುಗಳು ಮತ್ತು ಪೇಟೆಂಟ್ ಕ್ಷೇತ್ರದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಪ್ರಸ್ತುತ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಈ ರೀತಿಯ ಅಟಲ್ ಅಭಿವೃದ್ಧಿ ಕೌಶಲ್ಯ ವರ್ಧಿತ ತರಬೇತಿ ಕಾರ್ಯಕ್ರಮಗಳು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಜ್ಞಾನವನ್ನು ಉತ್ಕೃಷ್ಟಗೊಳಿಸುತ್ತದೆ ಮತ್ತು ಹೆಚ್ಚಿನ ಸಂಖ್ಯೆಯ ಸಂಶೋಧನಾ ಚಟುವಟಿಕೆಗಳನ್ನು ಕೈಗೊಳ್ಳಲು ಅವರನ್ನು ಪ್ರೇರೇಪಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಉದ್ಘಾಟನಾ ಭಾಷಣವನ್ನು ಮಾಡಿದ ಮುಖ್ಯ ಅತಿಥಿ ಡಾ. ತಿಮ್ಮಯ್ಯ ಗೋವಿಂದರಾಜು ರವರು ಮಾತನಾಡಿ, ತಮ್ಮ ಸಂಶೋಧನಾ ವಿಷಯಗಳಾದ ಮೊಲಿಕ್ಯುಲರ್ ಆರ್ಕಿಟೆಕ್ಟೋನಿಕ್ಸ್, ಆಲ್ಝೈಮರ್ ಕಾಯಿಲೆಯ ನಿಯಂತ್ರಣ, ನ್ಯಾನೋ ಆರ್ಕಿಟೆಕ್ಟೋನಿಕ್ಸ್, ಮತ್ತು ಡಿಎನ್ಎ ನ್ಯಾನೊಟೆಕ್ನಾಲಜಿ ಕುರಿತು ಮಾಹಿತಿಯನ್ನು ನೀಡಿದರು. ಶಕ್ತಿಯ ಶೇಖರಣೆ ಬಹಳ ಮುಖ್ಯ, ವಿಜ್ಞಾನ ಮತ್ತು ತಂತ್ರಜ್ಞಾನವು ಸಮಾಜ ಮತ್ತು ರಾಷ್ಟ್ರದ ಪ್ರಗತಿಪರ ಅಭಿವೃದ್ಧಿಗೆ ಸಹಾಯ ಮಾಡುತ್ತದೆ ಮತ್ತು ಸಮಸ್ಯೆಯನ್ನು ಪರಿಹರಿಸುತ್ತದೆ, ಪ್ರಸ್ತುತ ಕ್ವಾಂಟಮ್ ವಿಷಯದ ಮೇಲೆ ಸಂಶೋಧನೆಯು ನಡೆಯುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀನಿವಾಸ್ ವಿಶ್ವವಿದ್ಯಾಲಯದ ಉಪಕುಲಾಧಿಪತಿಗಳಾದ ಪ್ರೊ. ಕೆ. ಸತ್ಯನಾರಾಯಣ ರೆಡ್ಡಿ ಯವರು ಮಾತನಾಡಿ, ಸೂಪರ್ ಕೆಪಾಸಿಟರ್, ಕ್ವಾಂಟಮ್ ಸಿದ್ಧಾಂತಗಳ ಕುರಿತು ಮಾಹಿತಿ ನೀಡಿದರು. ಹೊಸ ತಂತ್ರಜ್ಞಾನಗಳಿಂದ ಮೆಮೊರಿ ಸಾಧನೆಗಳ ಗಾತ್ರ ಕಡಿಮೆಯಾಗಿದೆ, ಹೆಬ್ಬರಿಳಿನ ಗಾತ್ರದ ಸಣ್ಣ ಮೆಮೊರಿ ಕಾರ್ಡ್‌ನಲ್ಲಿ 40 ಬಿಲಿಯನ್ ಪಠ್ಯ ಪುಸ್ತಕಗಳನ್ನು ಸಂಗ್ರಹಿಸಬಹುದು, ಸ್ಮಾರ್ಟ್ ತಂತ್ರಜ್ಞಾನಗಳು ಜೀವನಶೈಲಿ ಮತ್ತು ಜೀವನ ಗುಣಮಟ್ಟವನ್ನು ಬದಲಾಯಿಸಿವೆ. ಪ್ರಪಂಚವು ಸ್ವಯಂ ಚಾಲಿತ ಮತ್ತು ರಿಚಾರ್ಜ್ ಬ್ಯಾಟರಿ ತಂತ್ರಜ್ಞಾನದತ್ತ ಸಾಗುತ್ತಿದೆ. ಇಂಧನದ ಹಾಗೂ ಶಕ್ತಿಯ ಪರಿಣಾಮಕಾರಿ ಮತ್ತು ಸಮರ್ಥ ಬಳಕೆಯಲ್ಲಿ ಹಸಿರು ಶಕ್ತಿ ಸಂಗ್ರಹಣೆ, ಹೈಬ್ರಿಡ್ ಶಕ್ತಿ, ಸೌರ ಶಕ್ತಿ, ವಿದ್ಯುತ್ ವಿತರಣೆಗಾಗಿ ಸ್ಮಾರ್ಟ್ ಗ್ರಿಡ್‌ಗಳು ಉತ್ತಮ ರೀತಿಯಲ್ಲಿ ಸಹಾಯ ಮಾಡುತ್ತಿವೆ ಎಂದು ಹೇಳಿದರು.

ಕಾರ್ಯಾಗಾರದ ಸಹಸಮನ್ವಯಕಾರರು ಹಾಗೂ ಶ್ರೀನಿವಾಸ್ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ನಿರ್ದೇಶಕರಾದ ಡಾ. ಪ್ರವೀಣ್ ಬಿ. ಎಂ. ರವರು ಸ್ವಾಗತ ಭಾಷಣ ಮಾಡಿದರು. ಕಾರ್ಯಾಗಾರದ ಸಮನ್ವಯಕಾರರು ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ನವೀನ್ ಕುಮಾರ್ ಜೆ.ಆರ್. ರವರು ಪ್ರಾಸ್ತಾವಿಕ ಭಾಷಣ ಮತ್ತು ಆರು ದಿನಗಳ ಕಾರ್ಯಾಗಾರದ ಕುರಿತು ಮಾಹಿತಿಯನ್ನು ನೀಡಿದರು.

ಕುಮಾರಿ ಆಶು ಉದಯ್ ಗಾಂವ್ಕರ್ ಪ್ರಾರ್ಥನೆ ಮಾಡಿದರು. ಪ್ರೊ. ಕೆ. ಶ್ರೀನಾಥ್ ರಾವ್ ರವರು ಮುಖ್ಯ ಅತಿಥಿ ಡಾ. ತಿಮ್ಮಯ್ಯ ಗೋವಿಂದರಾಜು ರವರನ್ನು ಸಭೆಗೆ ಪರಿಚಯಿಸಿದರು. ಪ್ರೊ. ರೋಹನ್ ಫೆರ್ನಾಂಡಿಸ್ ಮತ್ತು ಪ್ರೊ. ಶ್ವೇತಾ ಪೈ ಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರೊ. ಶಿಲ್ಪಾ ಎಸ್. ರವರು ಧನ್ಯವಾದ ಸಮರ್ಪಣೆ ಮಾಡಿದರು. ವಿವಿಧ ಇಂಜಿನಿಯರಿಂಗ್ ಕಾಲೇಜುಗಳಿಂದ ಆಗಮಿಸಿದ ಪ್ರತಿನಿಧಿಗಳು, ವಿವಿಧ ಇಂಜಿನಿಯರಿಂಗ್ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Font Awesome Icons

Leave a Reply

Your email address will not be published. Required fields are marked *