ಬೆಂಗಳೂರು: ನಟಿ ನಯನತಾರಾ ನಟಿಸಿರುವ ‘ಅನ್ನಪೂರ್ಣಿ’ ಹೆಸರಿನ ಸಿನಿಮಾದಲ್ಲಿ ಶ್ರೀರಾಮನಿಗೆ ಅಪಮಾನ ಮಾಡಲಾಗಿದ್ದು ಹಿಂದೂ ಭಾವನೆಗಳಿಗೆ ಧಕ್ಕೆಯಾಗಿದೆ ಎಂಬ ಆರೋಪ ಕೇಳಿ ಬಂದಿದ್ದು ನಯನತಾರಾ ಹಾಗೂ ಸಿನಿಮಾಕ್ಕೆ ಸಂಬಂಧಿಸಿದ ಏಳು ಜನರ ವಿರುದ್ಧ ದೂರು ದಾಖಲಾಗಿದೆ.
ಶಿವಸೇನೆ ಮಾಜಿ ನಾಯಕ ರಮೇಶ್ ಸೋಲಂಕಿ ಎಂಬುವರು ಕೆಲ ದಿನದ ಹಿಂದೆ ಸಿನಿಮಾದ ವಿರುದ್ಧ ಮುಂಬೈನ ಪೊಲೀಸ್ ಠಾಣೆಯೊಂದರಲ್ಲಿ ದೂರು ದಾಖಲಿಸಿದ್ದರು. ಇದೀಗ ಮಧ್ಯ ಪ್ರದೇಶದ ಜಬಲ್ಪುರ ಪೊಲೀಸ್ ಠಾಣೆಯಲ್ಲಿ ಸಿನಿಮಾದ ನಟಿ ನಯನತಾರಾ, ನಿರ್ದೇಶಕ ನೀಲೇಶ್ ಕೃಷ್ಣನ್, ನೆಟ್ಫ್ಲಿಕ್ಸ್ ಇಂಡಿಯಾದ ಕಂಟೆಂಟ್ ಹೆಡ್ ಮೋನಿಯಾ, ಸಿನಿಮಾದ ನಿರ್ಮಾಪಕ ಹೀಗೆ ಒಟ್ಟು ಏಳು ಜನರ ವಿರುದ್ಧ ಹಿಂದೂ ಸೇವಾ ಪರಿಷತ್ ದೂರು ದಾಖಲಿಸಲಾಗಿದೆ.
ನಯನತಾರಾ ನಟಿಸಿರುವ ‘ಅನ್ನಪೂರ್ಣಿ’ ಹೆಸರಿನ ಸಿನಿಮಾ ಡಿಸೆಂಬರ್ 1ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು.ಬಳಿಕ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತು. ಆದರೆ ಸಿನಿಮಾಕ್ಕೆ ವಿರೋಧವೂ ವ್ಯಕ್ತವಾಯಿತು.
‘ವನವಾಸದ ಸಮಯದಲ್ಲಿ ರಾಮ, ಸೀತೆ ಹಾಗೂ ಲಕ್ಷ್ಮಣ ಹಸಿವಾದಾಗ ಪ್ರಾಣಿಗಳ ಬೇಟೆ ಆಡಿ ಸೇವಿಸಿದ್ದರು. ರಾಮಾಯಣದಲ್ಲಿ ಈ ಬಗ್ಗೆ ಉಲ್ಲೇಖವಿದೆ’ ಎಂಬ ಸಂಭಾಷಣೆ ಸಿನಿಮಾದಲ್ಲಿದೆ. ಈ ಸಂಭಾಷಣೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಅಲ್ಲದೆ ಸಿನಿಮಾದಲ್ಲಿರುವ ಇತರೆ ಕೆಲವು ದೃಶ್ಯಗಳ ಬಗ್ಗೆಯೂ ಆಕ್ಷೇಪ ಎತ್ತಲಾಗಿದೆ. ಬ್ರಾಹ್ಮಣ ಯುವತಿ ಮಾಂಸಾಹಾರದ ಖಾದ್ಯಗಳನ್ನು ಮಾಡುವುದು, ನಮಾಜು ಮಾಡುವ ದೃಶ್ಯಗಳೂ ಇವೆ. ಇದರ ಬಗ್ಗೆಯೂ ಆಕ್ಷೇಪ ಎತ್ತಲಾಗಿದ್ದು, ಈ ಸಿನಿಮಾ ‘ಲವ್ ಜಿಹಾದ್’ಗೆ ಪ್ರೇರೇಪಣೆ ನೀಡುತ್ತಿದೆ ಎಂಬ ಆರೋಪವನ್ನೂ ಕೆಲವರು ಮಾಡಿದ್ದಾರೆ.