ಬೆಂಗಳೂರು: ಸಂವಿಧಾನದ ಅಡಿಯಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಧ್ವಜ ಹಾರಿಸಲಷ್ಟೇ ಅವಕಾಶವಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದರು.
ಕೆರಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹನುಮ ಧ್ವಜ ಹಾರಿಸಿರುವ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಜಾಗದಲ್ಲಿ ರಾಷ್ಟ್ರೀಯ ಧ್ವಜ ಹಾರಿಸಬಹುದು. ಅದನ್ನು ಹೊರತುಪಡಿಸಿ ಸರ್ಕಾರಿ ಜಾಗದಲ್ಲಿ ಬೇರೆ ಧ್ವಜವನ್ನು ಹಾರಿಸುವಂತಿಲ್ಲ.
ಸ್ಥಳೀಯ ಯುವಕರು ಒಳ್ಳೆಯವರೇ, ಅವರನ್ನ ದಾರಿ ತಪ್ಪಿಸುತ್ತಿದ್ದಾರೆ. ಎಲ್ಲಾ ಯುವಕರ ಜೊತೆ ಮಾತನಾಡುತ್ತೇನೆ. ಖಾಸಗಿ ಜಾಗದಲ್ಲಿ ಅಥವಾ ದೇವಾಲಯದ ಮುಂದೆ ಹನುಮಾನ್ ಧ್ವಜ ಹಾರಿಸಲು ಅವಕಾಶ ಕೊಡೋಣ. ಆದರೆ ಸರ್ಕಾರಿ ಕಚೇರಿ ಮುಂದೆ ಬೇಡ ಎಂದು ಹೇಳಿದರು.
ತ್ರಿವರ್ಣ ಧ್ವಜಕ್ಕೆ ಅನುಮತಿ ಪಡೆದು ಬೇರೆ ಧ್ವಜ ಹಾರಿಸೋದು ತಪ್ಪು. ಸೋಮವಾರ ಬೆಳಗ್ಗೆ ಡಿಸಿ ಕಚೇರಿ ಮುಂದೆ ಹಾರಿಸುತ್ತೇನೆ ಎನ್ನುತ್ತಾರೆ. ಆಗ ಅವಕಾಶ ಕೊಡಲು ಆಗುತ್ತಾ? ಇದು ಒಂದು ಕಡೆ ಅವಕಾಶ ಕೊಟ್ಟರೆ ಎಲ್ಲಾ ಕಡೆ ಕೇಳುತ್ತಾರೆ. ಇದು ತಪ್ಪು ಎಂದರು.
ಸರ್ಕಾರಿ ಕಚೇರಿ ಮುಂದೆ ಹನುಮ ಧ್ವಜ ಹಾರಿಸಿರುವುದು ಸಂವಿಧಾನಕ್ಕೆ ವಿರುದ್ಧ ಆಗಿರುವುದರಿಂದ ಅದನ್ನು ತೆರವು ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.