ಸಚಿವರ ಗಮನಕ್ಕೆ : ವಾಹನಗಳ ನಂಬರ್‌ ಪ್ಲೇಟ್‌ ಪತ್ತೆ ಹಚ್ಚಲು ಕೃತಕ ಬುದ್ದಿಮತ್ತೆಯ ಕ್ಯಾಮರಾಗಳಿಗೆ ಸಾಧ್ಯವೇ? » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


 

Minister’s attention: Is it possible for artificial intelligence cameras to detect the number plates of these vehicles?

ಮೈಸೂರು, ಜು,30,2024: (www.justkannada.in news) ರಸ್ತೆ ಅಪಘಾತದಿಂದ, ಪ್ರತಿದಿನ ಹಲವು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.ಈ ಸಂಬಂಧವಾಗಿ ರಾಜ್ಯಾದ್ಯಂತ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿರುತ್ತದೆ.ಸದರಿ ಕ್ಯಾಮರಾಗಳು ದಿನಾಂಕ:01/06/2024 ರಿಂದ ಚಾಲನೆಗೊಳ್ಳುತ್ತಿದ್ದು ಸಂಚಾರ ನಿಯಮಗಳ ಉಲ್ಲಂಘನೆ (ಹೆಲ್ಮೆಟ್ ಧರಿಸದೇ ಚಲಿಸುವುದು, ಟ್ರಿಪಲ್ ರೈಡಿಂಗ್, ಸೀಟ್ ಬೆಲ್ಟ್ ಧರಿಸದೇ ಇರುವುದು (ಕೋ ಪ್ಯಾಸೆಂಜರ್ ಒಳಗೊಂಡಂತೆ),ಹಾಗೂ ವಾಹನ ಚಾಲನೆಯಲ್ಲಿ ಮೊಬೈಲ್ ಬಳಕೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುವುದು ಎಂದು ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.

ಪ್ರಕರಣ ದಾಖಲಾದ ಮಾಹಿತಿಯನ್ನು ತಕ್ಷಣವೇ ಸದರಿ ವಾಹನದ ನೊಂದಾಯಿತ ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್ ಕಳುಹಿಸಲಾಗುವುದು. ಹಾಗೂ ವಾಹನದ ವಾರಸುದಾರರ ವಿಳಾಸಕ್ಕೆ ಚಲನ್ ರವಾನಿಸಲಾಗುವುದು. ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನದ ಮಾಲೀಕರು/ಚಾಲಕರು ಆನ್‌ಲೈನ್ ವೆಬ್ ಸೈಟ್ ಅಥವಾ  ಹತ್ತಿರದ ಪೊಲೀಸ್ ಠಾಣೆಯಲ್ಲಿ ಸದರಿ ದಂಡದ ಮೊತ್ತವನ್ನು ಕೂಡಲೇ ಪಾವತಿ ಮಾಡಬೇಕಾಗಿರುತ್ತದೆ.

ದಂಡ ಪಾವತಿಸದಿದ್ದಲ್ಲಿ ಮೋಟಾರು ವಾಹನ ಕಾಯ್ದೆ 1988 ಕಲಂ 187ರನ್ವಯ 3 ತಿಂಗಳು ಕಾರಾಗೃಹವಾಸ ಅಥವಾ ರೂ.500/-ಗಳ ದಂಡ ಅಥವಾ ಎರಡನ್ನೂ ಅನುಭವಿಸಬೇಕಾಗುತ್ತದೆ ಎಂದೂ ಪೊಲೀಸರು ಎಚ್ಚರಿಸಿದ್ದಾರೆ.

ಆದರೆ…

ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳಿಗೆ ನಂಬರ್ ಪ್ಲೇಟುಗಳೇ ಇಲ್ಲದಿದ್ದರೆ/ನಂಬರ್ ಪ್ಲೇಟ್ ಗೋಚರಿಸದಿದ್ದರೆ/ನಂಬರ್ ಪ್ಲೇಟ್ ಮರೆಮಾಚಿದ್ದರೆ,ನಂಬರ್ ಪ್ಲೇಟ್ ಮುರಿದು ಹೋಗಿದ್ದರೆ,ನಂಬರ್ ಪ್ಲೇಟಿನ ನಂಬರ್ ಮೇಲೆ ಸ್ಟಿಕ್ಕರ್ ಅಂಟಿಸಿದ್ದರೆ ಅಂತಹ ವಾಹನಗಳ ಮಾಲೀಕರನ್ನು ಪೊಲೀಸರು ಪತ್ತೆ ಹಚ್ಚುವುದು ಹೇಗೆ?ಪ್ರಕರಣ ದಾಖಲಿಸುವುದು ಹೇಗೆ?ದಂಡ ವಿಧಿಸುವುದು ಹೇಗೆ?

ರಾಜ್ಯದಲ್ಲಿ ಸಂಚರಿಸುವ 50% ವಾಹನಗಳ ನಂಬರ್ ಪ್ಲೇಟ್ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕುವುದಿಲ್ಲ. ಟ್ರಕ್, ಲಾರಿ, ಗೂಡ್ಸ್ ಆಟೋ ಮುಂತಾದ ವಾಹನಗಳ ನಂಬರ್ ಪ್ಲೇಟ್ ಕಂಬಿಗಳ ಹಿಂದೆ ಅವಿತಿರುತ್ತದೆ.ಲಾರಿಗಳ ನಂಬರ್ ಪ್ಲೇಟಗಳಿಗೆ ಧೂಳು/ಸಿಮೆಂಟ್ ಮೆತ್ತಲಾಗಿರುತ್ತದೆ.ಮರಳಿನ ಲಾರಿಗಳ ನಂಬರ್ ಪ್ಲೇಟನ್ನು ಮಡಚಲಾಗಿರುತ್ತದೆ. ಸರಕಾರೀ ವಾಹನಗಳೂ ಸೇರಿದಂತೆ ಹಲವು ವಾಹನಗಳ ನಂಬರ್ ಪ್ಲೇಟ್ ಉದ್ದೇಶಪೂರ್ವಕವಾಗಿ ಮುರಿದಿರುತ್ತದೆ.

ಪಲ್ಸರ್,ಹೋಂಡಾ,ಯೂನಿಕಾರ್ನ್, ಬಜಾಜ್,ಟಿ ವಿ ಎಸ್ ಮುಂತಾದ ಬೈಕ್ ಎದುರಿನ ನಂಬರ್ ಪ್ಲೇಟ್ ಡೂಮಿನ ಅಡಿಯಲ್ಲಿ ತಲೆ ಮರೆಸಿಕೊಂಡಿರುತ್ತದೆ.ಇಂತಹ ವಾಹನಗಳ ನಂಬರ್ ಪ್ಲೇಟನ್ನು ಗಮನಿಸಬೇಕಾದರೆ ರಸ್ತೆಯಲ್ಲಿ ಮಲಗಿ ವಾಹನದಡಿ ನುಗ್ಗಿ ಓದಬೇಕಾಗುತ್ತದೆ.

ಬೈಕಿನ ಡೂಮಿನ ಕೆಳಗೆ ಹಾಗೂ ಗೂಡ್ಸ್ ವಾಹನಗಳ ಕಂಬಿಗಳ ಹಿಂದೆ ಅವಿತಿರುವ ನಂಬರ್ ಪ್ಲೇಟಿನಲ್ಲಿರುವ ಸಂಖ್ಯೆಯನ್ನು 20 ಅಡಿ ಎತ್ತರದಲ್ಲಿ ಅಳವಡಿಸಿರುವ ಕ್ಯಾಮರಾ ಕಣ್ಣು ಸೆರೆ ಹಿಡಿಯಲು ಸಾಧ್ಯವೇ?ಖಂಡಿತಾ ಇಲ್ಲ.

ಇಂತಹ ವಾಹನಗಳನ್ನು ಪತ್ತೆ ಹಚ್ಚುವುದು ಸಹಜ ಬುದ್ದಿಮತ್ತೆ ಹೊಂದಿರುವವರಿಂದಲೂ ಸಾಧ್ಯವಿಲ್ಲ.ಇನ್ನು ಕೃತಕ ಬುದ್ದಿಮತ್ತೆಯ ಕ್ಯಾಮರಾಗಳಿಗೆ ಸಾಧ್ಯವೇ?

ನಂಬರ್ ಪ್ಲೇಟ್ ಮರೆಮಾಚಿ ತಯಾರಾಗುತ್ತಿರುವ ಹೊಸ ಹೊಸ ದ್ವಿಚಕ್ರ ವಾಹನಗಳ ಕಂಪನಿಯ ವಿರುದ್ಧ ಆರ್ ಟಿ ಒ ಹಾಗೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲವೇಕೆ?

ನಂಬರ್ ಪ್ಲೇಟ್ ಗೋಚರಿಸದಂತೆ ತಯಾರಿಸಿದ ಬೈಕ್ ಹಾಗೂ ಇತರ ವಾಹನಗಳ ತಯಾರಕರ ವಿರುದ್ಧ ಕ್ರಮ ಕೈಗೊಳ್ಳಲು ಸಾರಿಗೆ ಇಲಾಖೆ ಹಿಂಜರಿಯುತ್ತಿರುವುದೇಕೆ.

ಆರ್ ಟಿ ಒ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ನಂಬರ್ ಪ್ಲೇಟ್ ಮರೆಮಾಚಿರುವ ವಾಹನಗಳ ಸಂಖ್ಯೆ ಹೆಚ್ಚಾಗಿ ಅಪರಾಧಗಳೂ ಹೆಚ್ಚುತ್ತಿವೆ.

ವಿರೂಪಗೊಂಡ,ಮಡಚಿರುವ,ಮುರಿದ,ಹಾಗೂ ಅವಿತಿರುವ ನಂಬರ್ ಪ್ಲೇಟುಗಳುಳ್ಳ ವಾಹನಗಳನ್ನು ಪತ್ತೆ ಹಚ್ಚಿ ದಂಡಿಸಿದರೆ 75% ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳು ಕಡಿಮೆಯಾಗುತ್ತದೆ.

ಹೆಲ್ಮೆಟ್ ಧರಿಸದ ವಾಹನ ಸವಾರರು ಹಾಗೂ ಸೀಟ್ ಬೆಲ್ಟ್ ಧರಿಸದ ವಾಹನ ಸವಾರರು ಅಪಘಾತದಲ್ಲಿ ಮೃತರಾದರೆ ಅದು ಸ್ವಯಂಕೃತಾಪರಾಧ.ಇದು ಆತ್ಮಹತ್ಯೆಗೆ ಸಮ.

ಆದರೆ ನಂಬರ್ ಪ್ಲೇಟನ್ನು ಮರೆಮಾಚಿ ಅಥವಾ ನಂಬರ್ ಪ್ಲೇಟ್ ಕಳಚಿಟ್ಟು ವಾಹನ ಸವಾರಿ/ಚಾಲನೆ ಮಾಡುವವರಿಂದ ಸಮಾಜ ಘಾತುಕ ಕೃತ್ಯಗಳು ನಡೆಯಬಹುದು.

ಹಾಗಾಗಿ ಪೊಲೀಸರು ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಕಾರ್ಯಾಚರಣೆಯನ್ನು ಬದಿಗಿಟ್ಟು,ನಂಬರ್ ಪ್ಲೇಟ್ ಕಾರ್ಯಾಚರಣೆಯತ್ತ ಗಮನಹರಿಸಿದರೆ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳ ಜೊತೆಗೆ ಗಂಭೀರ ಅಪರಾಧಗಳ ಸಂಖ್ಯೆಯೂ ಇಳಿಮುಖವಾಗಬಹುದು.

-ಪಿ.ಜೆ.ರಾಘವೇಂದ್ರ ನ್ಯಾಯವಾದಿ ಮೈಸೂರು

key words:  Minister’s attention, Is it possible, for artificial intelligence, cameras, to detect, the number plates, of these vehicles?

Font Awesome Icons

Leave a Reply

Your email address will not be published. Required fields are marked *