ಬೆಂಗಳೂರು,ಮಾರ್ಚ್,27,2024 (www.justkannada.in): ಸಚಿವ ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣರಿಗೆ ಕೋಲಾರ ಟಿಕೆಟ್ ನೀಡದಂತೆ ಆಗ್ರಹಿಸಿ ಐವರು ಕಾಂಗ್ರೆಸ್ ಶಾಸಕರು ರಾಜೀನಾಮೆಗೆ ನಿರ್ಧರಿಸಿದ್ದಾರೆ ಎನ್ನಲಾಗಿತ್ತು. ಹಾಗೆಯೇ ಇಬ್ಬರು ಎಂಎಲ್ ಸಿಗಳಾದ ನಜೀರ್ ಅಹ್ಮದ್ ಮತ್ತು ಅನಿಲ್ ಕುಮಾರ್ ಸಭಾಪತಿ ಕಚೇರಿಗೆ ಆಗಮಿಸಿದ್ದು ರಾಜೀನಾಮೆ ಹೈಡ್ರಾಮಾವೇ ನಡೆದಿದೆ.
ರಾಜೀನಾಮೆ ಸಲ್ಲಿಸಲು ಸಭಾಪತಿ ಬಸವರಾಜ ಹೊರಟ್ಟಿ ಕಚೇರಿಗೆ ಬಂದ ಇಬ್ಬರು ಎಂಎಲ್ ಸಿಗಳು ರಾಜೀನಾಮೆ ಪತ್ರ ಪ್ರದರ್ಶಿಸಿ ನಂತರ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಈ ಮೂಲಕ ಸಭಾಪತಿ ಹೊರಟ್ಟಿ ಕಚೇರಿಯಲ್ಲಿ ಪೊಲಟಿಕಲ್ ಹೈಡ್ರಾಮಾ ನಡೆದಿದೆ.
ಈ ಕುರಿತು ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಕಾಂಗ್ರೆಸ್ ಸದಸ್ಯರು ಇನ್ನೂ ರಾಜೀನಾಮೆ ಕೊಟ್ಟಿಲ್ಲ. ಅವರು ರಾಜೀನಾಮೆ ಕೊಡದೇ ನಾವು ಕಸಿದುಕೊಳ್ಳುವುದಕ್ಕೆ ಆಗಲ್ಲ. ಅವರು ರಾಜೀನಾಮೆ ಕೊಟ್ಟರೇ ಸ್ವೀಕಾರ ಮಾಡುತ್ತೇನೆ. ಅವರು ಇನ್ನೂ ರಾಜೀನಾಮೆ ಕೊಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದರು.
ಮುನಿಯಪ್ಪ ವಿರುದ್ದ ನಜೀರ್ ಅಹ್ಮದ್ ಕಿಡಿ.
ಇದೇ ವೇಳೆ ಮಾತನಾಡಿದ ಎಂಎಲ್ ಸಿ ನಜೀರ್ ಅಹ್ಮದ್, ನಾನು ಸಚಿವನಾಗಿದ್ದಾಗ ಮುನಿಯಪ್ಪ ನನ್ನ ಹಿಂದೆ ಬರ್ತಿದ್ದ. ಕೋಲಾರ ಟಿಕೆಟ್ ಸಂಜೆ ತೀರ್ಮಾನವಾಗುತ್ತೆ. ಅಭ್ಯರ್ಥಿ ಬದಲಾವಣೆಗೆ ಕಡೇ ಅಸ್ತ್ರ ಬಳಸಿದ್ದೇವೆ. ಸಂಜೆ ಸಿಎಂ ಡಿಸಿಎಂ ಜೊತೆ ಚರ್ಚೆ ಮಾಡುತ್ತೇವೆ. ಕ್ಷೇತ್ರದಲ್ಲಿ ಗೆಲ್ಲುವಂತಹ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಆಗ್ರಹಿಸುತ್ತೇವೆ ಎಂದರು.
ರಾಜೀನಾಮೆ ನೀಡಲೆಂದೇ ಬಂದಿದ್ದವು. ಆದರೆ ಸಿಎಂ ಡಿಸಿಎಂ ನಾವು ಬರುವವರೆಗೆ ಕಾಯಿರಿ ಎಂದಿದ್ದಾರೆ. ನಾವು ಯಾವಾಗ ಬೇಕಾದರೂ ರಾಜೀನಾಮೆ ಕೊಡಬಹುದು ಎಂದು ನಜೀರ್ ಅಹ್ಮದ್ ತಿಳಿಸಿದರು.
Key words: Resignation,congress,MLCs