ಬೆಂಗಳೂರು ನವೆಂಬರ್,24,2023(www.justkannada.in): ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಜಾರಿ ಆಗೋದಿಲ್ಲ, ಜಾರಿ ಆದರೆ ರಾಜ್ಯ ಆರ್ಥಿಕ ದಿವಾಳಿ ಆಗುತ್ತದೆ ಎಂದು ಪ್ರಧಾನಿ ಮೋದಿ ಸೇರಿ ಬಿಜೆಪಿ ನಾಯಕರು ಆಡಿಕೊಂಡಿದ್ದರು. ಈಗ ನಾಡು ಶತಕೋಟಿ ಸಂಭ್ರಮ ಆಚರಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ಸಾರಿಗೆ ಇಲಾಖೆ ಬ್ಯಾಂಕ್ವೆಟ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಶಕ್ತಿ ಯೋಜನೆಯ ಶತಕೋಟಿ ಸಂಭ್ರಮ ಕಾರ್ಯಕಮವನ್ನು ಉದ್ಘಾಟಿಸಿ ಅಪಘಾತ ರಹಿತ ಚಾಲಕರಿಗೆ ಚಿನ್ನದ ಪದಕ ಪ್ರದಾನ ಮಾಡಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
ಸಮಾಜದ ಎಲ್ಲಾ ವರ್ಗದ ಶಕ್ತಿ ತುಂಬುವ ವಿಚಾರದಲ್ಲಿ ಇಟ್ಟ ಹೆಜ್ಜೆ ಹಿಂದಿಡುವುದಿಲ್ಲ. ದೇಶದ ಯಾವ ಸರ್ಕಾರಗಳೂ ಹಿಂದೆಂದೂ ಮಾಡದ ಸಾಧನೆಯನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ಸಾಧಿಸಿ ತೋರಿಸಿದೆ. ಇದು ಕಣ್ಣ ಮುಂದಿದೆ. ಆದರ ದಾಖಲೆ ಕಣ್ಣ ಮುಂದಿದೆ. ಬಿಜೆಪಿಯವರು ನಿರ್ಲಜ್ಜವಾಗಿ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು ಎಂದರು.
ಜೂನ್ 11 ಕ್ಕೆ ಶಕ್ತಿ ಯೋಜನೆ ಜಾರಿ ಆಯಿತು. ನವೆಂಬರ್ 23 ಕ್ಕೆ 100 ಕೋಟಿ 47 ಲಕ್ಷ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ದಾಖಲೆಗಳು ಕಣ್ಣ ಮುಂದಿವೆ. ಆದರೂ ಈ ಬಿಜೆಪಿ ನಾಯಕರು ಯಾಕಿಷ್ಟು ಸುಳ್ಳು ಹೇಳುತ್ತಾರೆ ಎಂದು ಪ್ರಶ್ನಿಸಿದರು.
ಬಸ್ ಪ್ರಯಾಣಿಕರಲ್ಲಿ ಶೇ. 55 ರಷ್ಟು ಉಚಿತ ಬಸ್ ಪ್ರಯಾಣ ಮಾಡಿದ ಮಹಿಳೆಯರೇ ಸೇರಿದ್ದಾರೆ. ಮಹಿಳೆಯರಿಗೆ ಆರ್ಥಿಕವಾಗಿ ಶಕ್ತಿ ತುಂಬುವುದು ನಮ್ಮ ಗುರಿ. ವಿರೋಧ ಪಕ್ಷದವರ ಹೊಟ್ಟೆಕಿಚ್ಚಿನ ಟೀಕೆಗಳಿಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.
1 ಕೋಟಿ 17 ಲಕ್ಷ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡು ಇವರಲ್ಲಿ 1 ಕೋಟಿ 10 ಲಕ್ಷ ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ರೂಪಾಯಿ ತಲುಪುತ್ತಿದೆ. ಎಲ್ಲಾ ಜಾತಿ-ಧರ್ಮದ ಬಡವರು ಮಧ್ಯಮ ವರ್ಗದವರ ಮಹಿಳೆಯರಿಗೆ ಈ ಸೌಲಭ್ಯ ತಲುಪುತ್ತಿದೆ. ಇದು ಬಿಜೆಪಿಯವರ ಹೊಟ್ಟಿಕಿಚ್ಚಿಗೆ ಕಾರಣವಾಗಿದೆ ಎಂದು ವಿವರಿಸಿದರು.
ಜತೆಗೆ ಕೋಟಿ ಕೋಟಿ ಮನೆಗೆ ಉಚಿತ ವಿದ್ಯುತ್ ಮತ್ತು ಅಕ್ಕಿ ಹಾಗೂ ಅಕ್ಕಿಯ ಹಣವನ್ನು ಜನರ ಮಡಿಲಿಗೆ ಹಾಕುತ್ತಿದ್ದೇವೆ. ಜನರ ದುಡ್ಡು ಜನರ ಜೇಬಿಗೆ ಹಾಕಿದರೆ ಬಿಜೆಪಿಯವರಿಗೆ ಹೊಟ್ಟೆಯುರಿ ಏಕೆ ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಗಿ ಪ್ರಶ್ನಿಸಿದರು.
ಬಡವರ ಕೈಯಲ್ಲಿ ದುಡ್ಡು ಇರಬೇಕು ಎನ್ನುವುದು ನಮ್ಮ ಗುರಿ. ಹಣ ಇದ್ದರೆ ಆರ್ಥಿಕತೆಗೆ ಚೈತನ್ಯ ಬರುತ್ತದೆ. ಈ ಚೈತನ್ಯ ತುಂಬುವ ಕಾರ್ಯಕ್ರಮವನ್ನು ನಾವು ಘೋಷಿಸಿ, ಸಾಧಿಸಿ ತೋರಿಸಿದ್ದೀವಿ. ಜನರಿಗೆ ನಾವು ಕೊಟ್ಟ ಹಣ ವಾಪಾಸ್ ಸರ್ಕಾರಕ್ಕೇ ಬರುತ್ತದೆ. ನಾವು ಪುನಃ ಜನರ ಜೇಬಿಗೆ ಅದೇ ಹಣವನ್ನು ಹಾಕುತ್ತೇವೆ. ಇದರಿಂದ ಜಿಡಿಪಿ , ಆರ್ಥಿಕ ಚಟುವಟಿಕೆ ವೃದ್ಧಿಯಾಗುತ್ತದೆ ಎಂದು ವಿವರಿಸಿದರು.
ಮಹಿಳೆಯರಿಗೆ ಆರ್ಥಿಕ ಶಕ್ತಿ ಕೊಡುವ ಜತೆಗೆ ಸಮಾಜದ ಎಲ್ಲಾ ವರ್ಗದ ಬಡವರಿಗೆ-ಮಧ್ಯಮ ವರ್ಗದವರಿಗೆ ಶಕ್ತಿ ತುಂಬುವ ವಿಚಾರದಲ್ಲಿ ಇಟ್ಟ ಹೆಜ್ಜೆ ಹಿಂದಿಡುವುದಿಲ್ಲ ಎಂದು ಸಿಎಂ ದಿಟ್ಟವಾಗಿ ಮಾತನಾಡಿದರು.
ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಮತ್ತು ಮಾಜಿ ಶಾಸಕಿ ಸೌಮ್ಯ ರೆಡ್ಡಿ ಸೇರಿ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Key words: empower- all -sections – society-Siddaramaiah