ಬೆಂಗಳುರು: ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಉದ್ಯೋಗಾಕಾಂಕ್ಷಿಗಳಿಂದ ಲಕ್ಷಲಕ್ಷ ದೋಚಿದ ಪರಿಣಾಮ ಕಾಂಗ್ರೆಸ್ಸ್ ನಾಯಕಿ ಸಂಧ್ಯಾ ಪವಿತ್ರಾ ನಾಗರಾಜ್ ವಿರುದ್ಧ ದೂರು ದಾಖಲಾಗಿದೆ.
ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಪ್ರಿಯಾಂಕ್ ಖರ್ಗೆ ಸೇರಿದಂತೆ ರಾಜ್ಯ ಕಾಂಗ್ರೆಸ್ಸ್ ನ ಪ್ರಮುಖ ಮುಖಗಳೊಂದಿಗೆ ನಿಂತು ಫೋಟೊ ತೆಗೆಸಿಕೊಂಡಿರುವ ಪವಿತ್ರಾ, ತನ್ನನ್ನು ತಾನು ಸೆಲೆಬ್ರಿಟಿಯಂತೆ ಬಿಂಬಿಸಿಕೊಂಡು, ಕೆಲಸ ಕೇಳಿಕೊಂಡು ಬಂದವರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಭರವಸೆ ಕೊಟ್ಟಿದ್ದು, ಅದಕ್ಕೆ ಬದಲಾಗಿ ಹಣ ಪಡಿದಿದ್ದಾರೆ.
ಈ ಬಗ್ಗೆ ಹಲವಾರು ದೂರುಗಳು ದಾಖಲಾಗಿದ್ದು, ಕೊಟ್ಟ ಮಾತಿನಂತೆ ಕೆಲಸ ಕೊಡಿಸದೆ, ತೆಗೆದುಕೊಂಡ ಹಣವನ್ನೂ ಹಿಂದಿರುಗಿಸದೆ ಸತಾಯಿಸುತ್ತಿದ್ದಾರೆಂದು ತಿಳಿದುಬಂದಿದೆ.
ಬೆಂಗಳೂರು ನಿವಾಸಿ ವೀಣಾ ಎಂಬುವವರಿಗೆ ಫೇಸ್ ಬುಕ್ ಮೂಲಕ ಪರಿಚಯವಾದ ಸಂಧ್ಯಾ, ಎಮ್ಎಸ್ ಬಿಲ್ಡಿಂಗ್ ನಲ್ಲಿ ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ೨೦ ಲಕ್ಷ ಪಡೆದಿದ್ದರು. ಇದೀಗ ಅವರ ವಿರುದ್ಧ ದೂರು ನೀಡಿರುವ ವೀಣಾ, ಕೆಲಸ ಕೊಡಿಸಲಿಲ್ಲ, ಕೊಟ್ಟ ಹಣವನ್ನೂ ಹಿಂದಿರುಗಿಸುತ್ತಿಲ್ಲ ಎಂದು ಉಲ್ಲೇಖಿಸಿದ್ದಾರೆ.
ಬಾರೊಂದರಲ್ಲಿ ಕೆಲಸ ಮಾಡುತ್ತಿದ್ದ ರಂಗಸ್ವಾಮಿಯಿಂದ ೩.೫೦ ಲಕ್ಷ ಹಾಗು ಅವನ ಸಹೋದರಿ ರೂಪಾರಿಂದ ೩.೫೦ ಲಕ್ಷ ಪಡೆದುಕೊಂಡ ಹರೀಶ್ ಎಂಬುವನು ಅದನ್ನು ಸಂಧ್ಯಾಳಿಗೆ ಕೊಟ್ಟಿರುವುದಾಗಿ ಹೇಳಿದ್ದ. ರೂಪಾ ಖುದ್ದಾಗಿ ಹೋಗಿ ವಿಚಾರಿಸಿದಾಗ ೭.೭೦ ಲಕ್ಷಕ್ಕೆ ಸಂಧ್ಯಾ ಕೈಚಾಚಿದ್ದಾರೆ. ಅಷ್ಟು ಹಣ ವ್ಯಯಿಸಿಯೂ ಕೆಲಸ ಆಗದಾಗ ಮೂವರು ವಂಚಕರ ವಿರುದ್ಧ ಜಯನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಭಾನುಪ್ರಕಾಶ್, ಹರೀಶ್, ಸಂಧ್ಯಾ ಪವಿತ್ರ ನಾಗರಾಜ್ ವಿರುದ್ಧ ದೂರು ದಾಖಲಾಗಿದೆ.
ಇತ್ತ ಯಾದಗಿರಿಯ ಯುವಕ ಚಂದ್ರುವಿನಿಂದಲೂ ಸಂಧ್ಯಾ ಹಣ ಕಿತ್ತಿದ್ದು, ಹಾಸಿಗೆ ಹಿಡಿದಿರುವ ಆತ ಕೊಟ್ಟ ಹಣವನ್ನಾದರೂ ಹಿಂದಿರುಗಿಸಲಿ ಎಂದು ಗೋಳಿಟ್ಟಿದ್ದಾನೆ.