ಬಂಟ್ವಾಳ: ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿಯ ಸ್ಥಾಪಕಾಧ್ಯಕ್ಷ, ಸಾಮಾಜಿಕ ಹೋರಾಟಗಾರ ಬಿ.ಎಂ.ಪ್ರಭಾಕರ ದೈವಗುಡ್ಡೆ (71) ಕೆಲಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಶನಿವಾರ ರಾತ್ರಿ ನಿಧನ ಹೊಂದಿದರು. ಪತ್ನಿ, ಪುತ್ರಿಯನ್ನು ಅವರು ಅಗಲಿದ್ದಾರೆ.
ರೈತ, ಕಾರ್ಮಿಕ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ ಅವರು, ಸಾಮಾಜಿಕ ನ್ಯಾಯಪರ ಹೋರಾಟ ಸಮಿತಿ, ಸಮಾನ ಮನಸ್ಕ ಸಂಘಟನೆಗಳ ಸಮನ್ವಯ ಸಮಿತಿಯ ಸ್ಥಾಪನೆ ಮಾಡಿ ಜನಪರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಟೂರಿಸ್ಟ್ ಕಾರು ಚಾಲಕ ಮತ್ತು ಮಾಲೀಕರ ಸಂಘದ ಬಂಟ್ವಾಳ ತಾಲೂಕು ಸ್ಥಾಪಕಾಧ್ಯಕ್ಷರಾಗಿ, ಪ್ರಸ್ತುತ ಗೌರವಾಧ್ಯಕ್ಷರೂ ಆಗಿದ್ದ ಅವರು ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟ, ಟೋಲ್ ಗೇಟ್ ವಿರೋಧಿ ಹೋರಾಟ, ಹೆದ್ದಾರಿ ಅಭಿವೃದ್ಧಿ ಪರ ಹೋರಾಟ ಸಹಿತ ಹಲವು ಜನಪರ ಹೋರಾಟಗಳನ್ನು ಸಂಘಟಿಸುವ ಮೂಲಕ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸುತ್ತಿದ್ದರು.
ಸಾಮಾಜಿಕ ಸಮಸ್ಯೆಗಳು ಹಾಗೂ ಸಮಕಾಲೀನ ವ್ಯವಸ್ಥೆಯಲ್ಲಿನ ಅಸಮಾನತೆಗಳ ವಿರುದ್ಧ ಧ್ವನಿ ಎತ್ತುತ್ತಿದ್ದ ಅವರು, ಸದಾ ಸಮಸ್ಯೆಗಳ ವಿರುದ್ಧ ಹೋರಾಟವನ್ನು ಸಂಘಟಿಸುತ್ತಿದ್ದರು. ಅವರ ನಿಧನಕ್ಕೆ ವಿವಿಧ ಜನಪರ ಸಂಘಟನೆಗಳು ಸಂತಾಪ ವ್ಯಕ್ತಪಡಿಸಿವೆ.