ಕಲಬುರಗಿ: ಪ್ರತಿಯೊಬ್ಬರಿಗೆ ಸರ್ಕಾರದ ಸೇವೆಗಳು ಸಕಾಲಕ್ಕೆ ಸಿಗುವಂತೆ ನೋಡಿಕೊಳ್ಳಬೇಕು. ಮಕ್ಕಳಿಗೆ ಹಾಗೂ ಸಾಮಾನ್ಯ ಜನರಿಗೆ ಆರೋಗ್ಯ ಇಲಾಖೆಯ ಎಲ್ಲಾ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸುವುದು ಬಹಳ ಮುಖ್ಯ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆರ್‌ಸಿಎಚ್ ಕಾರ್ಯಾಲಯ ಹಾಗೂ ಜಿಮ್ಸ್ ಸರ್ಕಾರಿ ಆಸ್ಪತ್ರೆ ಸಹಯೋಗದಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆ (ಆರ್‌ಬಿಎಸ್‌ಕೆ) ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
ಮಕ್ಕಳು ಹಾಗೂ ತಾಯಿಯೊಂದಿಗೆ ವೈದ್ಯರು ಮಾತನಾಡಬೇಕು. ಸರಿಯಾದ ಸಮಯಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಅವರ ಅರೋಗ್ಯದ ಕಡೆಗೆ ಗಮನಹರಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಭಂವರ ಸಿಂಗ್ ಮೀನಾ, ಆರ್‌ಸಿಎಚ್ ಅಧಿಕಾರಿ ಡಾ.ಶರಣಬಸಪ್ಪ ಕ್ಯಾತನಾಳ ಮಾತನಾಡಿ, ‘ಬಿಎಸ್‌ಕೆ ಯೋಜನೆ ಅಡಿಯಲ್ಲಿ 0-18 ವರ್ಷದ ಎಲ್ಲಾ ಶಾಲಾ ಮಕ್ಕಳಿಗೆ ಮತ್ತು ಅಂಗನವಾಡಿ ಮಕ್ಕಳಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಲಾಗುವುದು. ತಾಯಂದಿರು ತಮ್ಮ ಮಗುವಿನ ಅರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು’ ಎಂದರು.
ಶಿಬಿರದಲ್ಲಿ 366 ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಲಾಯಿತು. ಅಪೌಷ್ಟಿಕತೆಯುಳ್ಳ ಮಕ್ಕಳು 120, ತೀವ್ರ ಅಪೌಷ್ಟಿಕತೆಯುಳ್ಳ 62 ಮಕ್ಕಳು, ಶ್ರವಣ ದೋಷವುಳ್ಳ 34 ಮಕ್ಕಳು, ಶಸ್ತ್ರಚಿಕಿತ್ಸೆಗೆ ಒಳಗಾದ 51 ಮಕ್ಕಳು, ಇಎನ್‌ಟಿ ಚಿಕಿತ್ಸೆಗೆ ಒಳಗಾದ 42 ಮಕ್ಕಳು ಹಾಗೂ ಸಾಮಾನ್ಯ ರೋಗಲಕ್ಷಣಗಳ 60 ಮಕ್ಕಳು ಶಿಬಿರದ ಲಾಭ ಪಡೆದುಕೊಂಡರು.
ಜಿಮ್ಸ್ ಆಸ್ಪತ್ರೆಯ ಡಾ.ಅಂಬಾರಾಯ ರುದ್ರವಾಡಿ, ಜಿಮ್ಸ್ ಮೆಡಿಕಲ್ ಮುಖ್ಯಸ್ಥರು ಡಾ.ಶಿವಕುಮಾರ, ಜಿಲ್ಲಾ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ರೇವಣಸಿದ್ದಪ್ಪ ಬೊಸ್ಗಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಾರುತಿ ಕಾಂಬಳೆ, ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವಿಠ್ಠಲ ಪತ್ತಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮೇಶೇಕರ್ ಹಂಚಿನಳ, ಬಿಆರ್‌ಸಿ ಪ್ರಕಾಶ ರಾಠೋಡ, ಸಿಡಿಪಿಒ ಭೀಮರಾಯ ಕಣ್ಣೂರ್ ಹಾಜರಿದ್ದರು.