ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ರಾಜ್ಯ ಗುತ್ತಿಗೆದಾರರ ಸಂಘ ಅಧ್ಯಕ್ಷ ಕೆಂಪಣ್ಣ. – Just Kannada | Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್

ಬೆಂಗಳೂರು,ಫೆಬ್ರವರಿ,13,2024(www.justkannada.in): ಗುತ್ತಿಗೆದಾರರ ಸಮಸ್ಯೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಅಭಿನಂದನೆಗಳನ್ನ ಸಲ್ಲಿಸುತ್ತಿರುವುದಾಗಿ ರಾಜ್ಯ ಗುತ್ತಿಗೆದಾರರ ಸಂಘ ಅಧ್ಯಕ್ಷ ಕೆಂಪಣ್ಣ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಡಿ. ಕೆಂಪಣ್ಣ, ವಿವಿಧ ಇಲಾಖೆಗಳಲ್ಲಿ ಉಳಿದಿರುವ ಬಾಕಿ ಮೊತ್ತವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ವಿವಿಧ ಇಲಾಖೆಗಳ ಸಚಿವರನ್ನು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಅಭಿನಂದಿಸುತ್ತದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್,  ವಸತಿ ಸಣ್ಣ ನೀರಾವರಿ ಇಲಾಖೆಗಳಲ್ಲಿ ಬಾಕಿ ಇರುವ ಬಿಲ್ ಮೊತ್ತ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ನಿರಂತರವಾಗಿ ಸರ್ಕಾರದ ಜೊತೆಯಲ್ಲಿ ನಡೆದ ಸಭೆಗಳಲ್ಲಿ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಮತ್ತು ಸಚಿವರು ಈ ಭರವಸೆಯನ್ನು ನೀಡಿರುತ್ತಾರೆ.

ಲೋಕೋಪಯೋಗಿ ಇಲಾಖೆಯಲ್ಲಿ ಸಣ್ಣ ಗುತ್ತಿಗೆದಾರರ ಬಿಲ್‌ಗಳನ್ನು ಪಾವತಿ ಮಾಡಿರುವುದಕ್ಕೆ ಮುಖ್ಯಮಂತ್ರಿಗಳು ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಅಭಿನಂದಿಸುತ್ತೇವೆ ಎಂದು ಕೆಂಪಣ್ಣ ತಿಳಿಸಿದ್ದಾರೆ.

ಲೋಕೋಪಯೋಗಿ ಇಲಾಖೆಯಲ್ಲಿ ಸಣ್ಣ ಗುತ್ತಿಗೆದಾರರ ಬಿಲ್‌ ಗಳನ್ನು ಆದ್ಯತೆ ಮೇಲೆ ಪಾವತಿಸುವ ಹೊಸ ಸೂತ್ರವೊಂದನ್ನು ಲೋಕೋಪಯೋಗಿ ಇಲಾಖೆ ಅಳವಡಿಸಿಕೊಂಡಿದೆ. ಅಪೆಂಡಿಕ್ಸ್‌–ಇ ಅಡಿಯಲ್ಲಿನ ಕಾಮಗಾರಿಗಳ ಬಾಬ್ತು 1,054 ಸಣ್ಣ ಗುತ್ತಿಗೆದಾರರ ಬಿಲ್‌ ಗಳನ್ನು ಒಂದೇ ಬಾರಿಗೆ ಪಾವತಿಸಲಾಗಿದೆ. ಸಣ್ಣ ಗುತ್ತಿಗೆದಾರರಿಗೆ ಏಕ ಕಾಲಕ್ಕೆ ಸುಮಾರು 800 ಕೋಟಿ ರೂಪಾಯಿ ಬಿಡುಗಡೆ ಮಾಡಿರುವುದು ಒಂದು ದಾಖಲೆಯೇ ಸರಿ ಎಂದು ಕೆಂಪಣ್ಣ ತಿಳಿಸಿದ್ದಾರೆ.

ಅಪೆಂಡಿಕ್ಸ್‌–ಇ ಅಡಿಯಲ್ಲಿ ಜಿಲ್ಲಾ ಮುಖ್ಯ ರಸ್ತೆಗಳು ಮತ್ತು ರಾಜ್ಯ ಹೆದ್ದಾರಿಗಳ ನಿರ್ವಹಣೆ ಹಾಗೂ ಸುಧಾರಣೆ ಕಾಮಗಾರಿ ಕೈಗೊಂಡಿದ್ದ 1,945 ಗುತ್ತಿಗೆದಾರರಿಗೆ ಮೂರು ವರ್ಷಗಳಿಂದ ಬಿಲ್‌ ಗಳ ಪಾವತಿ ಬಾಕಿ ಇತ್ತು. ವಿಶೇಷವಾಗಿ ಸಣ್ಣ ಗುತ್ತಿಗೆದಾರರು ತೀವ್ರವಾಗಿ ಸಂಕಷ್ಟಕ್ಕೆ ಸಿಲುಕಿದ್ದರು. ಸಣ್ಣ ಗುತ್ತಿಗೆದಾರರ ಬಾಕಿ ಬಿಲ್‌ ಗಳನ್ನು ಆದ್ಯತೆಯ ಮೇಲೆ ಪಾವತಿಸಲು ಸೂತ್ರವೊಂದನ್ನು ರೂಪಿಸುವಂತೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದರು.

ಬಿಬಿಎಂಪಿಯಲ್ಲಿಯೂ ಬಾಕಿ ಬಿಲ್ ಪಾವತಿ ಮಾಡಲು ಉಪ ಮುಖ್ಯಮಂತ್ರಿಗಳು ಕ್ರಮವಹಿಸಿದ್ದಾರೆ. ಈ ನಿಟ್ಟಿನಲ್ಲಿ ಸಂಘದ ಪದಾಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಚರ್ಚೆ ನಡೆಸುತ್ತಿದ್ದಾರೆ.

ಇದೇ ತಿಂಗಳ 16ರಂದು ಮುಖ್ಯಮಂತ್ರಿಗಳು ತಮ್ಮ ದಾಖಲೆಯ ಬಜೆಟ್ ಮಂಡನೆ ಮಾಡಲಿದ್ದಾರೆ. ಸರ್ಕಾರದಲ್ಲಿ ಅನುದಾನ ಇದ್ದಷ್ಟೇ ಟೆಂಡರ್ ಗಳು ಕರೆಯಬೇಕು ಮತ್ತು ಎಲ್ಲಾ ಇಲಾಖೆಗಳಲ್ಲಿ ಬಾಕಿ ಇರುವ ಬಿಲ್ ಗಳನ್ನು ಪಾವತಿಸಬೇಕು ಎಂದು ಎಂದು ಕೆಂಪಣ್ಣ ಮನವಿ ಮಾಡಿದ್ದಾರೆ.

ವಿವಿಧ ಇಲಾಖೆಗಳಲ್ಲಿ ಅನಾವಶ್ಯಕವಾಗಿ ಆಹ್ವಾನಿಸಿರುವ ಪ್ಯಾಕೆಜ್ ಟೆಂಡರ್ ಗಳನ್ನು  ರದ್ದುಗೊಳಿಸಿ ಪ್ರತಿಯೊಂದು ಕಾಮಗಾರಿಗೂ ಪ್ರತ್ಯೇಕವಾಗಿ ಟೆಂಡರ್ ಕರೆಯಲು ಸಂಘ ಈ ಹಿಂದೆ ಆಗ್ರಹಪಡಿಸಿತ್ತು. ಆ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ತಿಳಿದು ಬಂದಿದೆ. ಭವಿಷ್ಯದಲ್ಲಿ ಅನಾವಶ್ಯಕವಾಗಿ ಪ್ಯಾಕೇಜ್ ಟೆಂಡರ್ ಆಹ್ವಾನಿಸಬಾರದು ಎಂದು ರಾಜ್ಯದ ಸಮಸ್ತ ಗುತ್ತಿಗೆದಾರರ ಪರವಾಗಿ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇವೆ ಎಂದು ಕೆಂಪಣ್ಣ ತಿಳಿಸಿದ್ದಾರೆ.

Key words: State- Contractors –Association-Kempanna -congratulated – CM Siddaramaiah- government.

Font Awesome Icons

Leave a Reply

Your email address will not be published. Required fields are marked *