ಸಿಖ್‌ ಸಮುದಾಯಕ್ಕೆ ಪ್ರವರ್ಗ ನಿಗದಿಪಡಿಸಲು ಮನವಿ

ಬೀದರ್: ಸಿಖ್‌ ಸಮುದಾಯಕ್ಕೆ ರಾಜ್ಯದಲ್ಲಿ ಪ್ರವರ್ಗ ನಿಗದಿಪಡಿಸಬೇಕೆಂದು ಆ ಸಮುದಾಯದವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದಾರೆ.

ಅಲ್ಪಸಂಖ್ಯಾತ ಸಮುದಾಯದ ಮುಖಂಡರೊಂದಿಗೆ ಬೆಂಗಳೂರಿನಲ್ಲಿ ಮಂಗಳವಾರ ನಡೆಸಿದ ಬಜೆಟ್‌ ಪೂರ್ವಭಾವಿ ಸಭೆ ಬಳಿಕ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಿ ಕೋರಿದ್ದಾರೆ.

ಸಿಖ್ ಅಲ್ಪಸಂಖ್ಯಾತ ಸಮುದಾಯವನ್ನು ಹೊರತುಪಡಿಸಿ ಇತರೆ ಎಲ್ಲಾ ಅಲ್ಪಸಂಖ್ಯಾತ ಸಮುದಾಯಗಳಿಗೆ ವರ್ಗ ಸಂಖ್ಯೆಗಳನ್ನು (ಕೆಟಗರಿ) ನೀಡಲಾಗಿದೆ. ಆದರೆ, ಸಿಖ್ಖರಿಗೆ ಪ್ರವರ್ಗ ನಿಗದಿಪಡಿಸದ ಕಾರಣ ಸಾಮಾನ್ಯ ವರ್ಗದಲ್ಲಿ ಪರಿಗಣಿಸಲಾಗುತ್ತಿದೆ. ಶಿಕ್ಷಣ, ಸರ್ಕಾರಿ ನೌಕರಿ ಸೇರಿದಂತೆ ಇತರೆ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ರಾಜ್ಯದಲ್ಲಿ ಬೀದರ್‌ ಜಿಲ್ಲೆಯಲ್ಲಿ ಸಿಖ್ಖರು ಉತ್ತಮ ಸಂಖ್ಯೆಯಲ್ಲಿದ್ದಾರೆ. ಅದರಲ್ಲಿ ಅನೇಕರು ಬಡವರಿದ್ದಾರೆ. ಅವರ ಅಭಿವೃದ್ಧಿಗೆ ವಿಶೇಷ ಅನುದಾನ ಬಿಡುಗಡೆಗೊಳಿಸಬೇಕೆಂದು ಮನವಿ ಮಾಡಿದ್ದಾರೆ.

ಸರ್ಕಾರದಿಂದ ಕಲ್ಪಿಸಿರುವ ಕಾನೂನುಬದ್ಧ ಹಕ್ಕುಗಳು ಮತ್ತು ಪ್ರಯೋಜನಗಳನ್ನು ನಿರ್ಲಕ್ಷಿತ ಸಿಖ್‌ ಸಮುದಾಯಕ್ಕೆ ಒದಗಿಸಿ ಸಾಮಾಜಿಕ ನ್ಯಾಯದ ಪಾಲು ಕೊಡಬೇಕೆಂದು ಕೋರಿದ್ದಾರೆ.

ಗುರುದ್ವಾರ ಝೀರಾ ನಾನಕ ಕಮಿಟಿಯ ಅಧ್ಯಕ್ಷ ಸರ್ದಾರ್‌ ಬಲಬೀರ್‌ ಸಿಂಗ್‌, ಮನಪ್ರೀತ್‌ ಸಿಂಗ್‌, ಖನುಜಾ ಸಭೆಯಲ್ಲಿ ಪಾಲ್ಗೊಂಡಿದ್ದರು. ಅಲ್ಪಸಂಖ್ಯಾತ ಇಲಾಖೆಯ ಸಚಿವ ಜಮೀರ್ ಅಹಮ್ಮದ್‌ ಖಾನ್, ಸಚಿವ ಕೆ.ಜೆ.ಜಾರ್ಜ್‌, ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್, ಪೌರಾಡಳಿತ ಸಚಿವ ರಹೀಂ ಖಾನ್, ವಿಧಾನ ಪರಿಷತ್ ಸದಸ್ಯ ಸಲೀಂ ಅಹಮ್ಮದ್‌ ಉಪಸ್ಥಿತರಿದ್ದರು.

Font Awesome Icons

Leave a Reply

Your email address will not be published. Required fields are marked *