ಬೆಂಗಳೂರು, ಆಗಸ್ಟ್ 3,2024 (www.justkannada.in): ಕಾಂಗ್ರೆಸ್ ನ ಭ್ರಷ್ಟಾಚಾರದಿಂದಾಗಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗ ಪಿಎಸ್ ಐ ಮೃತಪಟ್ಟಿದ್ದಾರೆ. ಸಿದ್ದರಾಮಯ್ಯ ಅವರಿಗೆ ಇನ್ನು ಸಿಎಂ ಸ್ಥಾನದಲ್ಲಿ ಉಳಿಯಲು ಯಾವುದೇ ನೈತಿಕತೆ ಇಲ್ಲ. ಅವರು ಕೂಡಲೇ ರಾಜೀನಾಮೆ ನೀಡಿ ಮನೆಗೆ ಹೋಗಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವನ್ನು ವಿರೋಧಿಸಿ ಕೆಂಗೇರಿಯಿಂದ ಆರಂಭವಾದ ಬಿಜೆಪಿ-ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಆರ್.ಅಶೋಕ್, ಬಿಜೆಪಿಯನ್ನು ಜನರು ವಿಧಾನಸಭೆಗೆ ಕಳುಹಿಸಿರುವುದೇ ಭ್ರಷ್ಟಾಚಾರವನ್ನು ಮಟ್ಟ ಹಾಕಲು. ಸಿಎಂ ಸಿದ್ದರಾಮಯ್ಯ ಮುಡಾದಲ್ಲಿ 14 ಸೈಟು ಕೊಳ್ಳೆ ಹೊಡೆದ ನಂತರ ಅವರ ಬೆಂಬಲಿಗರು 300 ಸೈಟು ದೋಚಿದ್ದಾರೆ. ಅವರ ಪಕ್ಷದವರೇ 3-4 ಸಾವಿರ ಕೋಟಿ ರೂ. ಲೂಟಿಯಾಗಿದೆ ಎಂದು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ದಲಿತರ ಜಮೀನಿನ ನಿವೇಶನಗಳನ್ನು ಸಿಎಂ ಸಿದ್ದರಾಮಯ್ಯ ಪಡೆದಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ರಾಜ್ಯಪಾಲರಿಗೆ ನೋಟಿಸ್ ಕೊಡಲು ಅಧಿಕಾರವಿದೆಯಾ ಎಂದು ಇವರು ಪ್ರಶ್ನೆ ಮಾಡುತ್ತಾರೆ. ಬಿ.ಎಸ್ .ಯಡಿಯೂರಪ್ಪ ಸಿಎಂ ಆಗಿದ್ದಾಗ ಖಾಸಗಿ ದೂರು ಆಧರಿಸಿ ಯಡಿಯೂರಪ್ಪ ವಿರುದ್ಧ ಕ್ರಮ ವಹಿಸಿದ್ದರು. ಕಾಂಗ್ರೆಸ್ ನಾಯಕರು ಕೇವಲ ನೋಟಿಸ್ ಗೆ ಗಢಗಢ ಎನ್ನುತ್ತಿದ್ದಾರೆ. ಕಾಂಗ್ರೆಸ್ ಈಗ ಒಡೆದ ಮನೆಯಾಗಿದೆ. ಇಂತಹ ಕಾಂಗ್ರೆಸ್ ನ ಭ್ರಷ್ಟಾಚಾರದ ವಿರುದ್ಧ ನಾವೆಲ್ಲರೂ ಹೋರಾಟ ಮಾಡುತ್ತಿದ್ದೇವೆ. ಕೆಂಗೇರಿಯಲ್ಲಿ ಭೂ ಸ್ವಾಧೀನ ಮಾಡಿ ಪರಿಹಾರವಾಗಿ ಎಂ.ಜಿ.ರಸ್ತೆಯಲ್ಲಿ ನಿವೇಶನ ನೀಡಿದರೆ ಅದು ನ್ಯಾಯವೇ? ನೂರಾರು ಕಾನೂನು ಪ್ರಶ್ನೆಗಳು ನಮ್ಮ ಮುಂದಿದೆ ಎಂದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ವಿರುದ್ಧ ಸದನದಲ್ಲಿ ಮಾತನಾಡಿದ್ದೇವೆ. ಆದರೆ ಮುಡಾ ಹಗರಣದ ಬಗ್ಗೆ ಮಾತನಾಡಲು ಅವಕಾಶ ನೀಡಿಲ್ಲ. ಅದಕ್ಕಾಗಿ ಬೀದಿಗಿಳಿದು ಹೋರಾಡುತ್ತಿದ್ದೇವೆ. ಕಾಂಗ್ರೆಸ್ ವಿರೋಧ ಪಕ್ಷವಾಗಿಯೇ ಪ್ರಶ್ನೆ ಕೇಳಬೇಕಿತ್ತು. ಈಗ ನಾವು ಹೋರಾಟ ಆರಂಭಿಸಿದ ಬಳಿಕ, ರೈಲು ಹೋದ ಬಳಿಕ ಟಿಕೆಟ್ ಪಡೆದಂತೆ ಹಿಂದಿನ ಸರ್ಕಾರದ ಬಗ್ಗೆ ಪ್ರಶ್ನೆ ಕೇಳುತ್ತಿದ್ದಾರೆ. ಇದಕ್ಕೆ ಜನರು ಬೆಲೆ ಕೊಡುವುದಿಲ್ಲ. ಇವರ ಮೇಲೆ ಆರೋಪ ಬಂದಿದ್ದಕ್ಕೆ ಈಗ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ ಅಷ್ಟೆ ಎಂದರು.
ಎರಡು ಹಗರಣಗಳ ಬಗ್ಗೆ ಮೊದಲು ಕಾಂಗ್ರೆಸ್ ಸರ್ಕಾರ ಜನರಿಗೆ ಉತ್ತರ ನೀಡಲಿ. ನಂತರ ನಮ್ಮ ಹಿಂದಿನ ಸರ್ಕಾರದ ವಿರುದ್ಧ ತನಿಖೆ ಮಾಡಿಕೊಳ್ಳಲಿ ಎಂದರು.
ಯಾದಗಿರಿಯ ಪಿಎಸ್ ಐ ಪರಶುರಾಮ್ ವರ್ಗಾವಣೆಗಾಗಿ ಲಂಚ ಕೊಡಲಾಗದೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿ ಜನರನ್ನು ಲೂಟಿ ಮಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಹೃದಯಾಘಾತವಾಗುವಂತೆ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಮಾಡಲಿದೆ ಎಂದರು.
187 ಕೋಟಿ ರೂ. ಹಣ ಉಳಿಸಲು ಹೋಗಿ ಪ್ರಾಮಾಣಿಕ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡರು. ಈಗ ಪಿಎಸ್‌ಐ ಸತ್ತಿದ್ದಾರೆ. ಈ ಸರ್ಕಾರ ಯಾವುದೇ ಅಧಿಕಾರಿಗಳನ್ನು ಬಿಡುವುದಿಲ್ಲ. ಸಿದ್ದರಾಮಯ್ಯ ಅವರಿಗೆ ಇನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಉಳಿಯಲು ನೈತಿಕತೆ ಇಲ್ಲ. ಅವರು ಕೂಡಲೇ ರಾಜೀನಾಮೆ ನೀಡಿ ಮನೆಗೆ ಹೋಗುವುದು ಸೂಕ್ತ. ಕಾಂಗ್ರೆಸ್‌ನ ಲಂಚಾವತಾರದ ವಿರುದ್ಧ ನಿಲ್ಲುವವರಿಗೆ ಬಿಜೆಪಿ ಸದಾ ಬೆಂಬಲ ನೀಡಲಿದೆ. ಅಂತಹವರ ಪರವಾಗಿ ನಾನು ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
Key words: CM Siddaramaiah, resign, immediately, R.Ashok