ಕಳೆದ ವಾರ ಬಿಡುಗಡೆ ಆಗಿದ್ದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ತನ್ನ ಗೆಲುವಿನ ಹಾವಳಿಯನ್ನು ವಿದೇಶದವರೆಗೂ ಕೊಂಡೊಯ್ದಿದೆ. ಕರ್ನಾಟಕದಲ್ಲೂ ಚಿತ್ರಕ್ಕೆ ಮಗದಷ್ಟು ಚಿತ್ರಮಂದಿರಗಳು ಸಿಕ್ಕಿವೆ. ಹೀಗಿರುವಾಗಲೇ ಒಂದು ವಾರ ಕಳೆದುಹೋಗಿದೆ. ಮತ್ತೊಂದು ಸಿನಿ ಶುಕ್ರವಾರ (ಜುಲೈ 28) ಬಂದಿದೆ. ಈ ವಾರವೂ ಹಲವು ಸಿನಿಮಾಗಳು ತೆರೆಕಂಡಿವೆ.
‘ಆಚಾರ್ & ಕೋ’
ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಆಚಾರ್ ಅಂಡ್ ಕೋ ಸಿನಿಮಾ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿದೆ. ಸಿಂಧು ಶ್ರೀನಿವಾಸಮೂರ್ತಿ ಅವರ ಚೊಚ್ಚಲ ನಿರ್ದೇಶನದ ‘ಆಚಾರ್ & ಕೋ’ ಚಿತ್ರ ಕೇವಲ ಶೀರ್ಷಿಕೆಯಲ್ಲಿ ಮಾತ್ರವಲ್ಲದೆ, ಮಹಿಳೆಯರೇ ಒಟ್ಟಾಗಿ ಸೇರಿ ಈ ಸಿನಿಮಾ ತೆರೆಗೆ ತಂದಿದ್ದಾರೆ.
‘ಕೌಸಲ್ಯ ಸುಪ್ರಜಾ ರಾಮ’
ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ ಕೌಸಲ್ಯ ಸುಪ್ರಜಾ ರಾಮ ಸಿನಿಮಾ ರಾಜ್ಯಾದ್ಯಂತ ತೆರೆಕಂಡಿದೆ. ಈಗಾಗಲೇ ನಿರ್ದೇಶಕನಾಗಿ ಹತ್ತು ಹಲವು ಸಿನಿಮಾಗಳನ್ನು ನೀಡಿರುವ ಶಶಾಂಕ್ ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಹಾಡು ಮತ್ತು ಟ್ರೇಲರ್ ಮೂಲಕವೇ ಕೊಂಚ ಕುತೂಹಲ ಮೂಡಿಸಿರುವ ಈ ಸಿನಿಮಾದಲ್ಲಿ ಕೃಷ್ಣಗೆ ಬೃಂದಾ ಆಚಾರ್ಯ ಜೋಡಿಯಾಗಿದ್ದಾರೆ.
‘ಡೈಮಂಡ್ ಕ್ರಾಸ್’
ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ರೀತಿಯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದನ್ನೇ ಆಧರಿಸಿ ದಾವಣಗೆರೆಯ ಯುವ ಉತ್ಸಾಹಿ ತಂಡವೊಂದು ಡೈಮಂಡ್ ಕ್ರಾಸ್ ಹೆಸರಿನಲ್ಲಿ ಸಿನಿಮಾ ಮಾಡಿದ್ದು, ರಾಜ್ಯಾದ್ಯಂತ ಇಂದು (ಜು. 28) ತೆರೆಕಂಡಿದೆ.
‘ನವ ಇತಿಹಾಸ’
ಹೆಣ್ಣಿನ ಭ್ರೂಣ ಹತ್ಯೆಗೆ ಸಂಬಂಧಿಸಿದ ‘ನವ ಇತಿಹಾಸ’ ಸಿನಿಮಾ ಸಹ ಇಂದು ತೆರೆಕಂಡಿದೆ. ಶ್ರೀರಜನಿ ಮತ್ತು ಸಮರ್ಥ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಬಹುತೇಕರು ಹೊಸಬರೇ ನಟಿಸಿದ್ದಾರೆ.
‘ಆರ’
ಹೊಸಬರ ಹೊಸ ಪ್ರಯತ್ನವೊಂದು ಈ ವಾರ ತೆರೆಗೆ ಬಂದಿದೆ. ಆ ಚಿತ್ರವೇ ಆರ. ಅಶ್ವಿನ್ ವಿಜಯ್‌ಮೂರ್ತಿ ನಿರ್ದೇಶನದ ಈ ಸಿನಿಮಾದಲ್ಲಿ ದೈವ ಶಕ್ತಿ ಮತ್ತು ದುಷ್ಟ ಶಕ್ತಿಯ ಕಥಾಹಂದರವನ್ನು ಆಯ್ದುಕೊಂಡು ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಈ ಸಿನಿಮಾ ಸಿದ್ಧವಾಗಿದೆ.
ಇನ್ನು ಯಾವ ಸಿನಿಮಾ ಗಲ್ಲಾಪೆಟ್ಟಿಯಲ್ಲಿ ಸದ್ದು ಮಾಡಲಿದೆ, ಯಾವ ಚಿತ್ರ ಸಿನಿ ಪ್ರೇಕ್ಷಕರ ಮನ ಮುಟ್ಟಲಿದೆ ಎಂಬುದನ್ನು ಕಾದು ನೋಡಬೇಕಿದೆ.