ಬೆಂಗಳೂರು: ಬೆಂಗಳೂರಿನಲ್ಲಿ ಸ್ಟಾರ್ಟ್ ಅಪ್ ಕಂಪೆನಿ ಹೊಂದಿದ್ದ ಸಿಇಒ ಸುಚನಾ ಸೇಠ್(39ವ) ತನ್ನ ನಾಲ್ಕು ವರ್ಷದ ಮುದ್ದಾದ ಮಗು ಚಿನ್ಮಯ್ ನನ್ನು ಹತ್ಯೆ ಮಾಡಿರುವ ಪ್ರಕರಣದಲ್ಲಿ ಮಗುವಿನ ಮರಣೋತ್ತರ ಪರೀಕ್ಷೆ ಚಿತ್ರದುರ್ಗದ ಹಿರಿಯೂರಿನಲ್ಲಿ ಮುಗಿದು ಬೆಂಗಳೂರಿಗೆ ಇಂದು (ಜ. 10) ಬುಧವಾರ ಕಳುಹಿಸಲಾಗುತ್ತಿದೆ.
ಬೆಂಗಳೂರಿನಲ್ಲಿ ಸುಚನಾ ವಾಸಿಸುತ್ತಿದ್ದ ಅಪಾರ್ಟ್ ಮೆಂಟ್ ಗೆ ಮಗುವಿನ ಮೃತದೇಹ ಕರೆತರಲಾಗುತ್ತಿದ್ದು ಬಳಿಕ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಲಿದೆ. ಮಗುವಿನ ತಂದೆ ವೆಂಕಟರಮಣ ಇಂಡೋನೇಷಿಯಾದಿಂದ ಚಿತ್ರದುರ್ಗಕ್ಕೆ ಬಂದು ಪೊಲೀಸರೊಂದಿಗೆ ವಿಚಾರಣೆಗೆ ಸಹಕರಿಸಿದ್ದು ಇಂದು ಬೆಂಗಳೂರಿನಲ್ಲಿ ಮಗುವಿನ ಅಂತ್ಯಸಂಸ್ಕಾರ ನಡೆಸಲಿದ್ದಾರೆ.
ಮಗುವಿನ ಮರಣೋತ್ತರ ಪರೀಕ್ಷೆ ಬಳಿಕ ಮಾತನಾಡಿದ ಕುಮಾರ ನಾಯ್ಕ್, 36 ಗಂಟೆಗಳ ಹಿಂದೆಯೇ ಮಗುವಿನ ಹತ್ಯೆಯಾಗಿದೆ. ಕೈಯಿಂದ ಕತ್ತು ಹಿಸುಕಿ ಹತ್ಯೆ ಮಾಡಿಲ್ಲ. ತಲೆ ದಿಂಬು ಅಥವಾ ಬೇರೆ ವಸ್ತು ಬಳಸಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಉಸಿರುಗಟ್ಟಿಸಿದ ಕಾರಣ ಮಗುವಿನ ಮುಖ, ಎದೆಭಾಗ ಊದಿಕೊಂಡಿದೆ. ಹೀಗಾಗಿ ಮಗುವಿನ ಮೂಗಿನಿಂದ ರಕ್ತಸ್ರಾವವಾಗಿದೆ ಎಂದಿದ್ದರು.