ಮೈಸೂರು: ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದ ಅಂಗವಾಗಿ ಸುತ್ತೂರು ಕ್ಷೇತ್ರದಲ್ಲಿ ಸತ್ಸಂಪ್ರದಾಯದಂತೆ ಸಾಮೂಹಿಕ ವಿವಾಹ ನೆರವೇರಿದ್ದು ಈ ವೇಳೆ 118 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸುತ್ತೂರು ಪೀಠಾಧಿಪತಿ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ, ತಿರುವನಂತಪುರ ಶಾಂತಗಿರಿ ಆಶ್ರಮದ ಪ್ರಧಾನ ಕಾರ್ಯದರ್ಶಿ ಸ್ವಾಮಿ ಗುರುರತ್ನಂ ಜ್ಞಾನತಪಸ್ವಿ, ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಹರಗುರುಚರಮೂರ್ತಿಗಳ ದಿವ್ಯ ಸಾನಿಧ್ಯದಲ್ಲಿ 118 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ವೀರಶೈವ ಲಿಂಗಾಯತ 4, ಪರಿಶಿಷ್ಟ ಜಾತಿ 61, ಪರಿಶಿಷ್ಟ ಪಂಗಡ 26, ಹಿಂದುಳಿದ ವರ್ಗ 18, ಅಂತರಜಾತಿ 11 ಸೇರಿದಂತೆ ಒಟ್ಟು 118 ಜೋಡಿಗಳು ಸತಿಪತಿಗಳಾದರು. ಒಟ್ಟು 118ರ ಪೈಕಿ ತಮಿಳುನಾಡಿನ ಜೋಡಿಗಳು 23, ವಿಶೇಷ ಚೇತನರು 2 ಹಾಗೂ ಒಂದು ಜೋಡಿ ಮರು ಮದುವೆ ಆಗುವ ಮೂಲಕ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು.
ಈ ವೇಳೆ ವೇದಿಕೆಯಲ್ಲಿ ಉದ್ಯಮಿ ಮೂಲಚಂದ್, ಶಾಸಕ ರಾಮಮೂರ್ತಿ ಅಮೇರಿಕ ಕನ್ನಡಿಗರ ಒಕ್ಕೂಟದ ಅಧ್ಯಕ್ಷ ಡಾ.ಅಮರನಾಥ ಗೌಡ, ಯುಎಸ್‌ಎ ಮೇರಿಲ್ಯಾಂಡ್ ನ ವಿ. ವೀರಪ್ಪನ್, ಅಮೇರಿಕಾದ ವಾಷಿಂಗ್ಟನ್ ನ ಶಿವಾನಂದ್, ಕೆಪಿಎಸ್ಸಿ ಸದಸ್ಯ ಪ್ರಭುದೇವ ಉಪಸ್ಥಿತರಿದ್ದರು.
2000 ರಿಂದ 2023ರವರಗೆ ಸುತ್ತೂರು ಕ್ಷೇತ್ರದಲ್ಲಿ ಜರುಗಿರುವ ಸಾಮೂಹಿಕ ವಿವಾಹದಲ್ಲಿ 3076 ಜೋಡಿಗಳು ಸತಿಪತಿಗಳಾಗಿದ್ದು, ಪ್ರತಿ ತಿಂಗಳು ಮಾಸಿಕ ವಿವಾಹ ಕಾರ್ಯಕ್ರಮದಲ್ಲಿ 2009 ರಿಂದ 457 ಜೋಡಿಗಳು ಸತಿಪತಿಗಳಾಗಿದ್ದಾರೆ. ಒಟ್ಟಾರೆ ಶ್ರೀ ಸುತ್ತೂರು ಕ್ಷೇತ್ರದಲ್ಲಿ ಇದುವರೆಗೆ ಒಟ್ಟು 3533 ಜೋಡಿಗಳು ವಿವಾಹವಾಗಿದ್ದಾರೆ.