ಮಂಗಳೂರು: ಮಕ್ಕಳಲ್ಲಿ ಕೃಷಿಯ ಜ್ಞಾನ ಬೆಳೆಸುವ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಯೊಂದು ತನ್ನ ಆಟದ ಮೈದಾನದಲ್ಲೇ ಭತ್ತದ ಕೃಷಿ ಮಾಡಿ ಸೈ ಎನಿಸಿಕೊಂಡಿದೆ.
ಮಳೆ ನೀರು ನಿಲ್ಲುತ್ತಿದ್ದ ಆಟದ ಮೈದಾನವನ್ನು ಹಸನು ಮಾಡಿ ಮಕ್ಕಳ ಮೂಲಕವೇ ಭತ್ತದ ನೇಜಿ ಮಾಡಿಸಿ ಯಶಸ್ವಿಯಾಗಿ ಭತ್ತದ ಬೆಳೆ ಬೆಳೆದಿದೆ. ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆ ಈ ವಿನೂತನ ಪ್ರಯೋಗ ಮಾಡಿದ್ದು, ಮಕ್ಕಳಿಗೆ ಅಕ್ಕಿ ಉತ್ಪಾಧನೆ ಹೇಗೆ ಆಗುತ್ತದೆ ಎಂಬ ಬಗ್ಗೆ ಪ್ರಾಯೋಗಿಕ ಪಾಠ ಮಾಡಿದೆ.
ಜುಲೈ ತಿಂಗಳಲ್ಲಿ ನಾಟಿ ಮಾಡಿದ್ದ ಭತ್ತ ಪೈರು ಬೆಳೆದು ಫಲ ನೀಡಿದ್ದು ಇದೀಗ ಕಟಾವು ಮಾಡಲಾಗಿದೆ. ಈ ಮೂಲಕ ಆರಂಭದಲ್ಲಿ ಗದ್ದೆ ಹಸನು ಮಾಡುವುದರಿಂದ ಮೊದಲ್ಗೊಂಡು, ನಾಟಿ ಕಾರ್ಯ, ಪೈರಿನ ರಕ್ಷಣೆ ಹಾಗೂ ಕಟಾವು ಮತ್ತು ಭತ್ತದಿಂದ ಅಕ್ಕಿಯನ್ನು ಬೇರ್ಪಡಿಸುವ ವಿಧಾನದ ಬಗ್ಗೆ ಮಕ್ಕಳಿಗೆ ಪರಿಚಯ ಮಾಡಿಸಲಾಗಿದೆ.
ಸ್ನೇಹ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರ ಜೊತೆಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸದಸ್ಯೆಯರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ಅವರು ಈ ಯೋಜನೆಯನ್ನು ರೂಪಿಸಿದ್ದು, ಶಾಲಾ ಮುಖ್ಯ ಶಿಕ್ಷಕಿ ಜಯಲಕ್ಷ್ಮೀ ದಾಮ್ಲೆ ಅವರು ಈ ಕಾರ್ಯವನ್ನು ಜಾರಿಗೆ ತಂದಿದ್ದರು.
ಇದೀಗ ಮಕ್ಕಳಿಗೆ ಪರಿಪೂರ್ಣ ಕೃಷಿ ಪಾಠ ಮಾಡಿದ ಸಾರ್ಥಕತೆ ಲಭಿಸಿದ್ದು, ಇದಕ್ಕೆ ಸಹಕರಿಸಿದ ಎಲ್ಲರಿಗೂ ಸ್ನೇಹ ಶಾಲೆಯಿಂದ ದನ್ಯವಾದ ಸಮರ್ಪಿಸಲಾಗಿದೆ. ಭಾಗವಹಿಸಿದ ಎಲ್ಲರಿಗೂ ಹೊಸ ಅಕ್ಕಿಯ ಊಟವನ್ನು ವಿತರಿಸಿ ಹೊಸ ಬೆಳೆಯ ಸಂಭ್ರಮವನ್ನು ಆಚರಿಸಿಕೊಂಡಿದ್ದಾರೆ.