ತಿರುವನಂತಪುರಂ: ವಯನಾಡು ಜಿಲ್ಲೆಯ ಸಂಭವಿಸಿದ ಭೀಕರ ಭೂಕುಸಿತದಿಂದಾಗಿ ಮೃತಪಟ್ಟವರ ಸಂಖ್ಯೆ 254ಕ್ಕೆ ತಲುಪಿದೆ. ನೂರಾರು ಮಂದಿ ಇನ್ನೂ ನಾಪತ್ತೆಯಾಗಿದ್ದು, ಮೂರನೇ ದಿನದ ಕಾರ್ಯಾಚರಣೆ ಆರಂಭವಾಗಿದೆ.
ದುರಂತ ಪೀಡಿತ ಚುರಲ್‌ಮಲದಲ್ಲಿ ಸೇನೆ ನಿರ್ಮಿಸುತ್ತಿರುವ ತಾತ್ಕಾಲಿಕ ಬೈಲಿ ಸೇತುವೆ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇದು ಪೂರ್ಣಗೊಂಡ ಬಳಿಕ ಕಾರ್ಯಾಚರಣೆಗೆ ಇನ್ನಷ್ಟು ವೇಗ ದೊರೆಯಲಿದೆ.
ಸೇನಾ ಸಿಬ್ಬಂದಿ ಜತೆಗೆ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಸಿಬ್ಬಂದಿ, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಮತ್ತು ಸ್ಥಳೀಯರು ಕಾರ್ಯಾಚರಣೆಗೆ ಕೈ ಜೋಡಿಸಿದ್ದು, ಅವಶೇಷಗಳಡಿ ಸಿಲುಕಿರುವ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸುತ್ತಿದ್ದಾರೆ. ಜತೆಗೆ ಕಲ್ಲು, ಮಣ್ಣು, ಕೆಸರಿನಡಿ ಹುಡುಗಿರುವ ಶವಗಳನ್ನು ನಿರಂತರ ಕಾರ್ಯಾಚರಣೆ ಮೂಲಕ ಹೊರತೆಗೆಯುತ್ತಿದ್ದಾರೆ.
ಪ್ರವಾಹದ ತೀವ್ರತೆಗೆ ಚುರಲ್‌ಮಲದಲ್ಲಿನ ಸೇತುವೆ ಕೊಚ್ಚಿ ಹೋಗಿದ್ದು, ಅತೀ ಹೆಚ್ಚು ದುರಂತಕ್ಕೊಳಗಾದ ಮುಂಡಕೈ ಭಾಗದೊಂಡಿಗೆ ಸಂಪರ್ಕ ಕಡಿತಗೊಂಡಿದೆ. ಇದು ಕೂಡ ಕಾರ್ಯಾಚರಣೆಗೆ ತೊಡಕಾಗಿ ಪರಿಣಮಿಸಿದೆ. ಹೀಗಾಗಿ ಸೇನಾ ಪಡೆ ಎರಡೂ ಗ್ರಾಮಗಳನ್ನು ಸಂಪರ್ಕಿಸಲು ತಾತ್ಕಾಲಿಕ ಬೈಲಿ ಸೇತುವೆ ನಿರ್ಮಿಸುತ್ತಿದೆ.
ಸೇತುವೆಗೆ ಅಗತ್ಯವಾದ ಸಾಮಗ್ರಿಗಳನ್ನು ಬುಧವಾರ ಕಣ್ಣೂರು ವಿಮಾನ ನಿಲ್ದಾಣಕ್ಕೆ ತಂದು ಅಲ್ಲಿಂದ 18 ಲಾರಿಗಳ ಮೂಲಕ ಸ್ಥಳಕ್ಕೆ ತಲುಪಿಸಲಾಗಿತ್ತು. ಸೇತುವೆ ನಿರ್ಮಾಣಕ್ಕೆ ಸೇನಾ ಸಿಬ್ಬಂದಿ ನಿನ್ನೆಯಿಂದ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ರಾತ್ರಿ ಇಡೀ ಇದರ ಕಾರ್ಯಾಚರಣೆ ನಡೆದಿದ್ದು, ಇದೀಗ ಅಂತಿಮ ಹಂತಕ್ಕೆ ತಲುಪಿದೆ.
ಭಾರಿ ತೂಕದ ಕಬ್ಬಿಣದ ಬೀಮ್ ಬಳಸಿ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ನದಿಯಲ್ಲಿ ಫ್ಲಾಟ್‌ಫಾರ್ಮ್ ನಿರ್ಮಿಸಿ ಸೇತುವೆಯನ್ನು ಇನ್ನಷ್ಟು ದೃಢವಾಗಿಸಲು ಸೇನೆ ಶ್ರಮಿಸುತ್ತಿದೆ. ಮಧ್ಯಾಹ್ನದ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಸಾಮಾನ್ಯವಾಗಿ 5-6 ಗಂಟೆಗಳಲ್ಲಿ ಈ ರೀತಿಯ ಸೇತುವೆ ಸಿದ್ಧವಾಗುತ್ತದೆ.
ಮೂರನೆ ದಿನ ಕಾರ್ಯಾಚರಣೆಯನ್ನು ಸೇನೆ ಇಂದು ಬೆಳಿಗ್ಗೆ ಆರಂಭಿಸಿದೆ. ಮುಂಡಕೈ ಗ್ರಾಮಕ್ಕೆ ಸೇನಾ ಸಿಬ್ಬಂದಿ ತೆರಳಿದ್ದು ಇವರ ಜತೆಗೆ ತರಬೇತಿ ಪಡೆದ ಶ್ವಾನ ದಳವೂ ಇದೆ. ರಕ್ಷಣಾ ಕಾರ್ಯಾಚರಣೆಗೆ ಸುಮಾರು 1,167 ಮಂದಿಯನ್ನು ನಿಯೋಜಿಸಲಾಗಿದೆ. ಸುಮಾರು 240 ಮಂದಿ ನಾಪತ್ತೆಯಾಗಿದ್ದು, ಅವರ ರಕ್ಷಣೆಗೆ ಆದ್ಯತೆ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.