ಸ್ವಚ್ಛವಾಹಿನಿ ಮಹಿಳಾ ಚಾಲಕರಿಗೆ ಪರವಾನಗಿ ವಿತರಿಸಿದ ಸಚಿವ ಡಾ.ಹೆಚ್.ಸಿ.ಮಹದೇವಪ್ಪ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಮೈಸೂರು,ಸೆಪ್ಟಂಬರ್,13,2024 (www.justkannada.in): ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಗ್ರಾಮ ಪಂಚಾಯಿತಿಗಳಲ್ಲಿ ಕಸ ಸಂಗ್ರಹಿಸಿ ಸ್ವಚ್ಛವಾಹಿನಿ ಮೂಲಕ ವಿಲೇವಾರಿ ಮಾಡುವ ಸ್ವಸಹಾಯ ಸಂಘದ ಮಹಿಳಾ ಸದಸ್ಯರಿಗೆ ವಾಹನ ಪರವಾನಗಿಯನ್ನು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ಸಾಂಕೇತಿಕವಾಗಿ ವಿತರಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ವಿತರಿಸಿದ ಬಳಿಕ ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ,  ಗ್ರಾಮ ಪಂಚಾಯಿತಿಗಳಲ್ಲಿ 176 ಮಹಿಳೆಯರು ವಾಹನ ತರಬೇತಿ ಪಡೆದು, ಸ್ವಚ್ಚವಾಹಿನಿಗಳಲ್ಲಿ ಚಾಲಕ ವೃತ್ತಿ ಮಾಡುತ್ತಿರುವುದು ಸಂತೋಷದ ವಿಚಾರ. ಮಹಿಳಾ ಸಬಲೀಕರಣಕ್ಕೆ ಇದು ಉತ್ತೇಜನೆ ನೀಡಲಿದ್ದು, ಸ್ವಾಭಿಮಾನದಿಂದ ಬದುಕಲು ನೆರವಾಗಲಿದೆ ಎಂದು ಹೇಳಿದರು.

ಸ್ವಚ್ಛವಾಹಿನಿಯಲ್ಲಿ ಕೆಲಸ ಮಾಡುತ್ತೇವೆಂದು ಹಿಂಜರಿಯಬಾರದು. ಧರ್ಮ, ಜಾತಿ ಆಧಾರದಲ್ಲಿ ಕೀಳು ಅಭಿರುಚಿಯುಳ್ಳ ಜನರು ಅಣುಕಿಸುತ್ತಾರೆ. ಅದಕ್ಕೆಲ್ಲ ಧೃತಿಗೆಡದೆ ಆತ್ಮವಿಶ್ವಾಸದಿಂದ ಮನಸಾಕ್ಷಿ ಮೆಚ್ಚುವಂತೆ ಕೆಲಸ ಮಾಡಬೇಕು. ಇದು ಒಂದು ಉದ್ಯೋಗವಾಗಿ ಪರಿಗಣಿಸಿ ಎಂದು ಕಿವಿಮಾತು ನೀಡಿದರು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮೀಣ ಮಹಿಳೆಯರಿಗೆ ಹೆಚ್ಚು ಕೌಶಲ್ಯಾಧಾರಿತ ತರಬೇತಿ ನೀಡುವ ಮೂಲಕ ಅವರಿಗೆ ಹೆಚ್ಚು ಉದ್ಯೋಗವಕಾಶ ಕಲ್ಪಿಸಲು ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಇದೇ ವೇಳೆ ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ಗ್ರಾಮಪಂಚಾಯಿತಿ ನೌಕರರಿಗೆ ಸಹಾಯಧನದ ಚೆಕ್ ವಿತರಿಸಿ, ಹಸು ಖರೀದಿಸಿ ಹೈನುಗಾರಿಕೆ ಮಾಡುವ ಮೂಲಕ ಜೀವನ ಕಟ್ಟಿಕೊಳ್ಳಬೇಕು. ಈ ಹಣವನ್ನು ಅನವಶ್ಯಕವಾಗಿ ಖರ್ಚು ಮಾಡಬಾರದು ಎಂದು ಸಲಹೆ ನೀಡಿದರು.

ಶಿಕ್ಷಣ ಫೌಂಡೇಶನ್ ವತಿಯಿಂದ ನೀಡಿದ ಟ್ಯಾಬ್ ಹಾಗೂ ಲ್ಯಾಪ್‌ಟಾಪ್ ಗಳನ್ನು ಗ್ರಂಥಾಲಯ (ಅರಿವು ಕೇಂದ್ರ)ಗಳಿಗೆ ನೀಡಿ, ಪರಿಶಿಷ್ಟ ವರ್ಗದವರು ಹಾಗೂ ಹಿಂದುಳಿದ ವರ್ಗದವರು ಹೆಚ್ಚು ವಾಸಿಸುವ ಗ್ರಾಮಗಳಲ್ಲಿ ಸುಸಜ್ಜಿತ ಗ್ರಂಥಾಲಯ ತೆರೆಯಲು ಕ್ರಮ ವಹಿಸಿ ಎಂದು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಕೆ.ಎಂ.ಗಾಯಿತ್ರಿ , ಉಪ ಕಾರ್ಯದರ್ಶಿ ಸವಿತಾ, ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ ಸೇರಿದಂತೆ ಮುಂತಾದ ಅಧಿಕಾರಿಗಳು ಹಾಜರಿದ್ದರು.

Key words: Minister, Dr. HC Mahadevappa, license,  Swachhavahini, women drivers

Font Awesome Icons

Leave a Reply

Your email address will not be published. Required fields are marked *