ಚಾಮರಾಜನಗರ: ಜಿಲ್ಲೆಯ ಹನೂರು ತಾಲ್ಲೂಕಿನ ಒಡೆಯರಪಾಳ್ಯ ವ್ಯಾಪ್ತಿಯಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಸಮೀಪದ ಬಿ.ಜಿ.ದೊಡ್ಡಿ ಗ್ರಾಮದಲ್ಲಿ ಚಿರತೆ ದಾಳಿಗೆ ಎರಡು ಕರುಗಳು ಬಲಿಯಾಗಿವೆ.
ಗ್ರಾಮದ ನಿವಾಸಿ ಸಿದ್ದಚಾರಿ ಎಂಬುವರಿಗೆ ಸೇರಿದ ಕರುಗಳನ್ನು ಜಮೀನಿನಲ್ಲಿ ಕಟ್ಟಲಾಗಿತ್ತು. ಈ ವೇಳೆ ಹೊಂಚು ಹಾಕಿ ಕುಳಿತಿದ್ದ ಚಿರತೆ ಕರುಗಳ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಚಿರತೆ ದಾಳಿ ಕುರಿತಂತೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಇತ್ತೀಚೆಗೆ ತಾಲ್ಲೂಕಿನ ಲೊಕ್ಕನಹಳ್ಳಿ ಹೋಬಳಿಯ ವಿವಿಧೆಡೆ ಚಿರತೆ ದಾಳಿ ಪ್ರಕರಣಗಳು ಹೆಚ್ಚಾಗುತ್ತಿವೆ. ರೈತರು ತಮ್ಮ ಜಾನುವಾರು ಹಾಗೂ ಕುರಿಗಳನ್ನು ಹೊಲದಲ್ಲಿ ಮೇಯಿಸುವುದೇ ಕಷ್ಟವಾಗಿದೆ. ಯಾವಾಗ ಚಿರತೆಗಳು ದಾಳಿ ನಡೆಸುತ್ತಾವೋ ಎಂಬ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಒಂದು ವಾರದ ಅಂತರದಲ್ಲಿ ಎರಡು ಮೇಕೆ ಸೇರಿ ಎರಡು ಹಸುವಿನ ಕರುವನ್ನು ಚಿರತೆಯ ಬಲಿ ಪಡೆದಿದ್ದುಈ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಸೆರೆ ಹಿಡಿಯಬೇಕು. ಮೇಕೆ ಹಾಗೂ ಹಸುವಿನ ಕರುಗಳನ್ನು ಕಳೆದುಕೊಂಡ ಮಾಲೀಕರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.