ನಂಜನಗೂಡು: ಹಲ್ಲರೆ ಪ್ರಕರಣವನ್ನು ಖಂಡಿಸಿ ನಂಜನಗೂಡು ನಗರದ ಮಿನಿವಿಧಾನಸೌಧದ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಂಜನಗೂಡು ತಾಲ್ಲೂಕು ದಲಿತ ಸಂಘಟನೆಗಳ ಒಕ್ಕೂಟ ಮತ್ತು ತಾಲ್ಲೂಕಿನ ವಿವಿಧ ಮುಖಂಡರುಗಳು ಭಾಗವಹಿಸಿ, ಎರಡು ಕೋಮುಗಳ ಸಂಘರ್ಷವನ್ನು ಖಂಡಿಸುವ ಮೂಲಕ ಬೃಹತ್ ಪ್ರತಿಭಟನೆ ನಡೆಸಿದರು.
ಅಂಬೇಡ್ಕರ್ ನಾಮಫಲಕ ಅಳವಡಿಸುವ ವಿಚಾರಕ್ಕೆ ಎರಡು ಕೋಮುಗಳ ನಡುವೆ ನಡೆದಿರುವ ಘರ್ಷಣೆಗೆ ಪೊಲೀಸ್ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೇ ನೇರ ಹೊಣೆ ಗ್ರಾಮದ ದಲಿತರ ಮನೆಗಳಿಗೆ ಕಲ್ಲುತೂರಾಟ ನಡೆಸಿ, ದಾಂಧಲೆ ನಡೆಸಿರುವುದು ಅಕ್ಷಮ್ಯ ಅಪರಾಧ ಎಂದು ಖಂಡಿಸಿ ಬೃಹತ್ ಮಟ್ಟದಲ್ಲಿ ಜನಸ್ತೋಮ ಸೇರಿ ಪ್ರತಿಭಟಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹೇಶ್ ಸರ್ಕಾರದ ಕಾನೂನು ಮತ್ತು ನಿಯಮಾವಳಿಗಳನ್ನು ಅರಿಯದೆ ಅವೈಜ್ಞಾನಿಕ ನಿರ್ಣಯ ಮಾಡಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ಕೋಮು ಸಂಘರ್ಷವನ್ನು ತಡೆಯುವಲ್ಲಿ ವಿಫಲರಾಗಿರುವ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುನೀಲ್ ಕುಮಾರ್ ಇವರನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಮತ್ತು ತಾಲ್ಲೂಕು ಆಡಳಿತದ ವೈಫಲ್ಯವೇ ಕಾರಣವಾಗಿದೆ. ಎರಡು ಕೋಮುಗಳ ಸಂಘರ್ಷಕ್ಕೆ ಪೊಲೀಸ್ ಇಲಾಖೆಯ ಇನ್ಸ್ಪೆಕ್ಟರ್ ಮತ್ತು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಯೇ ಮುಖ್ಯ ಕಾರಣ. ಪರಿಶಿಷ್ಟ ಜಾತಿಯ ಬೀದಿಗೆ ನುಗ್ಗಿ ಅಮಾಯಕರ ಮೇಲೆ ದೌರ್ಜನ್ಯ ಮಾಡಿರುವ ಮತ್ತು ಅಂಬೇಡ್ಕರ್ ಅವರ ನಾಮಫಲಕ ಅಳವಡಿಸುವಾಗ ವಿರೋಧ ವ್ಯಕ್ತಪಡಿಸಿ ಘಟನೆಗೆ ಕಾರಣರಾಗಿರುವ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಹಾಗೂ ಪರಿಶಿಷ್ಟ ಜಾತಿಯ ಜನರಿಗೆ ಆಸ್ತಿಪಾಸ್ತಿಗಳನ್ನು ನಷ್ಟ ಮಾಡಿರುವವರನ್ನು ಗುರುತಿಸಿ ತಕ್ಷಣವೇ ಪರಿಹಾರ ನೀಡಬೇಕು ಮತ್ತು ಅಮಾಯಕರ ಮೇಲೆ ದಾಖಲಾಗಿರುವ ಸುಳ್ಳು ಪ್ರಕರಣವನ್ನು ವಜಾ ಮಾಡಬೇಕು ಎಂದು ಸಂಘಟಕರು ಪಟ್ಟು ಹಿಡಿದಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಅಪಾರ ಜಿಲ್ಲಾಧಿಕಾರಿ ಲೋಕನಾಥ್ ಉಪ ಪೋಲೀಸ ವರಿಷ್ಠಾಧಿಕಾರಿ ನಂದಿನಿ, ಭೇಟಿ ನೀಡಿ ಮನವಿ ಪತ್ರವನ್ನು ಸ್ವೀಕರಿಸಿ ಇನ್ನು ಮೂರು ದಿನಗಳ ಒಳಗಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಈ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ. ಪ್ರತಿಭಟನೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರು ಭಾಗವಹಿಸಿದ್ದರು . ಯಾವುದೇ ಅಹಿತಕರ ಘಟನೆಗಳು ನಡೆದಂತೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.