ನವದೆಹಲಿ: ಹೃದಯಾಘಾತಕ್ಕೆ ಪತಿ ಬಲಿಯಾಗಿದ್ದು, ಪತಿಯ ಸಾವಿನಿಂದ ಆಘಾತಗೊಂಡು ಪತ್ನಿ ಕೂಡ ಕಟ್ಟಡದಿಂದ ಜಿಗಿದು ಸಾವನ್ನಪ್ಪಿದ ಘಟನೆ ದೆಹಲಿಯಲ್ಲಿ ನಡೆದಿದೆ.
ಅಭಿಷೇಕ್ ಅಹ್ಲುವಾಲಿ(25ವರ್ಷ) ಹೃದಯಾಘಾತದಿಂದ ಮೃತಪಟ್ಟ ವಿವಾಹಿತ. ಈತ ಸಾವನಪ್ಪಿದ 24 ಗಂಟೆಗಳ ಬಳಿಕ ಪತ್ನಿ ಅಂಜಲಿ, ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ನವಜೋಡಿ ಕಳೆದ ವರ್ಷ ನವೆಂಬರ್ 30 ರಂದು ವಿವಾಹವಾಗಿದ್ದರು. ಸೋಮವಾರ ಇಬ್ಬರೂ ದೆಹಲಿ ಮೃಗಾಲಯಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅಭಿಷೇಕ್ಗೆ ಎದೆನೋವು ಕಾಣಿಸಿಕೊಂಡಿತು. ಅಂಜಲಿ ತನ್ನ ಸ್ನೇಹಿತರನ್ನು ಕರೆದು ಪತಿಯನ್ನು ಗುರು ತೇಗ್ ಬಹದ್ದೂರ್ ಆಸ್ಪತ್ರೆಗೆ ಸೇರಿಸಿದರು. ನಂತರ ಸಫ್ದರ್ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಬಳಿಕ ಅಭಿಷೇಕ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಸಾವಿಗೆ ಹೃದಯಾಘಾತವೇ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ. ಪತಿಯ ಮರಣದ ಆಘಾತ ಸಹಿಸಲಾಗದೆ ಅಂಜಲಿ ಏಳನೇ ಮಹಡಿಯ ಬಾಲ್ಕನಿಗೆ ಧಾವಿಸಿ ಜಿಗಿದಿದ್ದಾರೆ. ಗಂಭೀರ ಗಾಯಗೊಂಡ ಆಕೆಯನ್ನು ವೈಶಾಲಿಯ ಮ್ಯಾಕ್ಸ್ ಆಸ್ಪತ್ರೆಗೆ ಸಾಗಿಸಲಾಯಿತು. ಇಂದು ಮುಂಜಾನೆ ಸಾವನಪ್ಪಿದ್ದಾಳೆ.